ADVERTISEMENT

ಪ್ರಮಾಣಪತ್ರದಲ್ಲಿ ಸಾವಿನ ಕಾರಣ ನಮೂದಿಸಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:25 IST
Last Updated 18 ಅಕ್ಟೋಬರ್ 2012, 8:25 IST

ಬಳ್ಳಾರಿ: ವೈದ್ಯರು ಮರಣ ಪ್ರಮಾಣಪತ್ರಗಳನ್ನು ನೀಡುವಾಗ ಕಡ್ಡಾಯವಾಗಿ ಸಾವಿಗೆ ಏನು ಕಾರಣ ಎಂಬುದನ್ನು ನಮೂದಿಸಬೇಕು ಎಂದು ಜಿ.ಪಂ. ಮುಖ್ಯ  ಯೋಜನಾಧಿಕಾರಿ ಚಂದ್ರಶೇಖರ ಗುಡಿ ಸಲಹೆ ನೀಡಿದರು.

ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ರಾಷ್ಟ್ರೀಯ ಮಹಾ ನೋಂದಣಾಧಿಕಾರಿ ಕಚೇರಿಗಳ ಸಹಯೋಗದಲ್ಲಿ ಜಿ.ಪಂ. ಸಭಾಗಂಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರಣ ನಮೂದಿಸಿದರೆ  ತನಿಖೆ ಮತ್ತು ಸಂಶೋಧನೆಗೆ ಅನುಕೂಲ. ಹೃದಯಾಘಾತದಿಂದ ಸಾವು ಸಂಭವಿಸಿದ್ದರೂ ಮುಂಚೆ ಆ ವ್ಯಕ್ತಿಯಲ್ಲಿ ಯಾವ ರೋಗ ಲಕ್ಷಣಗಳಿದ್ದವು ಎಂಬುದನ್ನು ನಮೂದಿಸಬೇಕು ಎಂದು ಅವರು ತಿಳಿಸಿದರು.

ಆರೋಗ್ಯ ಸಂಶೋಧನಾ ಸಂಸ್ಥೆಗಳು, ಅಧ್ಯಯನ ಸಂಸ್ಥೆಗಳು, ಸಮೀಕ್ಷೆ ಸಂಸ್ಥೆಗಳು ಮರಣಗಳು ಸಂಭವಿಸುವ ಪ್ರದೇಶಗಳಲ್ಲಿ, ಸಂಶೋಧನೆ ನಡೆಸಿ, ವರದಿ ನೀಡುತ್ತವೆ. ಈ ವರದಿಯ ಆಧಾರದಡಿ ಆ ಪ್ರದೇಶಗಳಿಗೆ ಅನುಕೂಲವಾಗುವಂತೆ ಪೂರಕ ಯೋಜನೆ ರೂಪಿಸಲು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅನುಕೂಲ ಆಗುತ್ತವೆ ಎಂದು ಅವರು ಹೇಳಿದರು.

ವೈದ್ಯಾಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡುವಾಗ ಜಾಗೃತೆಯಿಂದ ಕಾರಣವನ್ನು ಸ್ಪಷ್ಟವಾಗಿ ನಮೂದಿಸಬೇಕು. ಇಲ್ಲದಿದ್ದರೆ ತೊಂದರೆಗೆ ಒಳಗಾಗಬೇಕಾಗುತ್ತದೆ. ನೈಜವಾದ ವರದಿ ನೀಡಲು ಯತ್ನಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀಕಾಂತ ಬಾಸೂರ್ ತಿಳಿಸಿದರು.

ನಿಖರ ಕಾರಣದಿಂದ ಮೌಲ್ಯಯುತ ಸಮೀಕ್ಷಾ ವರದಿ ಸಿದ್ಧಪಡಿಸಬಹುದು. ಈ ಪ್ರದೇಶಗಳಿಗೆ ಅನುಕೂಲವಾಗುವ ಪೂರಕ ಯೋಜನೆ ಸಿದ್ಧಪಡಿಸಬಹುದು ಎಂದು ಜನಗಣತಿ ನಿರ್ದೇಶನಾಲಯದ ಉಪ ನಿರ್ದೇಶಕ ಮುರಹರಿ ಸತ್ಯಬಾಬು ಹೇಳಿದರು.

ಡಾ.ಯೋಗರಾಜ್, ಪ್ರೊ.ರಾಘವೇಂದ್ರ ಉಪನ್ಯಾಸ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಂಪಾಪತಿ, ವಿಮ್ಸ ಅಧಿಕಾರಿಗಳು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಶರಣಪ್ಪ  ಸ್ವಾಗತಿಸಿದರು. ಸಹಾಯಕ ನಿರ್ದೇಶಕ ವಾಗೀಶ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಬನ್ಸಿಲಾಲ್ ಹದಗಲ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.