ADVERTISEMENT

ಪಟ್ಟಣ ಸ್ವಚ್ಛಗೊಳಿಸುವವರ ಅತಂತ್ರ ಬದುಕು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 11:20 IST
Last Updated 19 ಅಕ್ಟೋಬರ್ 2011, 11:20 IST
ಪಟ್ಟಣ ಸ್ವಚ್ಛಗೊಳಿಸುವವರ ಅತಂತ್ರ ಬದುಕು
ಪಟ್ಟಣ ಸ್ವಚ್ಛಗೊಳಿಸುವವರ ಅತಂತ್ರ ಬದುಕು   

ಕೂಡ್ಲಿಗಿ: ಸೂರ್ಯ ಮೂಡುವುದರೊಳಗೆ ಇಡೀ ಪಟ್ಟಣದ ರಸ್ತೆಗಳು ಪ್ರತಿದಿನವೂ ಸ್ವಚ್ಛಗೊಂಡಿರುತ್ತವೆ. ತಿಂದು ಬಿಸಾಕಿದ ಬಾಳೇಸಿಪ್ಪೆ, ಕೊಳೆತ ತರಕಾರಿ, ಹಣ್ಣುಗಳು, ಪ್ಲಾಸ್ಟಿಕ್ ಚೀಲಗಳು, ಕಸಕಡ್ದಿ, ದನಗಳು ಹಾಕಿದ ಸಗಣಿ, ಚರಂಡಿಗಳು ಎಲ್ಲವೂ ಪ್ರತಿದಿನವೂ ತಪ್ಪದೇ ಸ್ವಚ್ಛಗೊಳ್ಳಲೇಬೇಕು.

ಆದರೆ ಅದನ್ನು ಸ್ವಚ್ಛಗೊಳಿಸುವವರ ಬಗ್ಗೆ ಯಾರಿಗೂ ಲಕ್ಷ್ಯವಿರುವುದಿಲ್ಲ. ಎರಡು ದಿನ ಸ್ವಚ್ಛಗೊಳ್ಳದಿದ್ದರೆ ಇಡೀ ಪಟ್ಟಣ ಕಸ, ಕೊಳಚೆಯಿಂದ ವಾಸನೆ ಹೊಡೆಯುತ್ತದೆ. ಎಲ್ಲರೂ ಪಟ್ಟಣ ಪಂಚಾಯ್ತಿ ಮೇಲೆ ಹರಿಹಾಯತೊಡಗುತ್ತಾರೆ.

ಸೂರ್ಯೋದಯಕ್ಕಿಂತ ಮುಂಚೆಯೇ ಇವರ ಕಾರ್ಯ ಆರಂಭ. ದಿನನಿತ್ಯದ ಕಸವನ್ನೆಲ್ಲ ಸ್ವಚ್ಛಗೊಳಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಬದುಕು ಅತಂತ್ರವಾಗಿದೆ. ಪಟ್ಟಣದ ಸುಮಾರು 30 ಜನ ಪೌರ ಕಾರ್ಮಿಕರು ದಿನಗೂಲಿಗಳಾಗಿ ಕಳೆದ 15-20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
 
ಪಟ್ಟಣ ಪಂಚಾಯ್ತಿಯಲ್ಲಿನ ಒಟ್ಟು ಪೌರ ಕಾರ್ಮಿಕರು 40 ಜನ ಅದರಲ್ಲಿ 10 ಜನ ಮಾತ್ರ ಖಾಯಂಗೊಂಡಿದ್ದಾರೆ. ಉಳಿದ 30 ಜನ ತಮ್ಮ ಬದುಕೂ ಸ್ಥಿರಗೊಳ್ಳಬಹುದೆಂದು ಆಶಾಭಾವನೆಯಿಂದಲೇ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರಲ್ಲಿ ಬಿಲ್ ಕಲೆಕ್ಟರ್, ನೀರು ಬಿಡುವವರು, ಬೀದಿ ದೀಪ ಸಹಾಯಕರು, ಟ್ರ್ಯಾಕ್ಟರ್ ಚಾಲಕರು, ರಸ್ತೆಗಳನ್ನು, ಚರಂಡಿಗಳನ್ನು ಸ್ವಚ್ಛಗೊಳಿಸುವರು ಸೇರಿದ್ದಾರೆ. ಕೆಲಸ ಕಾಯಮಾತಿಗಾಗಿ ಸಾಕಷ್ಟು ಬಾರಿ ಹೋರಾಟ ಮಾಡಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದಿನಗೂಲಿ ನೌಕರ ಕೆ.ಪ್ರಭಾಕರ ಹೇಳುತ್ತಾರೆ.
 
