ADVERTISEMENT

ನಿಲ್ದಾಣ ಹೊಸದಷ್ಟೇ, ಸೌಕರ್ಯ ಮಾತ್ರ ಇಲ್ಲ

₹50 ಲಕ್ಷ ಪ್ರತಿ ಬಸ್‌ ನಿಲ್ದಾಣದ ನಿರ್ಮಾಣ ವೆಚ್ಚ: ಪ್ರಯಾಣಿಕರಿಗೆ ಅನಾನುಕೂಲ

ಕೆ.ನರಸಿಂಹ ಮೂರ್ತಿ
Published 28 ಮೇ 2018, 10:03 IST
Last Updated 28 ಮೇ 2018, 10:03 IST
ನಿಲ್ದಾಣ ಹೊಸದಷ್ಟೇ, ಸೌಕರ್ಯ ಮಾತ್ರ ಇಲ್ಲ
ನಿಲ್ದಾಣ ಹೊಸದಷ್ಟೇ, ಸೌಕರ್ಯ ಮಾತ್ರ ಇಲ್ಲ   

ಸಂಡೂರು: ಈ ಬಸ್‌ ನಿಲ್ದಾಣಗಳು ಹೊರನೋಟಕ್ಕೆ ಅತ್ಯಾಕರ್ಷಕವಾಗಿ ಕಾಣುತ್ತವೆ. ಕೆಂಪು ಮತ್ತು ಹಳದಿ ಬಣ್ಣದಲ್ಲಿ ಸಿಂಗಾರಗೊಂಡ ನಿಲ್ದಾಣಗಳಲ್ಲಿ ಸೌಕರ್ಯಗಳು ಮಾತ್ರ ಇಲ್ಲ. ನಾಲ್ಕು ವರ್ಷದ ಹಿಂದೆಯೇ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಿದ್ದರೂ ಪ್ರಯೋಜನವಿಲ್ಲದ ಪರಿಸ್ಥಿತಿ ಇದೆ.

ತಾಲ್ಲೂಕಿನ ಬಂಡ್ರಿ, ತಾರಾನಗರ ಮತ್ತು ಯಶವಂತನಗರದಲ್ಲಿ ಬಸ್‌ ನಿಲ್ದಾಣ ಬಹುತೇಕ ನಿರ್ಮಾಣಗೊಂಡಿದ್ದರೂ, ಪೂರ್ಣ ಪ್ರಮಾಣದ ಬಳಕೆ ಶುರುವಾಗಿಲ್ಲ.

ಸಂಡೂರಿನಿಂದ 8 ಕಿ.ಮೀ ದೂರದಲ್ಲಿರುವ ಯಶವಂತನಗರದಲ್ಲಿ ಕೆಲವು ತಿಂಗಳ ಹಿಂದೆ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ ‘ಶೌಚಾಲಯ ನಿರ್ಮಿಸದೇ ಉದ್ಘಾಟಿಸುವುದು ಸರಿಯಲ್ಲ’ ಎಂದು ಸ್ಥಳೀಯರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಶೌಚಾಲಯವನ್ನು ಎಲ್ಲಿ ನಿರ್ಮಿಸಬೇಕು ಎಂಬುದು ಸ್ಪಷ್ಟವಾಗದೇ ಇದ್ದುದೇ ಅದಕ್ಕೆ ಕಾರಣ. ಈಗಲೂ ಈ ವಿಷಯ ಅಂತಿಮಗೊಂಡಿಲ್ಲ. ಈ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ವ್ಯವಸ್ಥೆ ಇದೆ.

ADVERTISEMENT

ಈ ಗ್ರಾಮದಲ್ಲಿ ಪಾಲಿಟೆಕ್ನಿಕ್‌ ಕಾಲೇಜು ಕೂಡ ಇದ್ದು, ಇಲ್ಲಿಗೆ ನೂರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಾರೆ. ಆದರೆ, ನಿಲ್ದಾಣದಲ್ಲಿ ಸೌಕರ್ಯ ಮಾತ್ರ ಅವರ ಅನುಕೂಲಕ್ಕೆ ತಕ್ಕಂತೆ ಉನ್ನತೀಕರಣಗೊಂಡಿಲ್ಲ.

