ADVERTISEMENT

‘ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ’

ಮುದ್ರಣಕಾರರ ಸಭೆಯಲ್ಲಿ ಪಾಲಿಕೆ ಆಯುಕ್ತ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 9:35 IST
Last Updated 3 ಏಪ್ರಿಲ್ 2018, 9:35 IST

ಬಳ್ಳಾರಿ: ‘ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುದ್ರಣಕಾರರು ಸೇವೆ ಒದಗಿಸಬೇಕು. ಉಲ್ಲಂಘನೆ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ ಎಚ್ಚರಿಕೆ ನೀಡಿದರು.ನಗರದ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಮುದ್ರಣಕಾರರ ಸಭೆಯಲ್ಲಿ ಮಾತನಾಡಿದ ಅವರು, ‘ವ್ಯಕ್ತಿ, ಜಾತಿ, ಧರ್ಮ ನಿಂದನೆ ಮಾಡುವ ಹಾಗೂ ಕೋಮು ಸಾಮರಸ್ಯ ಕದಡುವ ಪ್ರಚೋದನಕಾರಿ ಕರಪತ್ರಗಳನ್ನು ಮುದ್ರಿಸಬಾರದು. ಕರಪತ್ರದ ಕೆಳಭಾಗದಲ್ಲಿ ಮುದ್ರಣಾಲಯದ ಹೆಸರು, ಮೊಬೈಲ್ ಸಂಖ್ಯೆ, ಮುದ್ರಿಸಿದ ಕರಪತ್ರಗಳ ನಿಖರ ಸಂಖ್ಯೆಯನ್ನು ನಮೂದಿಸಬೇಕು’ ಎಂದು ಸ್ಪಷ್ಟಪಡಿಸಿದರು.

‘ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟರು ಸೂಚಿಸಿದರೆ ಮಾತ್ರ ಕರಪತ್ರ ಅಥವಾ ಫ್ಲೆಕ್ಸ್‌, ಬ್ಯಾನರ್ ತಯಾರಿಸಬೇಕು. ಮುದ್ರಣ ಕೋರುವವರ ಹೆಸರು, ಮೊಬೈಲ್ ಫೋನ್‌ ಸಂಖ್ಯೆ, ಇಬ್ಬರು ಸಾಕ್ಷಿಗಳ ಸಹಿಯುಳ್ಳ ಕಾರ್ಯಾದೇಶ ಪಡೆಯುವುದು ಕಡ್ಡಾಯ. ನಂತರ ನಿಗದಿತ ನಮೂನೆಯಲ್ಲಿ ಸೂಕ್ತ ಮಾಹಿತಿಯೊಂದಿಗೆ ಘೋಷಣಾ ಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಬೇಕು’ ಎಂದರು.

‘ಮುದ್ರಣ ಸಂಸ್ಥೆಯ ಅಧಿಕೃತ ಬಿಲ್‌ ಮತ್ತು ರಸೀದಿಯನ್ನು ಮಾತ್ರ ಬಳಸಬೇಕು. ತಪಾಸಣೆ ಸಲುವಾಗಿ ಚುನಾವಣಾ ವೀಕ್ಷಕರು ಯಾವುದೇ ಸಂದರ್ಭದಲ್ಲಿ ಭೇಟಿ ಕೊಟ್ಟರೂ ಲೆಕ್ಕ ಪತ್ರಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ 06 ತಿಂಗಳು ಜೈಲು ಶಿಕ್ಷೆ ಹಾಗೂ ₹ 2 ಸಾವಿರ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಕ್ಷೇತ್ರದ ನೀತಿ ಸಂಹಿತೆ ಜಾರಿ ಅಧಿಕಾರಿ ಪಿ.ಜಿ.ಚಿದಾನಂದ ಹಾಗೂ ವಾರ್ತಾ ಮತ್ತು ಸಾರ್ವಜನಿಕಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು.

ADVERTISEMENT

**

ಮುದ್ರಣ ಕೋರುವವರ ಹೆಸರು, ಮೊಬೈಲ್ ಫೋನ್‌ ಸಂಖ್ಯೆ, ಇಬ್ಬರು ಸಾಕ್ಷಿಗಳ ಸಹಿಯುಳ್ಳ ಕಾರ್ಯಾದೇಶ ಪಡೆಯುವುದು ಕಡ್ಡಾಯ – 
ಬಿ.ಎಚ್.ನಾರಾಯಣಪ್ಪ, ಪಾಲಿಕೆ ಆಯುಕ್ತ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.