ADVERTISEMENT

`ಮಕ್ಕಳಲ್ಲಿ ಪರಿಸರದ ತಿಳಿವಳಿಕೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 5:56 IST
Last Updated 14 ಜೂನ್ 2013, 5:56 IST

ಬಳ್ಳಾರಿ: ಚಿಕ್ಕ ಮಕ್ಕಳಲ್ಲಿ ಪರಿಸರದ ಸಂರಕ್ಷಣೆ ಜಾಗೃತಿ ಮೂಡಿಸುವುದಲ್ಲದೆ, ಪರಿಸರದ ಕುರಿತು ಜ್ಞಾನ ಮೂಡಿಸುವುದು ಅತ್ಯಗತ್ಯ ಎಂದು ಜಿಲ್ಲಾ ನ್ಯಾಯಾಧೀಶ ಡಿ.ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ವಾರ್ತಾ ಇಲಾಖೆ,  ಜಿಲ್ಲಾ ನ್ಯಾಯವಾದಿಗಳ ಸಂಘ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗೌತಮ ಬುದ್ಧ ಸ್ಮಾರಕ ವಿದ್ಯಾಸಂಸ್ಥೆ ಹಾಗೂ ಜೆಸಿಐ ಬಳ್ಳಾರಿ ಸ್ಟೀಲ್ ಚಾಪ್ಟರ್‌ಗಳ ಆಶ್ರಯದಲ್ಲಿ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಹಾಗೂ ನಗರ ಹಸಿರೀಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.  ಜನಸಂಖ್ಯೆ ಹೆಚ್ಚಿದಂತೆಲ್ಲ ಮೂಲ ಸೌಲಭ್ಯಗಳಿಗಾಗಿ ಪ್ರಕೃತಿಯನ್ನು ಬಳಕೆ ಮಾಡಲಾಗುತ್ತಿದೆ.  ಪ್ರಕೃತಿ ನಾಶದ ಪ್ರಮಾಣಕ್ಕೆ ತಕ್ಕಂತೆ ಇನ್ನೊಂದು ಕಡೆ ಪರಿಸರ ಬೆಳೆಸಬೇಕಿದೆ. ಇದರಿಂದ ಪರಿಸರ ಸಮತೋಲನ ಸಾಧ್ಯ ಎಂದು ಹೇಳಿದರು.

`ಪರಿಸರ ನಾಶದಿಂದ ಓಝೋನ್ ಪದರ ನಾಶವಾಗುತ್ತಿದ್ದು, ಮನುಷ್ಯ ಚರ್ಮರೋಗಕ್ಕೆ ತುತ್ತಾಗುವಂತಾಗಿದೆ. ಇದು ಎಲ್ಲ ಜೀವಿಗಳಿಗೂ ಕಂಟಕವಾಗಿದೆ. ಪರಿಸರ ಸಂರಕ್ಷಣೆ ಕೇವಲ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಬದಲಿಗೆ, ಪ್ರತಿಯೊಬ್ಬರೂ ಜಾಗೃತರಾಗುವ ಮೂಲಕ ಕಾಡು ಬೆಳೆಸಿ ನಾಡು ಉಳಿಸಬೇಕಿದೆ ಎಂದ ತಿಳಿಸಿದರು.

ವಿಶ್ವ ಪರಿಸರ ವರ್ಷದ ಘೋಷಣೆಯಂತೆ ಪ್ರತಿಯೊಬ್ಬರೂ ನೀರು, ಆಹಾರವನ್ನು ಹೆಚ್ಚು ಪೋಲಾಗದಂತೆ ಬಳಸಿ, ಅಗತ್ಯವಿದ್ದಷ್ಟು ಕಾಡು ಬೆಳೆಸಬೇಕು.  ಪ್ರತಿಯೊಬ್ಬರೂ  ತಮ್ಮ ಹಿತರಕ್ಷಣೆಯ ಮನೋಭಾವ ಮರೆಯಬೇಕಿದೆ ಎಂದು ಸಹಾಯಕ ಪರಿಸರ ಅಧಿಕಾರಿ ಶಿವಮೂರ್ತಿ ವಿವರಿಸಿದರು.

ಕೇವಲ ಸಸಿ ನೆಟ್ಟ ಮಾತ್ರಕ್ಕೆ ಪರಿಸರ ಸಂರಕ್ಷಣೆ ಮಾಡಿದಂತಲ್ಲ. ಸಸಿ ಬೆಳೆದು ಹೆಮ್ಮರವಾಗುವಂತೆ ನೋಡಿಕೊಳ್ಳಬೇಕಲ್ಲದೆ, ಸ್ವಚ್ಛತೆ, ಗ್ರಾಮ, ಪಟ್ಟಣಗಳ ನೈರ್ಮಲೀಕರಣಕ್ಕೂ ಆದ್ಯತೆ ನೀಡುವ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ಕಸದ  ವಿಲೇವಾರಿ, ಪ್ಲಾಸ್ಟಿಕ್ ನಿರ್ವಹಣೆ, ನೀರಿನ ಸದ್ಬಳಕೆ, ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ್ ಹೇಳಿದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷೆ  ಶಾರದಮ್ಮ ಅಧ್ಯಕ್ಷತೆವಹಿಸಿದ್ದರು. ನ್ಯಾಯಾಧೀಶರಾದ ಎಂ.ಎಚ್. ಶಾಂತಾ, ಎಂ.ಎಸ್. ಪಾಟೀಲ್, ಬಿ.ವಿ. ಗುದ್ದಲಿ,  ಎಂ.ಎಲ್. ರಘುನಾಥ, ಕೆ.ಯಮನಪ್ಪ, ಪಾಲಿಕೆ ಸದಸ್ಯ ಮಲ್ಲನಗೌಡ, ಡಾ. ಎಸ್‌ಜೆವಿ ಮಹಿಪಾಲ್, ವಕೀಲರ ಸಂಘದ ಕೋಶಾಧ್ಯಕ್ಷ ಜೆ.ಎಂ. ಜಡೇಶ್, ಜೆಸಿಐ ಅಧ್ಯಕ್ಷ  ದಾಮೋದರ್, ಆದಿತ್ಯ ವಟ್ಟಂ ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಯರ‌್ರೇಗೌಡ ಸ್ವಾಗತಿಸಿದರು. ಡಾ. ಲಕ್ಕಿ ಪೃಥ್ವಿರಾಜ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.