ADVERTISEMENT

ಭಾರತದ ನಿಜವಾದ ಶತ್ರು ಚೀನಾ: ಗೋಪಾಲ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 9:55 IST
Last Updated 15 ಆಗಸ್ಟ್ 2012, 9:55 IST

 ಬಳ್ಳಾರಿ: `ಪಾಕಿಸ್ತಾನ ಅಥವಾ ಬಾಂಗ್ಲಾದೇಶಗಳು ಭಾರತದ ನಿಜವಾದ ಶತ್ರು ರಾಷ್ಟ್ರಗಳಲ್ಲ. ಬದಲಿಗೆ, ಚೀನಾ ನಮ್ಮ ಪ್ರಬಲ ಶತ್ರು ರಾಷ್ಟ್ರ~ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕ ಗೋಪಾಲ್‌ಜಿ ಅಭಿಪ್ರಾಯಪಟ್ಟರು.

ಹಿಂದೂ ಜಾಗರಣ ವೇದಿಕಯೆ 25ನೇ ವರ್ಷಾಚರಣೆ ಅಂಗವಾಗಿ ಮಂಗಳವಾರ ಸಂಜೆ, ನಗರದ ಕನಕ ದುರ್ಗಮ್ಮ ದೇವಸ್ಥಾನದ ಬಳಿ ಏರ್ಪಡಿಸಿದ್ದ ಅಖಂಡ   ಭಾರತ ಸಂಕಲ್ಪ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ನಕ್ಸಲಿಸಂ ಅನ್ನು ಬೆಂಬಲಿಸುತ್ತ ಇಲ್ಲಿನ ಯುವಕರಿಗೆ ಧನಸಹಾಯ ನೀಡುತ್ತಿರುವ ಚೀನಾ ಭಾರತದ ಪಾಲಿಗೆ ಕಂಟಕವಾಗುತ್ತಿದೆ. ದೇಶದ ಗಡಿಯಲ್ಲಿ ತನ್ನ ಸೇನಾ ನೆಲೆಯನ್ನು ಭದ್ರಗೊಳಿಸುತ್ತ, ನಿತ್ಯವೂ ದಾಳಿ ಮಾಡುತ್ತಿದೆ. ಭಾರತೀಯರು ಕಡಿಮೆ ಬೆಲೆಗೆ ದೊರೆಯುತ್ತವೆ ಎಂಬ ಕಾರಣದಿಂದ ಚೀನಾದಲ್ಲಿ ತಯಾರಿಸಲಾದ ವಸ್ತುಗಳನ್ನು ಖರೀದಿಸಬಾರದು. ಈ ಮೂಲಕ ದೇಶಭಕ್ತಿ ಪ್ರದರ್ಶಿಸಬೇಕು ಎಂದು ಅವರು ಸಲಹೆ ನೀಡಿದರು.

ಭಾರತೀಯ ರಾಜಕಾರಣಿಗಳು, ಯುವಕರು, ರೈತರನ್ನು ಬೀಜಿಂಗ್, ಶಾಂಘ್ಯಾಗಳಿಗೆ ಕರೆದೊಯ್ದು, ತನ್ನ ದೇಶದ ಬಗ್ಗೆ ಗೌರವ ಭಾವನೆ ಮೂಡುವಂತೆ ಚೀನಾ ನೋಡಿಕೊಳ್ಳುತ್ತಿದೆ. ಭಾರತೀಯರು ಇದಕ್ಕೆ ಮರುಳಾಗಬಾರದು ಎಂದು ಅವರು ತಿಳಿಸಿದರು.

`ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ವಿಭಜನೆ ಆಗಿದ್ದರಿಂದ ಭಾರತ ಮಾತೆಯ ಎರಡು ಕೈಗಳು ಕಿತ್ತು ಹೋದಂತಾಗಿದೆ. ಯಾವುದೇ ವಿಗ್ರಹ ತುಂಡಾದರೆ ಹಿಂದೂಗಳು ಅದನ್ನು ಪೂಜೆ ಮಾಡುವುದಿಲ್ಲ. ಅದೇ ರೀತಿ, ತುಂಡಾದ ಭಾರತ ನಮಗೆ ಬೇಡ. ಬದಲಿಗೆ, ಅಖಂಡ ಭಾರತ ನಿರ್ಮಾಣವೇ ನಮ್ಮ ಕನಸು~ ಎಂದು ಅವರು ಹೇಳಿದರು.

