ADVERTISEMENT

ಬಳ್ಳಾರಿ: ಪುನರುಜ್ಜೀವನಕ್ಕೆ ಕಾದಿದೆ ರೆಡ್‌ಕ್ರಾಸ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 7:40 IST
Last Updated 6 ಮಾರ್ಚ್ 2011, 7:40 IST
ಬಳ್ಳಾರಿ: ಪುನರುಜ್ಜೀವನಕ್ಕೆ ಕಾದಿದೆ ರೆಡ್‌ಕ್ರಾಸ್
ಬಳ್ಳಾರಿ: ಪುನರುಜ್ಜೀವನಕ್ಕೆ ಕಾದಿದೆ ರೆಡ್‌ಕ್ರಾಸ್   

ಬಳ್ಳಾರಿ: ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವ ಉದ್ದೇಶದಿಂದ ಸ್ವಿಜರ್ಲಂಡ್‌ನ ಉದ್ಯಮಿ ಹೆನ್ರಿ ಡ್ಯುರಾಂಟ್ ಅವರು 1864ರಲ್ಲಿ ಹುಟ್ಟುಹಾಕಿರುವ ರೆಡ್‌ಕ್ರಾಸ್ ಸಂಸ್ಥೆ ಸ್ವಾತಂತ್ರ್ಯಪೂರ್ವವೇ ಬಳ್ಳಾರಿಯಲ್ಲಿ ಕಾರ್ಯಾರಂಭ ಮಾಡಿದೆ.

ಜನಸೇವೆಯನ್ನೇ ಧ್ಯೇಯ ಆಗಿರಿಸಿಕೊಂಡಿರುವ ಈ ಸಂಸ್ಥೆಯು,ನಗರದ ಜಿಲ್ಲಾ ನ್ಯಾಯಾಲಯದ ಎದುರು ಸರಕಾರ ನೀಡಿರುವ ನಿವೇಶನದಲ್ಲಿ ಸ್ವಂತ ಕಟ್ಟಡವನ್ನೂ ಹೊಂದಿದೆ.

ಆದರೆ, ಬ್ರಿಟಿಷರ ಆಡಳಿತದ ಅವಧಿಯಿಂದಲೇ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸದ್ಯ ಜೀವ ಕಳೆದುಕೊಂಡಿದೆ.

ADVERTISEMENT

ಈ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಬಳ್ಳಾರಿಯವರೇ ಆಗಿದ್ದರೂ, ಸಂಸ್ಥೆಯ  ಪುನರುಜ್ಜೀವನಕ್ಕೆ ಮುತುವರ್ಜಿವಹಿಸಿ, ಕ್ರಮ ಕೈಗೊಳ್ಳದೇ ಇರುವುದು ನೋವಿನ ಸಂಗತಿಯಾಗಿದೆ.

ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ಕಾಯಿಲೆ ಉಲ್ಬಣಗೊಂಡ ಸಂದರ್ಭ ಸಾರ್ವಜನಿಕರಿಗೆ ಚಿಕಿತ್ಸೆ ಮತ್ತಿತರ ಅಗತ್ಯ ನೆರವು ನೀಡಲು ರೆಡ್‌ಕ್ರಾಸ್ ಸಂಸ್ಥೆ ಮುಂದಾಗುವುದು ಅದರ ಮುಖ್ಯ ಉದ್ದೇಶವಾಗಿದ್ದು, ಪ್ರಸ್ತುತ ಅದರ ಉದ್ದೇಶ ಈಡೇರಿಕೆಗೆ ಹಿನ್ನಡೆಯಾಗಿದೆ.

1934ರಲ್ಲೇ ನಗರದಲ್ಲಿ ಆರಂಭವಾಗಿರುವ ರೆಡ್‌ಕ್ರಾಸ್ ಸಂಸ್ಥೆಯ ಸ್ವಂತ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಅಂದಿನ ರಾಜ್ಯಪಾಲ ವಿ.ವಿ. ಗಿರಿ ಅವರು 1965ರಲ್ಲಿ ಶಂಕುಸ್ಥಾಪನೆ ನೆರವೇರಿಸಿದರೆ, 1970ರಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸಂಸ್ಥೆಯ ಸ್ವಂತ ಕಟ್ಟಡವನ್ನು ಉದ್ಘಾಟಿಸಿದ್ದರು. ತದನಂತರ ಕಟ್ಟಡಕ್ಕೆ ಕಂಪೌಂಡ್ ಅನ್ನೂ ನಿರ್ಮಿಸಲಾಗಿದೆ.

ಕಾರ್ಯ ಚಟುವಟಿಕೆಯಲ್ಲೂ ಉತ್ತಮ ಹೆಸರು ಪಡೆದಿದ್ದ ಈ ಶಾಖೆ, ಗುಜರಾತ್‌ನ ಲಾತೂರ್‌ನಲ್ಲಿ ಸಂಭವಿಸಿದ ಭೂಕಂಪ, ಸುನಾಮಿ ಮೊದಲಾದ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿತ್ತು.

ವಿದ್ಯಾರ್ಥಿ ಸಮೂಹಕ್ಕಾಗಿಯೇ ಇಲ್ಲಿ ಸ್ಥಾಪಿಸಲಾಗಿದ್ದ ಜೂನಿಯರ್ ರೆಡ್‌ಕ್ರಾಸ್.  ದಕ್ಷಿಣ ಭಾರತಕ್ಕೆ ಮಾದರಿಯಾಗಿತ್ತು ಎಂಬುದು ಇನ್ನೊಂದು ಹೆಗ್ಗಳಿಕೆಯಾಗಿದೆ.