ತಾಲ್ಲೂಕು ಕೇಂದ್ರದಿಂದ 15.ಕಿ.ಮೀ ದೂರದಲ್ಲಿರುವ, ಚೋರನೂರು ಹೋಬಳಿ ವ್ಯಾಪ್ತಿಯಲ್ಲಿರುವ ಬಂಡ್ರಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲೇ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆದರೆ, ಅದೊಂದು ದೊಡ್ಡ ಹಜಾರದಂತೆ ಇದೆ. ಪ್ರಯಾಣಿಕರಿಗೆ ಯಾವ ಸೌಕರ್ಯವೂ ಇಲ್ಲ. ಹಳದಿ ಬಣ್ಣದ ಐದು ಪಿಲ್ಲರ್‌ಗಳು ಮತ್ತು ಗಾಢ ಕೆಂಪುಬಣ್ಣದ ಫಲಕದ ನಡುವೆ ‘ಬಂಡ್ರಿ ಬಸ್‌ ನಿಲ್ದಾಣ’ ಎಂದು ಬರೆದಿರುವುದನ್ನು ಬಿಟ್ಟರೆ ಬೇರೆ ಏನೂ ನಿಲ್ದಾಣದಲ್ಲಿ ಇಲ್ಲ. ಈ ನಿಲ್ದಾಣದೊಳಕ್ಕೆ ಬಸ್‌ಗಳು ಇನ್ನೂ ಬರುತ್ತಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಲ್ಲ ಜರುವಪ್ಪ, ‘ನಮ್ಮ ಹಳ್ಳಿಯಲ್ಲಿ ಹೊಸದಾಗಿ ಬಸ್‌ ನಿಲ್ದಾಣ ನಿರ್ಮಿಸುತ್ತಾರೆ ಎಂದು ತಿಳಿದು ಸಂತೋಷವಾಗಿತ್ತು. ಆದರೆ ಅರ್ಧಕ್ಕೆ ಕೆಲಸ ನಿಂತಿರುವುದು ನೋಡಿದರೆ ಬೇಸರವಾಗುತ್ತದೆ. ನಿರ್ಮಾಣ ಕಾರ್ಯದ ಗುತ್ತಿಗೆದಾರರನ್ನೂ ನೋಡಿಯೇ ಇಲ್ಲ’ ಎಂದರು.

ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ತಾರಾನಗರದ ನಿಲ್ದಾಣದ ಪರಿಸ್ಥಿತಿಯೂ ಇದೇ ಆಗಿದೆ. ಇಲ್ಲಿಯೂ ನಿಲ್ದಾಣದಲ್ಲಿ ಸೌಕರ್ಯಗಳಿಲ್ಲ.

ನಿಲ್ದಾಣವನ್ನು ಉತ್ತಮವಾಗಿ ಅಭಿವೃದ್ಧಿಪಡಿಸುವಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯ ವಹಿಸಿರುವ ಕುರಿತು ಯಶವಂತನಗರ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲೇ ಅಸಮಾಧಾನ ವ್ಯಕ್ತವಾಗಿತ್ತು.

‘ಬಂಡ್ರಿ ಮತ್ತು ತಾರಾನಗರದಲ್ಲಿ ಜನರ ಸಹಕಾರ ಉತ್ತಮವಾಗಿದೆ. ಆದರೆ, ಇಲ್ಲಿ ನಿಲ್ದಾಣ ಅಭಿವೃದ್ಧಿಪಡಿಸಲು ಗುತ್ತಿಗೆದಾರರು ಅಗತ್ಯ ಆಸಕ್ತಿ ತೋರಿಸಿಲ್ಲ. ಶೌಚಾಲಯ ಸ್ಥಳದ ವಿವಾದವಿರುವ ಯಶವಂತನಗರದಲ್ಲಿ ಹೆಚ್ಚಿನ ಉತ್ಸಾಹ ತೋರಿಸಿದ್ದಾರೆ’ ಎಂದು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರೊಟ್ಟಿ ಪ್ರಭು ಪ್ರತಿಕ್ರಿಯಿಸಿದರು.

**
ನಮ್ಮ ಗ್ರಾಮದಲ್ಲಿ ನಿಲ್ದಾಣ ನಿರ್ಮಾಣ ಕಾರ್ಯ ಅರ್ಧಕ್ಕೇ ನಿಂತಿದೆ. ಮತ್ತೆ ಎಂದಿಗೆ ಶುರುವಾಗುವುದೋ ಗೊತ್ತಿಲ್ಲ
ನಲ್ಲ ಜರುವಪ್ಪ, ಬಂಡ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.