ADVERTISEMENT

ಮನೆ ಅಂಗಳದ ನೀರೂ ಮಾರಾಟದ ಸರಕು !

ಕೆ.ನರಸಿಂಹ ಮೂರ್ತಿ
Published 16 ಜೂನ್ 2017, 8:46 IST
Last Updated 16 ಜೂನ್ 2017, 8:46 IST
ಬಳ್ಳಾರಿಯ ರಾಮಾಂಜನೇಯ ನಗರದ ಮನೆಯೊಂದರ ಕೊಳವೆಬಾವಿಯಿಂದ ಟ್ಯಾಂಕರ್‌ಗೆ ನೀರು ತುಂಬಿಸುತ್ತಿರುವುದು
ಬಳ್ಳಾರಿಯ ರಾಮಾಂಜನೇಯ ನಗರದ ಮನೆಯೊಂದರ ಕೊಳವೆಬಾವಿಯಿಂದ ಟ್ಯಾಂಕರ್‌ಗೆ ನೀರು ತುಂಬಿಸುತ್ತಿರುವುದು   

ಬಳ್ಳಾರಿ: ವಾಣಿಜ್ಯ ಉದ್ದೇಶಕ್ಕಾಗಿಯೇ ಕೊಳವೆಬಾವಿ ಕೊರೆಸಿ ನೀರು ಪೂರೈಸುವುದು ಸಾಮಾನ್ಯ. ಆದರೆ ನಗರದ ಕೆಲವೆಡೆ ಮನೆ ಮಾಲೀಕರು, ತಮ್ಮ ಮನೆ ಬಳಕೆಗೆಂದು ಕೊರೆಸಿದ ಕೊಳವೆಬಾವಿ ನೀರನ್ನೇ ಟ್ಯಾಂಕರ್‌ ಮೂಲಕ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಮನೆಯಂಗಳದ ನೀರನ್ನೇ ಮಾರಾಟದ ಸರಕಾಗಿಸಿದ್ದಾರೆ.

ಟ್ಯಾಂಕರ್‌ಗಳಿಂದ ಮನೆಗಳಿಗೆ ನೀರು ಪೂರೈಸುವುದನ್ನು ಎಲ್ಲೆಡೆ ಕಾಣಬಹುದು. ಆದರೆ ಮನೆಗಳಿಂದಲೇ ಟ್ಯಾಂಕರ್‌ಗೆ ನೀರು ತುಂಬಿಸುವ ದೃಶ್ಯಗಳಿಗೂ ನಗರ ಸಾಕ್ಷಿಯಾಗಿದೆ. ಮನೆಗಳಿಗೆ, ಹಾಸ್ಟೆಲ್‌ಗಳಿಗೆ, ಕಟ್ಟಡ ನಿರ್ಮಾಣ ಉದ್ದೇಶಕ್ಕೆ ಈ ನೀರನ್ನು ಮಾರಾಟ ಮಾಡಲಾಗುತ್ತಿದೆ.

ತುಂಗಭದ್ರಾ ಜಲಾಶಯವನ್ನೇ ನೆಚ್ಚಿಕೊಂಡಿರುವ ಪಾಲಿಕೆಯು ನೀರು ಪೂರೈಕೆಯನ್ನು 18–20ದಿನಕ್ಕೊಮ್ಮೆ ಪೂರೈಸುತ್ತಿದೆ. ಮಾರ್ಚ್‌ ತಿಂಗಳಲ್ಲಿ ನಡೆದಿದ್ದ ಸಾಮಾನ್ಯ ಸಭೆಯಲ್ಲಿ, ಎಲ್ಲ 35 ವಾರ್ಡ್‌ಗಳಿಗೂ ತಲಾ ಒಂದರಂತೆ ಟ್ಯಾಂಕರ್‌ ನೀರು ಪೂರೈಸಲು ಅನುದಾನ ಮೀಸಲಿಡಬೇಕು ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದ್ದರು.