ಅಲ್ಲದೆ, ಅಂದಿನ ದಿನಗಳಲ್ಲಿ ಪ್ರಾಥಮಿಕ ಶಾಲೆ ನಡೆಸುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಿದ್ದಲ್ಲದೆ, ರಕ್ತಭಂಡಾರ, ಆ್ಯಂಬುಲೆನ್ಸ್ ಸೇವೆಯನ್ನೂ ಮೊತ್ತಮೊದಲ ಬಾರಿಗೆ ಬಳ್ಳಾರಿಗರಿಗೆ ಪರಿಚಯಿಸಿದ ಕೀರ್ತಿಯೂ ರೆಡ್‌ಕ್ರಾಸ್ ಸಂಸ್ಥೆಯದ್ದು.

ಹಲವು ಕಾರಣಗಳಿಂದ ಶಾಲೆಯನ್ನೂ ಮುಚ್ಚಿದ್ದು, ಆ್ಯಂಬುಲೆನ್ಸ್ ವಾಹನ  ಇದೀಗ ಕೆಟ್ಟು ನಿಂತಿದೆ. ಇಲ್ಲಿನ ಸಿಬ್ಬಂದಿ ಮತ್ತು ಸಂಸ್ಥೆಯ ಪದಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಹಲವು ವರ್ಷಗಳಿಂದ ಸಂಸ್ಥೆಯ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿದ್ದು, ದುರಸ್ತಿ ಕಾಣದ ಕಟ್ಟಡವೂ ಶಿಥಿಲಗೊಂಡಿದೆ. ಆವರಣದಲ್ಲಿ ಚರಂಡಿ ನೀರು ಸಂಗ್ರಹವಾಗಿದ್ದು, ಪಾಳು ಬಂಗಲೆಯಂತಿರುವ ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ.

ಸಂಸ್ಥೆಯ ಈ ಹಿಂದಿನ ಚಟುವಟಿಕೆಗಳ ಬಗ್ಗೆ ವಿವರಿಸಿದ ಶಾಖೆಯ ಮಾಜಿ ಉಪಾಧ್ಯಕ್ಷ ಡಾ.ಟೇಕೂರ್ ರಾಮನಾಥ್, ಸಂಸ್ಥೆಗೆ ಮತ್ತೆ ಜೀವ ತುಂಬುವ ಕೆಲಸಗಳು ನಡೆಯಬೇಕಿದೆ ಎನ್ನುತ್ತಾರೆ.

ಇನ್ನು ಸಂಸ್ಥೆಗೆ ಬೇರಡೆ ನಿವೇಶನ ನೀಡಿ, ಕೋಟ್ಯಂತರ ರೂಪಾಯಿ ಮೌಲ್ಯದ  ಸಂಸ್ಥೆಯ ನಿವೇಶನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಹುನ್ನಾರವೂ ತೆರೆಮರೆಯಲ್ಲಿ ನಡೆದಿದೆ ಎಂದೂ ಹೇಳಲಾಗುತ್ತಿದೆ.

ರೆಡ್‌ಕ್ರಾಸ್ ಉಸ್ತುವಾರಿ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿದ್ದು, ಅವರೂ ಈ ಬಗ್ಗೆ ಆಸಕ್ತಿ ತಾಳಿಲ್ಲ. ನಗರದ ನೂರಾರು ಜನ ಇದರ ಸದಸ್ಯರಿದ್ದು, ಅವರ ಸಭೆ ಕರೆದು ಚರ್ಚಿಸಿ ಸಂಸ್ಥೆಯ ಪುನರುಜ್ಜೀವನ ಕಾರ್ಯಕ್ಕೆ ಮುಂದಾಗಬೇಕು ಎಂಬುದು ಸಂಸ್ಥೆಯ ಮಾಜಿ ಕಾರ್ಯದರ್ಶಿ ಇಂದಿರಾ ಧರ್ ಅವರ ಆಗ್ರಹವಾಗಿದೆ.

ಯುದ್ಧ ಕೈದಿಗಳು, ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಆರಂಭವಾದ ಈ ಸಂಸ್ಥೆಯು 1920ರಲ್ಲೇ ಭಾರತಕ್ಕೆ ಪರಿಚಯವಾಗಿದ್ದು, ನಗರದ ಮುಖಂಡರಾಗಿದ್ದ ವೈ.ಮಹಾಬಲೇಶ್ವರಪ್ಪ, ಟೇಕೂರ್ ಕೃಷ್ಣಮೂರ್ತಿ ಮತ್ತಿತರರು ಈ ಸಂಸ್ಥೆಯನ್ನು ಅತ್ಯಂತ ಆಸಕ್ತಿಯಿಂದ ನಗರದಲ್ಲಿ ಆರಂಭಿಸಿದ್ದು, 2005ರವರೆಗೂ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಗೆ ಇದೀಗ ಪದಾಧಿಕಾರಿಗಳೂ ಇಲ್ಲ.

ಕೆಲವು ತಿಂಗಳುಗಳ ಹಿಂದೆಯೇ ಸಂಸ್ಥೆಯ ಕಟ್ಟಡಕ್ಕೆ ಯಾವುದೇ ವಿವಾದಗಳು ಇಲ್ಲದಿದ್ದರೂ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಸೀಲ್ ಮಾಡಿ ಬೀಗ ಜಡಿಯಲಾಗಿದ್ದು, ಮತ್ತೆ ಇದರ ಬಾಗಿಲು ತೆರೆಯಿಸಿ, ಸಾರ್ವಜನಿಕರ ಸೇವೆಗೆ ಸಮರ್ಪಿಸಬೇಕಿದೆ ಎಂಬುದು ಸಂಸ್ಥೆಗಾಗಿ ದುಡಿದವರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.