ADVERTISEMENT

ನಿಯಮ ಪಾಲಿಸಲು ಚಾಲಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 4:40 IST
Last Updated 25 ಜೂನ್ 2013, 4:40 IST

ಬಳ್ಳಾರಿ: ಪೊಲೀಸರು ಕೇವಲ ಅಂಕಿ- ಅಂಶಗಳಿಗಾಗಿ ಪ್ರಕರಣ ದಾಖಲಿಸುತ್ತಾರೆ ಎಂಬ ವದಂತಿ ಇದೆ. ಆದರೆ, ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು ಎಂದು ಡಿವೈಎಸ್‌ಪಿ ಟಿ.ಎಸ್. ಮುರುಗಣ್ಣನವರ್ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಬಳ್ಳಾರಿ ಸಂಚಾರ ಪೊಲೀಸ್ ಠಾಣೆಯು ಆಟೋ, ಟ್ರಾಕ್ಸ್, ಟಂಟಂ ಮತ್ತು ಲಾರಿ ಚಾಲಕರಿಗಾಗಿ ಸಂಚಾರ ನಿಯಮ ಪಾಲನೆಯ ಕುರಿತು ಏರ್ಪಡಿಸಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ವಿವಿಧೆಡೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅನಧಿಕೃತ ಆಟೋ ನಿಲ್ದಾಣಗಳನ್ನು ತೆರವುಗೊಳಿಸಲಾಗಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಆಟೋ ನಿಲ್ದಾಣಗಳ ಸಮಸ್ಯೆ ಇದೆ. ಸೂಕ್ತ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತಿರುವ ಸ್ಥಳಗಳ ಪರಿಶೀಲನೆ ಮಾಡಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಆಟೋ ನಿಲ್ದಾಣಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.

ಸಾರ್ವಜನಿಕರೊಂದಿಗೆ ಆಟೋ, ಟ್ರಾಕ್ಸ್ ಚಾಲಕರು ಸಂಯಮ ಮತ್ತು ಸಹನೆಯಿಂದ ವರ್ತಿಸಬೇಕು. ಎಲ್ಲರೂ ಸಂಚಾರ ನಿಯಮ ಪಾಲಿಸಿದರೆ ಅದರಿಂದ ಅಮೂಲ್ಯ ಜೀವ ಮತ್ತು ಆಸ್ತಿಯ ರಕ್ಷಣೆಯಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭ ಚಾಲಕರ ಅಹವಾಲು ಸ್ವೀಕರಿಸಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಗರ ಡಿವೈಎಸ್‌ಪಿ ಟಿ.ಎಸ್. ಮುರುಗಣ್ಣನವರ್ ಭರವಸೆ ನೀಡಿದರು.

ನಗರದಲ್ಲಿ ಸಂಚರಿಸುವ ಟ್ರಾಕ್ಸ್, ಗೂಡ್ಸ್ ಆಟೋ, ಮಿನಿ ಬಸ್, ಲಾರಿ, ಬಸ್‌ಗಳ ಚಾಲಕರುಗಳಿಗೆ ಸಂಚಾರ ಸುವ್ಯವಸ್ಥೆ ಬಗ್ಗೆ ಹಾಗೂ ಮುಂಜಾಗ್ರತೆ ಬಗ್ಗೆ ನಗರ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ಮಾಹಿತಿ ನೀಡಿದರು.

ಸಂಚಾರ ಠಾಣೆ ಪಿಎಸ್‌ಐ ಎಂ.ಆರ್.ಎಂ. ತಹಶೀಲ್ದಾರ್ ಹಾಗೂ ಎಎಸ್‌ಐ  ಪಿ.ಹುಸೇನ್ ಸಾಬ್, ಆಟೋ ಚಾಲಕರ ಸಂಘಗಳ ಅಧ್ಯಕ್ಷ ತಾಯಣ್ಣ, ಜಾನ್ ಬಾಸ್ಕೋ, ಹುಂಡೇಕರ್ ರಮೇಶ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಭಾಸ್ಕರ್ ರೆಡ್ಡಿ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ವಿವಿಧ ವಾಹನಗಳ ಮಾಲೀಕರು, ಚಾಲಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.