ADVERTISEMENT

ಆಗ ‘ಅಂಥ ಸಮಸ್ಯೆ ಏನಿದೆ?’ ಎಂದು ಕೇಳಿದ್ದ ಶಾಸಕ ಕೆ.ಸಿ.ಕೊಂಡಯ್ಯ ಸದಸ್ಯರ ಅಸಮಾಧಾನವನ್ನೂ ಎದುರಿಸಿದ್ದರು. ಆ ಬಳಿಕ ಪಾಲಿಕೆಯು ಬೇಡಿಕೆ ಬಂದ ಕಡೆಗೆ ನಿರಂತರ ಉಚಿತ ಟ್ಯಾಂಕರ್‌ ನೀರನ್ನು ಪೂರೈಸುತ್ತಿದೆ.

‘ಅಂತರ್ಜಲ ಸಂರಕ್ಷಣೆಗಾಗಿ ಕೊಳವೆಬಾವಿ ಕೊರೆಯುವುದು ಅಂತಿಮ ಆಯ್ಕೆ’ ಎಂಬ ನಿಲುವು ಪಾಲಿಕೆಯದು. ಆದರೆ ಖಾಸಗಿ ಕೊಳವೆಬಾವಿಗಳ ಮಾಲೀಕರು ಮಾತ್ರ ನೀರಿನ ಮಿತ ಬಳಕೆಯ ಪಾಠಕ್ಕೆ ಕಿವುಡಾಗಿ, ಮಾರಾಟಕ್ಕೂ ಮುಂದಾಗಿರುವುದು, ಸದ್ಯದ ಬೆಳೆವಣಿಗೆ.

ಟ್ರಿಪ್‌ಗೆ ₹ 500: ನಗರದ ಜಯನಗರ, ರಾಮಾಂಜನೇಯ ನಗರ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಸಂಚರಿಸಿದರೆ, ಮನೆಗಳ ಉಪಯೋಗಕ್ಕೆಂದು ಕೊರೆಸಿದ ಕೊಳವೆಬಾವಿಗಳಿಂದಲೇ ನೀರನ್ನು ಟ್ಯಾಂಕರ್‌ಗಳಿಗೆ ತುಂಬುವ ದೃಶ್ಯಗಳು ಕಂಡುಬರುತ್ತವೆ.

ಪ್ರತಿ ಟ್ಯಾಂಕರ್‌ ನೀರಿಗೆ ಮಾಲೀಕರು ನಿಗದಿ ಮಾಡಿರುವ ದರ ₹ 500ರಿಂದ 700. ದಿನವೊಂದರಲ್ಲಿ ಕನಿಷ್ಠ 10 ಟ್ರಿಪ್‌ ನೀರು ಮಾರಾಟ ಮಾಡಿದರೂ, ಅವರಿಗೆ ದೊರಕುವ ಆದಾಯ ₹ 5,000. ಮನೆ ಮಾಲೀಕರು ನೀರು ಮಾರಾಟ ಮಾಡಿ ದಿನವೂ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಂತರ್ಜಲದ ಅತಿಯಾದ ಬಳಕೆಗೂ ದಾರಿ ಮಾಡಿದ್ದಾರೆ. ಇದನ್ನು ಕಂಡರೂ, ನೆರೆಹೊರೆ ನಿವಾಸಿಗಳು ಪ್ರಶ್ನಿಸದೇ ಸುಮ್ಮನಿದ್ದಾರೆ.

