ADVERTISEMENT

ಪಾದಚಾರಿ ಮಾರ್ಗ ಹುಡುಕಿಕೊಡಿ ಪ್ಲೀಸ್...

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 5:10 IST
Last Updated 10 ಅಕ್ಟೋಬರ್ 2011, 5:10 IST

ಬಳ್ಳಾರಿ: ನಗರದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಪಾದಚಾರಿ ಮಾರ್ಗವನ್ನು ವ್ಯಾಪಾರಿ ಗಳು ಅತಿಕ್ರಮಿಸಿರುವುದರಿಂದ ಪಾದಚಾರಿಗಳು ಸರಾಗವಾಗಿ ಓಡಾಡಲು ಆಗದೆ, ತೀವ್ರ ತೊಂದರೆ ಎದುರಾಗುತ್ತಿದೆ.

ನಗರದ ಗಡಿಗಿ ಚೆನ್ನಪ್ಪ ವೃತ್ತ (ರಾಯಲ್ ಸರ್ಕಲ್)ದಿಂದ ಎಪಿಎಂಸಿ ವೃತ್ತದವರೆಗೆ ಸಮಾರು ಮೂರು ಕಿಲೋ ಮೀಟರ್‌ವರೆಗೆ ಇರುವ ಬೆಂಗಳೂರು ರಸ್ತೆಯಲ್ಲಿನ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿರುವ ಪಾದಚಾರಿ ಮಾರ್ಗದಲ್ಲೇ ಸಣ್ಣಪುಟ್ಟ ವ್ಯಾಪಾರಿಗಳು ನಿತ್ಯವೂ ವಹಿವಾಟು ನಡೆಸುವುದರಿಂದ ತೀವ್ರ ತೊಂದರೆ ಎದುರಾಗಿದೆ ಎಂಬುದು ಅನೇಕ ಜನರ ಆರೋಪವಾಗಿದೆ.

ಬೆಂಗಳೂರು ರಸ್ತೆಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ನಿತ್ಯವೂ ದ್ವಿಚಕ್ರ ವಾಹನಗಳನ್ನೂ, ನಾಲ್ಕು ಚಕ್ರದ ವಾಹನಗಳನ್ನೂ ನಿಲುಗಡೆ ಮಾಡುವುದರಿಂದ ರಸ್ತೆ ಕಿರಿದಾಗುತ್ತದೆ. ಚಿಕ್ಕ ವ್ಯಾಪಾರಿಗಳು ಪಾದಚಾರಿ ಮಾರ್ಗ  ಅತಿಕ್ರಮಿಸಿರುವುದರಿಂದ ಓಡಾಡ ಬೇಕೆಂದರೆ ಸೂಕ್ತ ಸ್ಥಳವೇ ಇಲ್ಲದ್ದರಿಂದ ಸರಾಗ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಸಾರ್ವಜನಿಕರು ಅನಿವಾರ್ಯವಾಗಿ  ರಸ್ತೆಯ ಮೇಲೇ ಓಡಾಡಬೇಕಾಗಿದೆ. ರಸ್ತೆಯಲ್ಲಿ ಅತಿ ವೇಗದಿಂದ ಚಲಿಸುವ ಬೈಕ್‌ಗಳು, ಆಟೊ ರಿಕ್ಷಾ, ಕಾರ್ ಮತ್ತಿತರ ವಾಹನಗಳಿಂದಾಗಿ ಸಂಚಾರವೇ ಕಷ್ಟಕರ ವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

`ನಿತ್ಯವೂ ಬೆಳಿಗ್ಗೆಯಿಂದಲೇ ಚಿಕ್ಕಪುಟ್ಟ ವ್ಯಾಪಾರಿಗಳು ತಮ್ಮ ಅಂಗಡಿ ತೆರೆಯುವುದರಿಂದ ಫುಟ್‌ಪಾತ್ ಕಿಕ್ಕಿರಿದಿರುತ್ತದೆ. ಹಬ್ಬಗಳ ವೇಳೆ ಜನಸಂದಣಿಯೂ ಹೆಚ್ಚುತ್ತದೆ. ರಸ್ತೆ ಮೇಲೆ ಓಡಾಡಬೇಕೆಂದರೆ ಅಲ್ಲೆಲ್ಲ ವಾಹನ ನಿಲುಗಡೆ ಮಾಡಿರುತ್ತಾರೆ. ರಸ್ತೆಯಲ್ಲಿ ವಾಹನಗಳು ವೇಗದಿಂದ ಚಲಿಸುವುದರಿಂದ ಓಡಾಟವೇ ಕಷ್ಟಕರವಾಗಿದೆ~ ಎನ್ನುತ್ತಾರೆ ನಗರದ ಬಸವೇಶ್ವರ ನಗರ ನಿವಾಸಿ ಸೋಮಲಿಂಗಪ್ಪ.

ಹಳೆಯ ಬಸ್ ನಿಲ್ದಾಣದ ಎದುರಿನ ಎರಡೂ ಬದಿಯ ರಸ್ತೆ ಮಾತ್ರವಲ್ಲದೆ, ರೈಲು ನಿಲ್ದಾಣದ ಎದುರಿನ ರಸ್ತೆಯಗುಂಟ ಬಸ್ ನಿಲ್ದಾಣದವರೆಗೆ ಇರುವ ಪಾದಚಾರಿ ಮಾರ್ಗದಲ್ಲೂ ಇದೇ ಸ್ಥಿತಿ ಇದೆ. ಸಂಚಾರ ದಟ್ಟಣೆಗೂ ಕಾರಣವಾಗುವ ಈ ಸಮಸ್ಯೆಯನ್ನು ನಿವಾರಿಸುವುದೇ ಅಸಾಧ್ಯವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಂಚಾರಿ ಠಾಣೆ ಪೊಲೀಸರೊಬ್ಬರು ಹೇಳುತ್ತಾರೆ.

ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರನ್ನು ಮಾರುಕಟ್ಟೆಗೆ ಖರೀದಿಗೆಂದು ಕರೆದೊಯ್ದರೆ ಓಡಾಡುವುದೇ ತೀವ್ರ ಸಮಸ್ಯೆಯಾಗುತ್ತದೆ. ಜೀವ ಕೈಹಿಡಿದು ಓಡಾಡುವಂತಹ ಸ್ಥಿತಿ ಇದೆ. ಅಲ್ಲದೆ, ಅಂಗಡಿಗಳೊಳಗೆ ಹೋಗಬೇಕೆಂದರೂ ದಾರಿಯೇ ಇರುವುದಿಲ್ಲ.

ಒಂದು ಅಂಗಡಿಯೆದುರು ಜನ ಓಡಾಡುವುದಕ್ಕೆಂದೇ ಅಡ್ಡಪಟ್ಟಿ ಇರಿಸಿರುವುದರಿಂದ ಪಕ್ಕದ ಅಂಗಡಿಗೆ ಹೋಗಬೇಕೆಂದರೆ ಮತ್ತೆ ಆ ಅಂಗಡಿ ಎದುರಿನ ಅಡ್ಡ ಪಟ್ಟಿಯ ಮೂಲಕವೇ ತೆರಳಬೇಕಿದೆ. ಕಿಷ್ಕಿಂಧೆಯಂತೆ ಇರುವ ಈ ಸ್ಥಳವನ್ನು ಸಾರ್ವಜನಿಕರಿಗೆ ಮುಕ್ತ ಗೊಳಿಸುವ ಅಗತ್ಯವಿದೆ.

ಮಹಾನಗರ ಪಾಲಿಕೆಯು ಈ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಮಾರುಕಟ್ಟೆಗೆ ಬರುವ ಅನೇಕರ ಕೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.