ADVERTISEMENT

ಪ್ರಕಾಶ್ ಅಂತಿಮ ದರ್ಶನಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:40 IST
Last Updated 11 ಫೆಬ್ರುವರಿ 2011, 7:40 IST

ಹೂವಿನ ಹಡಗಲಿ: ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ರ ಪಾರ್ಥಿವ ಶರೀರದ ಅಂತಿಮಯಾತ್ರೆ ಪಟ್ಟಣ ಪ್ರಮುಖ ಬೀದಿಗಳಲ್ಲಿ ಗುರುವಾರ ನಡೆಯಿತು.ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಪಟ್ಟಣದ ಜಿ.ಪಿ.ಜಿ. ಮೈದಾನದಿಂದ ಆರಂಭವಾದ ಅಂತ್ಯಯಾತ್ರೆ ಕೆಇಬಿ ವೃತ್ತ, ಎ.ಪಿ.ಎಂ.ಸಿ. ವೃತ್ತ, ಗೋಲ್ಡ್‌ನ್ ಜುಬ್ಲಿ ವೃತ್ತ, ರಾಮ ಸರ್ಕಲ್, ಲಾಲ್‌ಬಹದ್ದೂರ್ ಶಾಸ್ತ್ರಿ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ  ರೇಣುಕಾ ನಗರದ ರಂಗಭಾರತಿ  ಮಂದಿರದ ಬಳಿಯಿರುವ ತೋಟವನ್ನು ತಲುಪಿತು.

ಓಣಿಗಳಲ್ಲಿ ಮೆರವಣಿಗೆ ಆಗಮಿಸುತ್ತಿದ್ದಂತೆಯೇ ಸಾವಿರಾರ ಜನರ ಕಣ್ಣುಗಳು ತೇವಗೊಂಡವು. ಎತ್ತರದ ಮನೆಯ ಮಾಳಿಗೆಗಳನ್ನೇರಿ  ಮೆರವಣಿಗೆಯಲ್ಲಿನ ಪ್ರಕಾಶರ ಪಾರ್ಥಿವ ಶರೀರವನ್ನು ವೀಕ್ಷಿಸಿದರು.  ಸತತ 3 ಗಂಟೆಗಳಿಗೂ ಹೆಚ್ಚು ಕಾಲ ಮೆರವಣಿಗೆ ಸಾಗಿತ್ತು. ಜನರು ತಮ್ಮ   ನೆಚ್ಚಿನ ಸಾಹೇಬ್‌ರು, ವಕೀಲರಿಗೆ ಒಲ್ಲದ ಮನಸ್ಸಿನಿಂದ ವಿದಾಯ ಹೇಳಿದರು. 

ಪ್ರಕಾಶ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಸಾಧನೆಗಳನ್ನು ಸ್ಮರಿಸುತ್ತಿದ್ದರು.  ಸಮಾಧಿಯ ಬಳಿ ಪಾರ್ಥಿವ ಶರೀರ ಬರುತ್ತಿದ್ದಂತೆಯೇ ಅಭಿಮಾನಿಗಳು ‘ಬಡವರ ಬಂಧು ಹುಲಿಗುಡ್ಡದ ಹುಲಿಗೆ ಜಯವಾಗಲಿ’ ಎಂದು ಜಯಕಾರ ಹಾಕುತ್ತಿದ್ದರು.ಅಪಾರ ಗಣ್ಯರು, ಅಭಿಮಾನಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಕಾಶರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಪೊಲೀಸ್ ಇಲಾಖೆಯವರು ಗೌರವ ವಂದನೆ ಸಲ್ಲಿಸಿದರು.  ಸರ್ಕಾರಿ ಗೌರವದೊಂದಿಗೆ ಪ್ರಕಾಶರ ಅಂತ್ಯ ಕ್ರಿಯೆ ನಡೆಯಿತು. 