ಟ್ಯಾಂಕರ್ ನೀರು ದರಕ್ಕಿಲ್ಲ ನಿಯಂತ್ರಣ
ಖಾಸಗಿ ಟ್ಯಾಂಕರ್‌ ನೀರಿನ ದರಕ್ಕೆ ನಿಯಂತ್ರಣವೇ ಇಲ್ಲದ ಪರಿಸ್ಥಿತಿ ನಗರದಲ್ಲಿದೆ. ತುರ್ತಾಗಿ ನೀರು ಬೇಕೆಂದರೆ ಕನಿಷ್ಠ ₹ 700ರಿಂದ 800 ಕೊಡಬೇಕು. ಇಲ್ಲವಾದರೆ ನೀರು ಪೂರೈಸುವವರು ಸಂಜೆಯಾದರೂ ಬರುವುದಿಲ್ಲ ಎನ್ನುತ್ತಾರೆ ರಾಮಾಂಜನೇಯ  ನಗರದ ನಿವಾಸಿ.

‘ಪಾಲಿಕೆಯ ನೀರು ಇಪ್ಪತ್ತು ದಿನವಾದರೂ ಬಾರದಿದ್ದುದರಿಂದ ಕೆಲವು ದಿನಗಳ ಹಿಂದೆ ನೆರೆ ಮನೆಯವರೊಂದಿಗೆ ಸೇರಿ ಒಂದು ಟ್ಯಾಂಕರ್‌ ನೀರನ್ನು ಖರೀದಿಸಿ ಹಂಚಿಕೊಂಡೆವು. ಇಷ್ಟು ವರ್ಷಗಳಲ್ಲಿ ಈ ಕಷ್ಟ ಎಂದಿಗೂ ಬಂದಿರಲಿಲ್ಲ’ ಎಂದು ವಿಷಾದಿಸಿದರು.

‘ಕುಡಿಯುವ ನೀರು’ ಎಂಬ ಫಲಕ!
ಮನೆಗಳ ಕೊಳವೆಬಾವಿಗಳಿಂದ ನೀರು ಸಂಗ್ರಹಿಸುವ ಟ್ಯಾಂಕರ್‌ಗಳ ಮೇಲೆ ‘ಕುಡಿಯುವ ನೀರು’ ಎಂದೇ ಬರೆಯಲಾಗಿದೆ. ಆದರೆ ಆ ನೀರನ್ನು ಖರೀದಿದಾರರು ಕುಡಿಯಲಿಕ್ಕೆ ಬಳಸುವುದಿಲ್ಲ. ಬದಲಿಗೆ ನೀರು ಖಾಲಿಯಾದ ಸಂದರ್ಭಗಳಲ್ಲಿ ಮನೆಗಳಲ್ಲಿರುವ ತೊಟ್ಟಿಗಳಿಗೆ ತುಂಬಿಸಿಕೊಳ್ಳುತ್ತಾರೆ.

ಕುಡಿಯುವುದಕ್ಕೆ ಬಿಟ್ಟು ಉಳಿದೆಲ್ಲ ಉದ್ದೇಶಕ್ಕೂ ಬಳಸುತ್ತಾರೆ. ಅಲ್ಲದೆ, ಕಟ್ಟಡ ನಿರ್ಮಾಣ ಉದ್ದೇಶಕ್ಕೂ ಮನೆಗಳ ಕೊಳವೆಬಾವಿ ನೀರು ಬಳಕೆಯಾಗುತ್ತಿದೆ. ಕೆಲವು ಹಾಸ್ಟೆಲ್‌ಗಳಿಗೂ ಇದೇ ನೀರು ಪೂರೈಕೆಯಾಗುತ್ತಿದೆ ಎನ್ನಲಾಗಿದೆ.

* * 

ಮನಸ್ಸಿಗೆ ಬಂದಂತೆ ನೀರಿನ ದರ ನಿಗದಿ ಮಾಡುವಂತಿಲ್ಲ. ಖಾಸಗಿ ಟ್ಯಾಂಕರ್‌ಗಳ ಮಾಲೀಕರ ಸಭೆ ನಡೆಸಿ ಈ ಬಗ್ಗೆ ಸೂಚನೆ ನೀಡಲಾಗುವುದು
ಎಂ.ಕೆ.ನಲ್ವಡಿ
ಪಾಲಿಕೆ ಆಯುಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.