ADVERTISEMENT

ಮುಗಿಯದ ರಸ್ತೆ ಕಾಮಗಾರಿ,ದೊರೆಯದ ರೈಲು ಸೇವೆ

ಹೊಸ ವರ್ಷದಲ್ಲೂ ಮುಂದುವರಿದ ಗಣಿ ನಾಡಿನ ಸಮಸ್ಯೆ...

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 8:31 IST
Last Updated 7 ಜನವರಿ 2014, 8:31 IST

ಸಂಡೂರು: ತಾಲ್ಲೂಕಿನ ಕೆಲ ಜ್ವಲಂತ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಗದ ಕಾರಣ, ಅಂತಹ ಕೆಲ ಸಮಸ್ಯೆಗಳು ಹೊಸ ವರ್ಷ 2014ಕ್ಕೂ ಮುಂದುವರಿದಿವೆ. ಅಂತಹವುಗಳಲ್ಲಿ ಪ್ರಮುಖ ಸಮಸ್ಯೆಗಳೆಂದರೆ,  ಚಾಲನೆ ನೀಡಿ ಎರಡು ವರ್ಷಗಳು ಕಳೆದರೂ ಇನ್ನೂ ಮುಕ್ತಾಯವಾಗದ ಕೂಡ್ಲಿಗಿ–ಸಂಡೂರು–ತೋರಣಗಲ್ಲು ರಸ್ತೆ ನಿರ್ಮಾಣ ಕಾಮಗಾರಿ, ನಾರಿಹಳ್ಳಕ್ಕೆ ತುಂಗಾಭದ್ರ ನದಿ ನೀರನ್ನು ಪೂರೈಸುವ ಕಾಮಗಾರಿ ನನೆಗುದಿಗೆ ಬಿದ್ದಿರುವುದು, ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಗೂಡ್ಸ್ ರೈಲು ತಿರುಗಾಡುತ್ತಿದ್ದರೂ, ಪ್ರಯಾಣಿಕರ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸದಿರುವುದು ಪ್ರಮುಖ ಸಮಸ್ಯೆಗಳಾಗಿವೆ.

ಅಪೂರ್ಣವಾಗಿರುವ ತೋರಣಗಲ್ಲು–ಸಂಡೂರು–ಕೂಡ್ಲಿಗಿ ರಸ್ತೆ ನಿರ್ಮಾಣ ಕಾಮಗಾರಿ– ಈ ರಸ್ತೆ ನಿರ್ಮಾಣ ಕಾಮಗಾರಿಗೆ 2011 ರಲ್ಲಿಯೇ ಚಾಲನೆ ನೀಡಲಾಗಿತ್ತು. ಈ ರಸ್ತೆಯ ಜೊತೆಯಲ್ಲಿಯೇ ಪ್ರಾರಂಭಿಸಲಾಗಿದ್ದ ಸಂಡೂರು–ಹೊಸಪೇಟೆ ರಸ್ತೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದರಿಂದ, ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಆದರೆ, ಜಿಲ್ಲಾ ಕೇಂದ್ರವಾದ ಬಳ್ಳಾರಿಗೆ ತೆರಳಬೇಕೆಂದರೆ, ತೋರಣಗಲ್ಲು ಮಾರ್ಗವಾಗಿ ತೆರಳಬೇಕು. ಆದರೆ, ಈ ಮಾರ್ಗದಲ್ಲಿನ ರಸ್ತೆ ನಿರ್ಮಾಣ ಕಾರ್ಯ ಅಪೂರ್ಣಗೊಂಡಿದ್ದು, ನಿಧಾನಗತಿಯಲ್ಲಿ ಸಾಗುತ್ತಿರುವುದು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತುಂಬ ತೊಂದರೆಯಾಗಿದೆ. 

ತುಂಗಾಭದ್ರ ನದಿ ನೀರು ಪೂರೈಕೆ ಕಾರ್ಯ ನನೆಗುದಿಗೆ–ತಾಲ್ಲೂಕು ಕೇಂದ್ರವಾದ ಸಂಡೂರಿಗೆ ಮತ್ತು ದೋಣಿಮಲೈನಲ್ಲಿರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ)ದ ಟೌನ್ ಶಿಪ್ ಮತ್ತು ಪ್ಲಾಂಟ್ ಗಳಿಗೆ ಕುಡಿಯುವ ನೀರು ಪೂರೈಸುವ ಮೂಲವಾಗಿರುವ ತಾಲ್ಲೂಕಿನ ತಾರಾನಗರದ ಬಳಿಯಲ್ಲಿನ ನಾರಿಹಳ್ಳ ಜಲಾಶಯಕ್ಕೆ ತುಂಗಾಭದ್ರಾ ನದಿ ನೀರನ್ನು ಪೂರಣ ಮಾಡುವ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಕಾರ್ಯಕ್ಕೆ ಚಾಲನೆ ನೀಡಿ, ಕೆಲ ವರ್ಷಗಳೆ ಕಳೆದಿದ್ದರೂ, ಈ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.

ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ಸಮರ್ಪಕ ಪ್ರಮಾಣದಲ್ಲಿ ಮಳೆಯಾಗದ ಕಾರಣ, ಜಲಾಶಯದಲ್ಲಿ ನೀರಿನ ಪ್ರಮಾಣ ಕ್ರಮೇಣ ಕಡಿಮೆಯಾಗತೊಡಗಿದೆ. ಈಗಿರುವ ನೀರನ್ನು ಈ ಎರಡು ಪ್ರದೇಶಗಳಿಗೆ ಇನ್ನು ಕೇವಲ ಮೂರ್ನಾಲ್ಕು ತಿಂಗಳುಗಳು ಪೂರೈಸಬಹುದಾಗಿದೆ. ನಂತರ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎನ್ನುತ್ತವೆ ಬಲ್ಲ ಮೂಲಗಳು.

ಹಳಿಗಳ ಮೇಲೆ ಪ್ಯಾಸೆಂಜರ್ ರೈಲು ಸಂಚಾರವಿಲ್ಲ: ಇಲ್ಲಿ ದೊರೆಯುವ ಅದಿರನ್ನು ಸಾಗಾಣಿಕೆ ಮಾಡಲು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈಲು ಹಳಿಗಳನ್ನು ಹಾಕಲಾಗಿದೆ. ಇಲ್ಲಿನ ಅದಿರಿನ ಸಾಗಾಣಿಕೆಯಿಂದಾಗಿ, ರೈಲ್ವೆ ಇಲಾಖೆ ಮತ್ತಿತರ ಕೆಲ ಇಲಾಖೆಗಳಿಗೆ ವಾರ್ಷಿಕ ಸಾವಿರಾರು ಕೋಟಿ ರೂಪಾಯಿಗಳ ಆದಾಯ ಬರುತ್ತಿದೆ. ತಾಲ್ಲೂಕು ಕೇಂದ್ರವಾದ ಸಂಡೂರಿನ ಎರಡು–ಮೂರು ಕಿ.ಮೀ. ಅಂತರದಲ್ಲಿ ರೈಲು ಹಳಿಗಳಿದ್ದು, ಅಲ್ಲಿ ಗೂಡ್ಸ್ ಗಾಡಿಗಳು ತಿರುಗಾಡುತ್ತಿದ್ದರೂ,  ಪ್ಯಾಸೆಂಜರ್ ರೈಲು ಸಂಚಾರವಿಲ್ಲ.

ಈ ಹಿಂದೆ ಹೊಸಪೇಟೆಯಿಂದ ತಾಲ್ಲೂಕಿನ ಯಶ­ವಂತನಗರದ ಮೂಲಕ ಸ್ವಾಮಿಹಳ್ಳಿ ನಡುವೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲು ಗೇಜ್ ಪರಿವರ್ತನೆ ನೆಪದಲ್ಲಿ 1995 ರಲ್ಲಿ ನಿಂತಿದ್ದು ಇನ್ನೂ ಪ್ರಾರಂಭವಾಗಿಲ್ಲ. ಹಳಿಗಳಿದ್ದು, ಅವುಗಳ ಮೇಲೆ ಗೂಡ್ಸ್ ಗಾಡಿಗಳು ತಿರುಗಾಡುತ್ತಿದ್ದರೂ, ಅವುಗಳ ಮೇಲೆ ಪ್ಯಾಸೆಂಜರ್ ರೈಲು ಓಡಿಸದ ರೈಲ್ವೆ ಇಲಾಖೆಯ ಮಲತಾಯಿ ಧೋರಣೆ ಇನ್ನೂ ಮುಂದುವರಿದಿದೆ ಎಂಬ ಆರೋಪ ಸಾರ್ವಜನಿಕರದ್ದು.

  ರಾಜ್ಯ ಸರ್ಕಾರವೂ ಈ ಕುರಿತಂತೆ ಪ್ರಯತ್ನ ನಡೆಸದ ಕಾರಣ,  ಇಲ್ಲಿಯ ಜನತೆ ರೈಲ್ವೆ ಪ್ರಯಾಣ ಸೌಲಭ್ಯದಿಂದ ವಂಚಿ­ತ­ರಾಗುವಂತಾಗಿದೆ. ಎದುರಿಗೆ ರೈಲು ಸಂಚರಿ­ಸುತ್ತಿದ್ದರೂ, ಅದರಲ್ಲಿ ಸಂಚರಿಸದ ಪರಿಸ್ಥಿತಿ ಸಂಡೂರಿಗರದ್ದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT