ADVERTISEMENT

ಬಳಕೆಯಾಗದ ವಾಹನ ನಿಲುಗಡೆ ತಾಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2013, 6:24 IST
Last Updated 18 ಫೆಬ್ರುವರಿ 2013, 6:24 IST
ವಾಹನಗಳನ್ನು ನ್ಯಾಯಾಲಯದ ಆವರಣದ ಒಳಗಡೆ ನಿಲುಗಡೆ ಮಾಡಿರುವುದು
ವಾಹನಗಳನ್ನು ನ್ಯಾಯಾಲಯದ ಆವರಣದ ಒಳಗಡೆ ನಿಲುಗಡೆ ಮಾಡಿರುವುದು   

ಬಳ್ಳಾರಿ: ದ್ವಿಚಕ್ರ ವಾಹನಗಳ ನಿಲುಗಡೆ ಭರಾಟೆಯಿಂದ ಕಕ್ಷಿದಾರರಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದಲೇ ಇತ್ತೀಚೆಗಷ್ಟೇ ನಗರಾಭಿವೃದ್ದಿ ಪ್ರಾಧಿಕಾರದ ನೆರವಿನೊಂದಿಗೆ ನಿರ್ಮಿಸಲಾಗಿರುವ ದ್ವಿಚಕ್ರ ವಾಹನಗಳ ನಿಲುಗಡೆ ತಾಣ ಇದ್ದೂ ಇಲ್ಲದಂತಾಗಿದೆ.

ಹಲವಾರು ನ್ಯಾಯಾಲಯಗಳನ್ನು ಒಳಗೊಂಡಿರುವ ಜಿಲ್ಲಾ ನ್ಯಾಯಾಲಯದ ಆವರಣವು ನಿತ್ಯವು ಸಾವಿರಾರು ಜನ ಕಕ್ಷಿದಾರರು, ವಕೀಲರು, ನ್ಯಾಯಾಲಯ ಸಿಬ್ಬಂದಿ, ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳನ್ನು ವಿಚಾರಣೆಗಾಗಿ ಕರೆತರುವ ಪೊಲೀಸ್ ಸಿಬ್ಬಂದಿ ಕಿಕ್ಕಿರಿದು ತುಂಬಿರುತ್ತದೆ.

ಬಹುತೇಕರು ಸ್ವಂತ ವಾಹನಗಳನ್ನೇ ತರುವುದರಿಂದ ಎಲ್ಲಾ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಇಲ್ಲ ಎಂಬುದನ್ನು ಮನಗಂಡು ಇತ್ತೀಚೆಗಷ್ಟೇ ಸುಸಜ್ಜಿತ ವಾಹನ ತಂಗುದಾಣವನ್ನು ನ್ಯಾಯಾಲಯದ ಎದುರಿನ ರಸ್ತೆಯ ಬದಿಯಲ್ಲಿ ನಿರ್ಮಿಸಿ, ಉದ್ಘಾಟಿಸಲಾಗಿದೆ. ಆದರೆ, ಅದರ ಸದ್ಬಳಕೆ ಆಗದೆ, ನ್ಯಾಯಾಲಯದ ಆವರಣದಲ್ಲೇ ಅನೇಕರು ತಮ್ಮ ವಾಹನ ನಿಲುಗಡೆ ಮಾಡುತ್ತಿರುವುದು ಕಂಡುಬರುತ್ತಿದೆ.

ಲಕ್ಷಾಂತರ ರೂಪಾಯಿ ಖರ್ಚುಮಾಡಿ ನಿರ್ಮಿಸಿರುವ ನೂತನ ವಾಹನ ನಿಲುಗಡೆ ತಾಣದಲ್ಲಿ ತಮ್ಮ ವಾಹನ ನಿಲ್ಲಿಸದೆ, ನೇರವಾಗಿ ನ್ಯಾಯಾಲಯದ ಆವರಣದೊಳಗೇ ಕೊಂಡೊಯ್ಯುವುದರಿಂದ ನ್ಯಾಯಾಲಯದ ಆವರಣ ವಾಹನ ನಿಲ್ದಾಣದಂತೆ ಕಾಣುತ್ತದೆ.
ಎಲ್ಲೆಂದರಲ್ಲಿ , ಹೇಗೆಂದರೆ ಹಾಗೆ ತಮ್ಮ ವಾಹನ ನಿಲ್ಲಿಸುವುದರಿಂದಾಗಿ ಶಿಸ್ತು ಮಾಯವಾಗಿದ್ದು, ನ್ಯಾಯಾಲಯದ ಆವರಣ ವಾಹನಗಳ ಮಾರುಕಟ್ಟೆಯಂತೆ ಗೋಚರಿಸುವಂತಾಗಿದೆ.

ನ್ಯಾಯಾಲಯದ ಆವರಣದೊಳಗಿನ ವಾಹನ ದಟ್ಟಣೆ ಕಡಿಮೆ ಮಾಡಲೆಂದೇ ನೂತನ ತಂಗುದಾಣ ನಿರ್ಮಿಸಲಾಗಿದ್ದರೂ, ಅದರತ್ತ ಅನೇಕರು ತಿರುಗಿ ನೋಡದಿರುವುದರಿಂದ ಅದರ ನಿರ್ಮಾಣದ ಉದ್ದೇಶ ಸಫಲವಾಗದೇ ಉಳಿದಿದೆ.

ನೂತನ ನಿಲುಗಡೆ ತಾಣದಲ್ಲಿ ಸಿಬ್ಬಂದಿಯೊಬ್ಬರನ್ನು ನೇಮಿಸಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ದಟ್ಟಣೆ ಕಡಿಮೆ ಮಾಡುವತ್ತ ಸಂಬಂಧಿಸಿದವರು ಆಲೋಚಿಸಬೇಕು ಎಂದು ನ್ಯಾಯಾಲಯಕ್ಕೆ ಆಗಮಿಸುವ ಅನೇಕ ವಕೀಲರು `ಪ್ರಜಾವಾಣಿ'ಗೆ ತಿಳಿಸಿದರು.

ನ್ಯಾಯಾಂಗ ಸಿಬ್ಬಂದಿ ಹಾಗೂ ವಕೀಲರ ವಾಹನಗಳಿಗೆ ಮಾತ್ರ ಆವರಣದೊಳಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಮೊದಲು ತಿಳಿಸಲಾಗಿತ್ತು. ಹೊಸ ನಿಲ್ದಾಣ ನಿರ್ಮಾಣದ ನಂತರ ಸಾರ್ವಜನಿಕರ ವಾಹನಗಳಿಗೆ ಒಳಗಡೆ ಪ್ರವೇಶ ನಿರ್ಬಂಧಿಸುವುದಾಗಿ ತಿಳಿಸಲಾಗಿತ್ತು. ಆದರೆ, ಆ ರೀತಿಯ ಕ್ರಮಕ್ಕೆ ಮುಂದಾಗದಿರುವುದೇ ವಾಹನ ದಟ್ಟಣೆ ಕಡಿಮೆ ಆಗದಿರಲು ಕಾರಣವಾಗಿದೆ ಎಂಬುದು ಅವರ ಅಭಿಪ್ರಾಯ.

ಕೂಡಲೇ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಅಥವಾ ನ್ಯಾಯಾಂಗ ಇಲಾಖೆ ಈ ಕಡೆ ಗಮನ ಹರಿಸುವ ಮೂಲಕ ನ್ಯಾಯಾಲಯದ ಆವರಣವನ್ನು ಸುಂದರವಾಗಿ ಹಾಗೂ ಸುಸಜ್ಜಿತವಾಗಿರಿಸಲು ಮುಂದಾಗಬೇಕು ಎಂಬುದು ಅವರ ಕೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.