ADVERTISEMENT

`ನೀಲಕಂಠ' ರಕ್ಷಣೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 9:04 IST
Last Updated 10 ಜುಲೈ 2013, 9:04 IST

ಹಗರಿಬೊಮ್ಮನಹಳ್ಳಿ: ದಾಳಿಂಬೆ ಹಣ್ಣುಗಳನ್ನು ಪಕ್ಷಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಬೆಳೆಯ ಮೇಲೆ ಹೊದಿಸುವ ಬಲೆಯಲ್ಲಿ ಸಿಕ್ಕಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಪರೂ ಪದ ನೀಲಕಂಠ(ಇಂಡಿಯನ್ ರೋಲರ್) ಪಕ್ಷಿಯನ್ನು ರಕ್ಷಿಸಿದ ಘಟನೆ ತಾಲ್ಲೂಕಿನ ಬಾಚಿಗೊಂಡನ ಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಕಾಲೇಜು ವಿದ್ಯಾರ್ಥಿಗಳಾದ ಬಿ.ಮಾರುತಿ ಮತ್ತು ಎಚ್.ಮಲ್ಲೇಶ್ ಗ್ರಾಮದ ಹೊರವಲಯದಲ್ಲಿರುವ ದಾಳಿಂಬೆ ತೋಟದ ಬಲೆಯೊಂದರಲ್ಲಿ ಸಿಕ್ಕಿ ಬಿದ್ದು ತೀವ್ರವಾಗಿ ಗಾಯ ಗೊಂಡು ಚಡಪಡಿಸುತ್ತಿದ್ದ ನೀಲಕಂಠ ಪಕ್ಷಿಯ ಕುರಿತು ಗ್ರಾಮದ ಪಕ್ಷಿ ಪ್ರೇಮಿ ಹುರುಕಡ್ಲಿ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೆ ಸ್ಥಳಕ್ಕಾಗಮಿಸಿದ ಅವರು, ಬಲೆಯನ್ನು ಹರಿದು ಪಕ್ಷಿ ಯನ್ನು ರಕ್ಷಿಸಿದರು. ನಂತರ  ಗಾಯಕ್ಕೆ ಚಿಕಿತ್ಸೆ ನೀಡಿ ಕಾಡಿನಲ್ಲಿ ಬಿಟ್ಟು ಬರುವಂತೆ ವಿದ್ಯಾರ್ಥಿಗಳಾದ ಎಚ್. ಮಹೇಶ್ವರ ಮತ್ತು ಕೆ.ಶರಣ ಅವರಿಗೆ ಸೂಚಿಸಿದರು.

ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರು ತಮ್ಮ ಬೆಳೆಗಳನ್ನು ರಕ್ಷಿ ಸುವ ಹಿನ್ನಲೆಯಲ್ಲಿ ಬೆಳೆಗಳ ಮೇಲೆ ಹೊದೆಸುತ್ತಿರುವ ನಾನಾ ಬಲೆಗಳು ಪಕ್ಷಿಗಳ ಪಾಲಿಗೆ ಮಾರಣಾಂತಿಕ ವಾಗುತ್ತಿದೆ ಎಂದು ಹುರುಕಡ್ಲಿ ಶಿವ ಕುಮಾರ್  ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನಾದ್ಯಂತ ದಾಳಿಂಬೆ ಬೆಳೆಯುವ ರೈತರು ಹೆಚ್ಚಾಗುತ್ತಿದ್ದು, ಬೆಳೆಯನ್ನು ಪಕ್ಷಿಗಳಿಂದ ರಕ್ಷಿಸಲು ಬೆಳೆಗಾರರು ಬೆಳೆಗೆ ಹೊದಿಸುವ ಬಲೆಯಲ್ಲಿ ಗಿಳಿ, ರತ್ನಪಕ್ಷಿ, ಮಿಂಚುಳ್ಳಿ, ಚಿಟಗುಬ್ಬಿ ಹಾಗೂ ಗೂಬೆಯಂತಹ ಸಣ್ಣ ಪಕ್ಷಿಗಳು ಸಿಲುಕಿ ಸಾವನ್ನಪ್ಪು ತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಳೆಗಾರರಲ್ಲಿ ಪ್ರಕೃತಿ ಮತ್ತು ಪರಿಸರ ಪ್ರೀತಿಯನ್ನು ಹುಟ್ಟು ಹಾಕುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ದಾಳಿಂಬೆ ಬೆಳೆಗಾರರು ಬೆಳೆಗಳ ಮೇಲೆ ಬಲೆ ಹೊದಿಸುವ ಬದಲಾಗಿ ಪರ್ಯಾಯ ವ್ಯವಸ್ಥೆ ರೂಪಿಸಿ ಪಕ್ಷಿ ಸಂಕುಲದ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.