ADVERTISEMENT

ಮಕ್ಕಳ ಸಾವು: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 10:10 IST
Last Updated 7 ಅಕ್ಟೋಬರ್ 2011, 10:10 IST

ಮರಿಯಮ್ಮನಹಳ್ಳಿ: ಡಣಾಪುರ ಬಳಿಯ ಬಿಎಂಎಂ ಇಸ್ಪಾತ್ ಸ್ಪಾಂಜ್ ಐರನ್ ಕಾರ್ಖಾನೆಯವರು ಗ್ರಾಮದ ಬಳಿಯ ಬಯಲು ಪ್ರದೇಶದಲ್ಲಿ ತೋಡಿದ ಆಳವಾದ ಗುಂಡಿಯಲ್ಲಿ ಈಜಲು ಹೋಗಿ ಮಕ್ಕಳಿಬ್ಬರು ಮುಳುಗಿ ಮೃತಪಟ್ಟ ಸ್ಥಳಕ್ಕೆ ಸುದ್ದಿ ತಿಳಿಯುತ್ತಿದ್ದಂತೆ ಗುಂಪು ಗುಂಪಾಗಿ ಜಮಾಯಿಸಿದ ನೂರಾರು ಗ್ರಾಮಸ್ಥರು ಕಾರ್ಖಾನೆಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಿ ಪ್ರತಿಭಟಿಸಿದರು.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೂ ಯಾವುದೇ ರೀತಿಯ ರಕ್ಷಣೆಯಿಲ್ಲ, ಕಾರ್ಖಾನೆಯವರು ಬಿಡುವ ಕಪ್ಪು ಹೊಗೆಯಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುವದಲ್ಲದೆ ಬೆಳೆಗಳಿಗೂ ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪಕ್ಕದಲ್ಲೇ ಇಂತಹ ಗುಂಡಿ ತೋಡುವ ಕಾಮಗಾರಿಗೆ ಕಾರ್ಖಾನೆಯವರಿಗೆ ಹೇಗೆ ಪಂಚಾಯ್ತಿಯಿಂದ ಪರವಾನಗಿ ನೀಡಿದ್ದೀರಿ ಎಂದು ಪರಿಸರವಾದಿಗಳು ಹಾಗೂ ಗ್ರಾಮಸ್ಥರು ಆಕ್ಷೇಪಕ್ಕೆ, ಪಂಚಾಯ್ತಿಯಿಂದ ಯಾವುದೇ ರೀತಿಯ ಪರವಾನಿಗೆ ಪಡೆಯದೇ ಗುಂಡಿ ತೋಡುತ್ತಿದ್ದಾರೆ ಎಂದು ಡಣಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್. ಮುದುಕಪ್ಪ ಆರೋಪಿದರು.

ಇಂತಹ ಬಯಲು ಪ್ರದೇಶದಲ್ಲಿ ಕಾರ್ಖಾನೆಯವರು ಭಾರಿ ಗಾತ್ರದಲ್ಲಿ ತೋಡಿದ ಗುಂಡಿಗೆ ಸೂಕ್ತ ತಡೆಗೋಡೆ ಯಾಗಲಿ ಹಾಗೂ ಕಾವಲುಗಾರರನ್ನು ನೇಮಿಸದೆ ಇರುವುದು ಇಂತಹ ಘಟನೆ ನಡೆಯಲು ಕಾರಣ ಎಂದು ಆಕ್ಷೇಪಿಸಿದ ಗ್ರಾಮಸ್ಥರು, ಘಟನೆ ನಡೆದು ಸಮಯ ಕಳೆದರೂ ಸ್ಥಳ ಭೇಟಿ ನೀಡಿ ಸ್ಪಂದಿಸದ ಕಾರ್ಖಾನೆಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ಮಕ್ಕಳ ಮೃತದೇಹಗಳನ್ನು ಸ್ಥಳದಲ್ಲಿಟ್ಟು ಪ್ರತಿಭಟಿಸಿ ಕಾರ್ಖಾನೆಯವರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.

ನಂತರ ಮುಖಂಡರ ಸಮ್ಮುಖದಲ್ಲಿ ನಡೆದ ಮಾತುಕತೆಯಿಂದ ಪ್ರತಿಭಟನೆ ಯನ್ನು ಹಿಂಪಡೆದರು. ಅಹಿತಕರ ಘಟನೆ ಜರುಗದಂತೆ ಒಂದು ಕೆಎಸ್‌ಆರ್‌ಪಿ ತುಕಡಿ ಹಾಗೂ ಜಿಲ್ಲಾ ಸಶಸ್ತ್ರ ಪಡೆಯ ತುಕಡಿ ಸ್ಥಳದಲ್ಲಿ ಬೀಡುಬಿಟ್ಟಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.