ಅಂತಿಮ ನಮನ:  ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯದ ಅನೇಕ ಗಣ್ಯರು ಪಟ್ಟಣದ ರೇಣುಕಾನಗರದ ಬಳಿಯಿರುವ ತೋಟದ ಸಮಾಧಿಯ ಬಳಿ ಪ್ರಕಾಶರಿಗೆ ಅಂತಿಮ ನಮನ ಸಲ್ಲಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆ.ಪಿ.ಪಿ.ಸಿ.ಸಿ. ಅಧ್ಯಕ್ಷ ಜಿ.ಪರಮೇಶ್ವರ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜನಾರ್ದನರೆಡ್ಡಿ, ಆರೋಗ್ಯ ಸಚಿವ ಶ್ರೀರಾಮುಲು, ಕಂದಾಯ ಸಚಿವ ಕರುಣಾಕರರೆಡ್ಡಿ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಸಚಿವ ಉದಾಸಿ, ಸಚಿವ ವಿಜಯಶಂಕರ,  ಲೋಕಸಭಾ ಸದಸ್ಯರಾದ ರಾಘವೇಂದ್ರ, ಪ್ರಹ್ಲಾದಾಚಾರ್ಯ, ಜೆ. ಶಾಂತಾ, ಕೇಂದ್ರ ಮಾಜಿ ಸಚಿವ ಬಸವನಗೌಡ ಯತ್ನಾಳ್, ಕೆ.ಪಿ.ಪಿ.ಸಿ.ಸಿ. ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ರಾಜ್ಯ ಸಭಾ ಸದಸ್ಯರಾದ ಅನಿಲ್‌ಲಾಡ್, ಕೆ.ಸಿ. ಕೊಂಡಯ್ಯ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ,  ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಎಚ್.ಕೆ. ಪಾಟಿಲ್, ಅಲ್ಲಂ ವೀರಭದ್ರಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ಮಹಿಮಾ ಪಾಟೀಲ್, ಅಮರೇಗೌಡ ಬಯ್ಯಾಪೂರ, ಲಿಲಾದೇವಿ ಆರ್. ಪ್ರಸಾದ, ಬಿ.ಬಿ. ಚಿಮ್ಮನಕಟ್ಟಿ, ಎಸ್.ಎಸ್. ಪಾಟೀಲ್, ರಾಣಿ, ಸತೀಶ, ಬಿ.ಟಿ. ಲಲಿತಾನಾಯ್ಕ, ಎ.ಎಂ. ಹಿಂಡಸಗೇರಿ, ಸಗೀರ್‌ಅಹ್ಮದ್, ಪಿ.ಸಿ.ಸಿದ್ದನಗೌಡ, ಬಸವರಾಜ ರಾಯರೆಡ್ಡಿ, ಶಾಸಕ ಚಂದ್ರಾನಾಯ್ಕ, ಸಂತೋಷ ಲಾಡ್, ಆನಂದಸಿಂಗ್, ನೇಮಿರಾಜ್‌ನಾಯ್ಕ, ಕರಡಿ ಸಂಗಣ್ಣ, ಸಿದ್ದು ಸೌದಿ, ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ, ಮೃತ್ಯುಂಜಯ ಜಿನಗಾ, ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರನಾಯ್ಕ, ಬಿ.ಸಿ.ಪಾಟೀಲ್, ಗಡ್ಡದೇವರಮಠ, ವಿ.ಬಿ. ಹಾಲಪ್ಪ, ಡಿ.ಆರ್.ಪಾಟೀಲ್ ಗಂಗಣ್ಣ ಮಾನಶೆಟ್ಟರ್, ಎನ್.ಟಿ. ಬೊಮ್ಮಣ್ಣ  ಸಜ್ಜನ ರಾಜಕಾರಣಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ರವರಿಗೆ ಕ್ರಿಯಾ ಸಮಾಧಿಯ ಬಳಿ ಅಂತಿಮ ನಮನ ಸಲ್ಲಿಸಿದರು.

 ಹಂಪಿ ವಿಶ್ವವಿದ್ಯಾಲಯದ ಕುಲಪತಿ ಮುರೆಗೆಪ್ಪ, ವಿಶ್ರಾಂತ ಕುಲಪತಿ ಡಾ.ಎಂ.ಎಂ. ಕಲ್ಬುರ್ಗಿ, ಕ.ಸಾ.ಪ. ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್, ಸಾಹಿತಿಗಳಾದ ಕಾಳೇಗೌಡನಾಗನೂರು, ಸಿದ್ದಲಿಂಗಪಟ್ಟಣಶೆಟ್ಟಿ, ಕುಂ. ವೀರಭದ್ರಪ್ಪ, ಶ್ರೀಶೈಲ ಹುದ್ದಾರ, ರಹಮತ್ ತರೀಕೆರೆ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಎರ್ರಪ್ಪ ಹಾಗೂ  ಅನೇಕ ಸಾಹಿತಿಗಳು ಅಂತ್ಯ ಸಂಸ್ಕಾರದಲ್ಲಿ   ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.