ರಾಜ್ಯದಲ್ಲಿ ಪೌರ ಕಾರ್ಮಿಕರ 10,000 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 6,000 ಜನ ಈಗಾಗಲೇ ದಿನಗೂಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 4 ವರ್ಷಗಳ ಹಿಂದೆ ಉಚ್ಛ ನ್ಯಾಯಾಲಯದ ಆದೇಶದನ್ವಯ ರಾಜ್ಯದಲ್ಲಿ 2,080 ದಿನಗೂಲಿ ನೌಕರರನ್ನು ಕಾಯಮಾತಿಗೊಳಿಸಲಾಗಿದೆ. ಆದರೆ ಇನ್ನೂ ಸಾಕಷ್ಟು ನೌಕರರ ಬದುಕು ಅತಂತ್ರದಲ್ಲಿಯೇ ಇದೆ.

ಪಟ್ಟಣದಲ್ಲಿ 20 ವಾರ್ಡಗಳಿದ್ದು, ಈಗಾಗಲೇ ಜನಸಂಖ್ಯೆ 27,000 ದಾಟಿದೆ. ಪಟ್ಟಣ ಪಂಚಾಯ್ತಿಯು ಪುರಸಭೆಯಾಗುವ ಆದ್ಯತೆ ಪಟ್ಟಿಯಲ್ಲಿದೆ. ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಆದರೆ ಸಿಬ್ಬಂದಿಯ ಕೊರತೆಯಿದೆ. ಇರುವ ಸಿಬ್ಬಂದಿಯವರೇ ಪ್ರತಿದಿನ ಬಿಡುವಿಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ 5ಗಂ.ಯಿಂದ 9 ಗಂ.ವರೆಗೆ, ಮಧ್ಯಾಹ್ನ 2ರಿಂದ 5ರವರೆಗೆ ಇವರ ಸ್ವಚ್ಛತೆ ಕಾರ್ಯ. ಎಲ್ಲಿಯಾದರೂ ಕಾರ್ಯಕ್ರಮ, ಸಭೆ, ಸಮಾರಂಭಗಳಿದ್ದಲ್ಲಿ ಅಲ್ಲಿಯೂ ಸ್ವಚ್ಛಗೊಳಿಸುವ ಕಾರ್ಯ ಇವರ ಹೆಗಲಿಗೆ ಬೀಳುತ್ತದೆ.

`ಊರು ಸ್ವಚ್ಛ ಮಾಡೋ ಕೆಲ್ಸ ಪ್ರಾಮಾಣಿಕವಾಗಿ, ದಿನಾ ಕಷ್ಟಪಟ್ಟು ಮಾಡ್ತೀವಿ, ರಸ್ತೆ ಸ್ವಚ್ಛ ಆಗೇತೋ ಇಲ್ಲೋ ಅಂತ ನೋಡ್ತಾರ ಹೊರತು, ನೀವು ಹೆಂಗಿದೀರಿ, ನಿಮ್ ಜೀವನ ಹೆಂಗ ಅಂತ ಕೇಳೋರು ಯಾರೂ ಇಲ್ಲ ಸರ್~ ಎಂದು ದು:ಖದಿಂದ ಹೇಳುತ್ತಾರೆ ಪೌರ ಕಾರ್ಮಿಕ ಸಣ್ಣ ನಲ್ಲಪ್ಪ.

`ನಮಗ ಯಾವುದೇ ಸೌಲಭ್ಯ ಇಲ್ಲ, ಕೆಲಸ ಕಾಯಂ ಇಲ್ಲ, ಆದ್ರೂ ನಾವು ಮೈಮುರ್ದು ದುಡೀತೀವಿ, ನಮ್ ಬಗ್ಗೆ ನಾವ ಚಿಂತಿ ಮಾಡ್ಬೇಕು, ಯಾರ್ಗೇನ್ ಆಗಬೇಕಾಗೈತಿ?~ ಎಂದು ಭೈರಪ್ಪ ಪ್ರಶ್ನಿಸುತ್ತಾರೆ. ಉತ್ತರಿಸುವವರಾದರೂ ಯಾರು? ಇದೇ ರೀತಿ ಅಂಜಿನಪ್ಪ, ಎಚ್.ನಾಗಪ್ಪ, ದುರುಗಪ್ಪ, ಹನುಮಂತಪ್ಪ ಹೀಗೆ ಹಲವಾರು ಜನ ಪಟ್ಟಣ ದೈನಂದಿನ ಚಟುವಟಿಕೆಗಳಿಗೆ ತಡೆಯಾಗದಂತೆ ದುಡಿಯುತ್ತಲೇ ಇದ್ದಾರೆ. ಇವರ ಬದುಕು ಮಾತ್ರ ಇನ್ನೂ ಹಸನಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.