ಸಂಡೂರು: ಮುದ್ದಾದ ಮೊಲ, ಅಳಿಲು, ಬಿಳಿ ಆನೆ, ಕೆಂಪು ಕೊಕ್ಕಿನ ಹಸಿರು ಗಿಣಿ,ಅಕ್ಕರೆಯಿಂದ ಮರಿಗೆ ಗುಟುಕು ನೀಡುತ್ತಿರುವ ಬಾತುಕೋಳಿ, ಮುಖಾಮುಖಿಯಾಗಿ ಕುಳಿತು ಕೊಂಡು ಏನನ್ನೋ ಗುಟ್ಟಾಗಿ ಮಾತನಾಡಿಕೊಳ್ಳುತ್ತಿರುವ ಬಿಳಿ ಬಣ್ಣದ ಗುಬ್ಬಚ್ಚಿ ಮರಿಗಳು, ಕರಡಿ, ಒಂಟಿ, ಚಿರತೆ, ಹುಲಿ, ಸಿಂಹ, ನವಿಲು, ಮಿಯಾಂ ಎನ್ನುವ ಭಾವದಲ್ಲಿ ಕಾಣುವ ಬೆಕ್ಕು ಒಂದೇ ಎರಡೇ...
ಇಡೀ ಕಾಡುಪ್ರಾಣಿ ಸಂಕುಲದ ಜೀವಿಗಳು ಜೊತೆಗೆ ಆಕಳು, ಆಡು, ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ, ಶಿರಡಿ ಸಾಯಿಬಾಬಾ, ಅಕ್ಕರೆಯಿಂದ ಮಗುವಿಗೆ ಹಾಲುಣಿಸುತ್ತಿರುವ ತಾಯಿ...
ಇವು ಸಂಡೂರು ಪಟ್ಟಣದ ಬೀದಿಯಲ್ಲಿ ಕಂಡುಬಂದ ಬೊಂಬೆಗಳ ಮಾದರಿ.
ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಗಾದೆಯಂತೆ ಸಮಾಜದಲ್ಲಿ ಹೊಟ್ಟೆ ಹೊರೆಯಲು ಒಬ್ಬೊಬ್ಬರದು ಒಂದೊಂದು ವೇಷ, ಬಗೆ ಬಗೆಯ ಕಾಯಕ.
ಅಂತೆಯೇ ಊರೂರು ಅಲೆದು ಅಂದದ ಪಿಂಗಾಣಿ ಗೊಂಬೆಗಳ ಮಾರಿ ಬದುಕು ಸಾಗಿಸುವ ಬೊಂಬೆ ಮಾರಾಟಗಾರರು ಪಟ್ಟಣದಲ್ಲಿ ಬೀಡುಬಿಟ್ಟಿದ್ದಾರೆ.
ಮೊದಲ ನೋಟಕ್ಕೆ ಮರುಳು ಮಾಡಿ ಖರೀದಿಗೆ ಕರೆವ ಪಿಂಗಾಣಿ ಗೊಂಬೆಗಳು ಅನುಪಮ ಅಂದದಿಂದ ಕೂಡಿವೆ.
ಚೆನ್ನೈನಿಂದ ತಂದು ಮಾರಾಟ ಮಾಡುತೇವೆ ಮಕ್ಕಳಿಂದ ಹಿಡಿದು ಮುದುಕರವರೆಗಿನವರೂ ಇಷ್ಟಪಟ್ಟು ಖರೀದಿಗೆ ಮುಂದಾಗುತ್ತಾರೆ ಒಂದು ಗೊಂಬೆ ಮಾರಿದರೆ ಹತ್ತು ರೂಪಾಯಿ, ದೊಡ್ಡ ಗೊಂಬೆಗೆ ಅಬ್ಬಬ್ಬಾ ಅಂಟೆ ಇರುವೈ ರೂಪಾಯಿ ಲಾಭಂ ಅಂತೆ ಸಾರ್ ಎನುತ್ತಾರೆ ಆಂಧ್ರ ಮೂಲದ ಗೊಂಬೆ ಮಾರಾಟಗಾರರು.
ಮನೆಯಲ್ಲಿ ಆಕರ್ಷಣೆಗಾಗಿ ಶೋ ಕೇಸ್‌ನಲ್ಲಿ ಇಡಲು, ಮಕ್ಕಳ ಆಟಿಕೆಯಾಗಿ ಬಹು ಬೇಡಿಕೆ ಇರುವ ಬೊಂಬೆಗಳು ನಿಮಗೆ ಬೇಕೆನಿಸಿದಾಗ ಸಿಗುವುದು ಕಷ್ಟ. ಏಕೆಂದರೆ ಅವುಗಳನ್ನು ಮಾರಿಯೇ ಬದುಕು ಸಾಗಿಸುವ ಜೀವಿಗಳದ್ದು ಅಲೆಮಾರಿ ಬದುಕು. ವ್ಯಾಪಾರ ಹೇಗಿದೆ ಎಂದರೆ ಡಲ್ ಸಾರ್. ಇವನ್ನು ಜೋಪಾನವಾಗಿ ತಂದು ಮಾರಾಟ ಮಾಡೋದೇ ದೊಡ್ಡ ತ್ರಾಸು. ಈಗ ಪ್ಲಾಸ್ಟಿಕ್‌ನ್ಯಾಗಿನ ಗೊಂಬಿಗಳು ಮಾರ್ಕೆಟ್‌ಗೆ ಬಂದಿವೆ. ಆದ್ರು ನಮ್ಮ ಗೊಂಬಿಗಳನ್ನು ಕೊಳ್ಳಲು ಮಕ್ಕಳು, ತಾಯಂದಿರು ಹೆಚ್ಚು ಆಸಕ್ತಿ ತೋರುಸ್ತಾರೆ ಎನ್ನುತ್ತಾನೆ ಗೊಂಬೆ ಮಾರಾಟಗಾರ ರಾಮಕೃಷ್ಣಡು.
ಜೀವವಿರದ ಗೊಂಬೆಗಳ ಮಾರಿ ಜೀವನದ ಹಾದಿ ಸವೆಸುತ್ತಿರುವ ಇವರು ನಾಳೆ ನಿಮ್ಮೂರಿಗೂ ಬರಬಹುದು ಬಂದಾಗ ಈ ನಿರ್ಜೀವ ಬೊಂಬೆ ಖರೀದಿಸಿ ಇವರ ಬದುಕಿಗೆ ಜೀವ ತುಂಬಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.