`ಹಿಂದೂ ಮುಸ್ಲಿಂ ಭಾಯಿಭಾಯಿ~ ಎಂದು ಅನೇಕ ನಾಯಕರು ಹೇಳುತ್ತಾರೆ. ಆದರೆ, ತಾಯಿ ಒಬ್ಬಳಾಗಿದ್ದರೆ ಮಾತ್ರ ಮಕ್ಕಳಲ್ಲಿ ಸೋದರ ಭಾವನೆ ಮೂಡಲು ಸಾಧ್ಯ ಎಂಬುದನ್ನು ಅವರು ಮರೆಯಬಾರದು.

ಬಾಂಗ್ಲಾದೇಶದಿಂದ ನಿತ್ಯವೂ ಸಾವಿರಾರು ಮುಸ್ಲಿಮರು ಭಾರತದೊಳಗೆ ನುಸುಳಿ, ಇಲ್ಲಿನ ನಾಗರೀಕತೆ ಪಡೆಯುತ್ತಿದ್ದು, ಅದನ್ನು ಕೇಂದ್ರ ಸರ್ಕಾರ ತಡೆಯಬೇಕು ಎಂದು ಅವರು ಕೋರಿದರು.

ನಿತ್ಯವೂ ಚರ್ಚ್ ಮೇಲಿನ ದಾಳಿಯನ್ನೂ, ಹೋಮ್ ಸ್ಟೇ ದಾಳಿಯನ್ನೂ ಖಂಡಿಸುವವರು ಭಾರತೀಯರ ಮೇಲೆ ಬಾಂಗ್ಲಾ ದೇಶಿಯರು ನಡೆಸುತ್ತಿರುವ ದಾಳಿಗಳ ಬಗ್ಗೆ ಚಕಾರ ಎತ್ತದಿರುವುದು ಖಂಡನೀಯ ಎಂದು ಅವರು ದೂರಿದರು.


ಅಸ್ಸಾಂನಲ್ಲಿ ಬುಡೋ ನಿರಾಶ್ರಿತರ ಮೇಲೆ ದಾಳಿ ನಡೆಸಿದವರು ಬಾಂಗ್ಲಾದೇಶದಿಂದ ನುಸುಳಿದ ಮುಸ್ಲಿಮರು. ಹೊರಗಡೆಯಿಂದ ಬಂದು ಇಲ್ಲಿ ದಾಳಿ ನಡೆಸುವ ಮುಸ್ಲಿಮರಿಂದಾಗಿ ಭಾರತೀಯ ಮುಸ್ಲಿಮರಿಗೂ ಕೆಟ್ಟ ಹೆಸರು ಬರುವಂತಾಗಿದೆ ಎಂದು ಅವರು ಹೇಳಿದರು.

ಬ್ರಿಟಿಷರ ವಿರುದ್ಧ ಹೋರಾಡಲು ರೂಪುಗೊಂಡಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಪ್ರಸ್ತುತ ಸರ್ಕಾರದಲ್ಲಿ ಪ್ರಧಾನಿಯಾಗಿರುವ ಮನಮೋಹನ್‌ಸಿಂಗ್ ಇತ್ತೀಚೆಗೆ ಲಂಡನ್‌ಗೆ ತೆರಳಿದಾಗ, ಬ್ರಿಟಿಷರನ್ನು ಕೊಂಡಾಡಿದ್ದಾರೆ. ಭಾರತೀಯರಿಗೆ ಅಂಚೆ, ರೈಲು ಸೌಲಭ್ಯ ನೀಡಿರುವವರು ಬ್ರಿಟಿಷರು. ಇದೀಗ ಮತ್ತೆ ಭಾರತಕ್ಕೆ ಆಗಮಿಸಿ, ಬಂಡವಾಳ ಹೂಡುವಂತೆ ಕೋರಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದರು.

ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕುರುಗೋಡಿನ ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಡಾ.ಬಿ.ಕೆ. ಶ್ರೀನಿವಾಸಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ್, ವೇದಿಕೆಯ ನಗರ ಸಂಚಾಲಕ ಶ್ರೀರಾಮುಲು, ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಗೋವಿಂದ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಅಂಖಡ ಭಾರತ ನಿರ್ಮಾಣ ಸಂಕಲ್ಪ ದಿನಾಚರಣೆ ಅಂಗವಾಗಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಗರದ ವಿವಿಧೆಡೆ ಬೈಕ್ ರ‌್ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT