ADVERTISEMENT

ಬರಗಾಲದಿಂದ ತತ್ತರ: ರೈತರ ಜಾನುವಾರುಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:05 IST
Last Updated 14 ಅಕ್ಟೋಬರ್ 2011, 5:05 IST

ಕೂಡ್ಲಿಗಿ: ತಾಲ್ಲೂಕಿನಲ್ಲಿ ವರುಣ ಮುನಿಸಿಕೊಂಡು ಒಂದು ತಿಂಗಳೇ ಕಳೆದಿದೆ. ರೈತರು ಕಂಗಾಲಾಗಿದ್ದು, ಇಳುವರಿ ಸಂಪೂರ್ಣ ಕುಸಿದಿದೆ. ಬಿತ್ತನೆ ಬೀಜಕ್ಕಾಗಿ ಸಾಲ ಮಾಡಿರುವ ರೈತರು ತಮಗಾಗಿ ದುಡಿಯುವ ಜಾನುವಾರು ಗಳನ್ನೂ ಮಾರುವ ದುಸ್ಥಿತಿಗೆ ತಲುಪಿದ್ದಾರೆ. ತಾಲ್ಲೂಕು ಪೀಡಿತ ಎಂದು ಘೋಷಣೆಯಾಗಿದ್ದರೂ ರೈತರ ಸಂಕಷ್ಟಗಳು ತಪ್ಪಿಲ್ಲ.

ತಾಲ್ಲೂಕಿನ ಎಂ.ಬಿ.ಅಯ್ಯನಹಳ್ಳಿ ಯಲ್ಲಿ ಪ್ರತಿ ಬುಧವಾರ ಜಾನುವಾರು ಗಳ ಮಾರಾಟ ನಡೆಯುತ್ತಿದೆ. ಇಷ್ಟು ದಿನಗಳವರೆಗೆ ಅಷ್ಟೇನೂ ಮಾರಾಟ ವಾಗದ ಎತ್ತುಗಳು ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಬರಗಾಲದ ಹಿನ್ನೆಲೆಯಲ್ಲಿ ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಬೇಕಾಗಿದೆ.

ಈ ಬಾರಿ ಕನಿಷ್ಠ 50 ಎತ್ತುಗಳು ಮಾರಾಟವಾಗಿವೆ ಎಂದು ರೈತ ರಾಮಣ್ಣ ತಿಳಿಸಿದ್ದಾನೆ. ಒಂದು ಜೊತೆ ಎತ್ತುಗಳು 25,000 ರೂಪಾಯಿ ಗಳಿಂದ 35,000 ರೂಪಾಯಿ ಗಳವರೆಗೆ ಮಾರಾಟಗೊಂಡಿವೆ.

ಮಾರಾಟಗೊಂಡಿರುವ ಎತ್ತುಗಳು ಲಾರಿ ಇತರೆ ವಾಹನಗಳಲ್ಲಿ ಬೆಂಗಳೂರಿನ ಕಸಾಯಿಖಾನೆಗೆ ಸರಬರಾಜಾಗುತ್ತವೆ ಎಂದು ಗ್ರಾಮಸ್ಥರು ತಿಳಿಸಿದರೆ ಎತ್ತುಗಳನ್ನು ಹಗರಿಬೊಮ್ಮನ ಹಳ್ಳಿಯ ಮಾರುಕಟ್ಟೆಗೆ ಕರೆದೊಯ್ಯಲಾಗುವುದು ಎಂಬುದು ಲಾರಿ ಚಾಲಕರು ತಿಳಿಸಿದರು.

ಎಂ.ಬಿ.ಅಯ್ಯನಹಳ್ಳಿ ಸುತ್ತಲಿನ ಬೆಳ್ಳಕಟ್ಟೆ, ಹಾರಕಬಾವಿ, ಬಣವಿಕಲ್ಲು, ಇಮಡಾಪುರ, ಸೂಲದಹಳ್ಳಿ, ಚಿಕ್ಕ ಜೋಗಿಹಳ್ಳಿ, ಕಡಕೊಳ್ಳ, ಕೆಂಚೋಬನ ಹಳ್ಳಿಯಿಂದ ಸಾಲುಗಟ್ಟಿ ಬರುವ ಎತ್ತುಗಳು ಜೊತೆಯಲ್ಲಿಯೇ ಎಮ್ಮೆ, ಆಕಳುಗಳೂ ಮಾರಾಟಗೊಳ್ಳುತ್ತವೆ.

ಮೇವು, ನೀರಿನ ಕೊರತೆಯಿಂದ ಕಂಗೆಟ್ಟಿ ರುವ ರೈತರು ಜಾನುವಾರುಗಳನ್ನು ಕಣ್ಣೀರಿನೊಂದಿಗೇ ಮಾರಾಟ ಮಾಡುತ್ತಿರುವುದು ಕರುಣಾಜನಕ ವಾಗಿದೆ. ತಾಲ್ಲೂಕನ್ನು ಬರಪೀಡಿತ ವೆಂದು ಘೋಷಿಸಿದ್ದರೂ ಇದುವರೆಗೆ ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ಆದ್ದರಿಂದ ರೈತರಿಗೆ ಮಾರಾಟ ಮಾಡುವುದೊಂದೇ ಪರ್ಯಾಯ ಮಾರ್ಗವಾಗಿದೆ.

`ಮಳಿ ಹೋತ್ರಿ, ಬೆಳೀನು ಇಲ್ಲ, ಮನುಸಾರು ಬದುಕೋದೇ ಕಷ್ಟಾಗೆತಿ, ದನಗಳನ್ನ ಎಲ್ಲಿಂದ ಸಾಕಾಣ?~ ಎಂದು ರೈತ ದುರುಗಪ್ಪ ಪ್ರಶ್ನಿಸುತ್ತಾನೆ. `ಸರ್ಕಾರ ಏನ ಪರಿಹಾರ ಕೊಡ್ತೇತ್ರಿ, ನಮ್ ದಾರಿ ನಾವ ನೋಡ್ಕೋಬೇಕು, ಒಳ್ಳೆ ದುಡಿಯೋ ಎತ್ತುಗಳನ್ನ ಮಾರ್ಬೇಕಾದ್ರ ಕಣ್ಣೀರು ಕಪಾಳಕ್ಕ ಬರ್ತಾವ, ನನ್ ದನಗಳ್ನ ಕಣ್ಮು ಚ್ಕೊಂಡು ಮಾರೀನ್ರಿ~ ಎಂದು ನೋವಿನ ದನಿಯಿಂದ ಬಸಣ್ಣ ಹೇಳುತ್ತಾನೆ.ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆಯೇ.

ತಾಲ್ಲೂಕು ಹಾಗೂ ಜಿಲ್ಲಾಡಳಿತ ತಕ್ಷಣದಲ್ಲಿಯೇ ಜಾನುವಾರು ಗಳಿಗೆ ಮೇವು, ನೀರಿನ ಸೌಲಭ್ಯವನ್ನು ಒದಗಿಸ ಬೇಕಾಗಿದೆ. ವಿದ್ಯುತ್ ಕೊರತೆಯಿಂದ ಕೊಳವೆ ಬಾವಿಯಲ್ಲಿ ನೀರಿದ್ದರೂ ನೀರಿನ ಸರಬರಾಜು ಸಮಸ್ಯೆಯಾಗಿದೆ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳ ಬೇಕೆಂಬುದು ತಾಲ್ಲೂಕಿನ ರೈತರ, ಗ್ರಾಮಸ್ಥರ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.