ADVERTISEMENT

ರಥಕ್ಕೆ ಕೋಳಿ ತೂರುವ ಆಚರಣೆ

ಕೂಡ್ಲಿಗಿಯಲ್ಲಿ ಬಿಕ್ಕಿ ಮರಡಿ ದೇವಿಯ ಜಾತ್ರೆ ಇಂದು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 5:41 IST
Last Updated 29 ಏಪ್ರಿಲ್ 2018, 5:41 IST
ಕೊಟ್ಟೂರು ಪಟ್ಟಣದ ಹೊರವಲಯದ ಕೆರೆ ದಂಡೆಯಲ್ಲಿ ಬಿಕ್ಕಿಮರಡಿ ದುರುಗಮ್ಮನ ರಥೋತ್ಸವದಲ್ಲಿ ಭಕ್ತರು ಜೀವಂತ ಕೋಳಿಗಳನ್ನು ತೂರುವ ದೃಶ್ಯ (ಸಂಗ್ರಹ ಚಿತ್ರ)
ಕೊಟ್ಟೂರು ಪಟ್ಟಣದ ಹೊರವಲಯದ ಕೆರೆ ದಂಡೆಯಲ್ಲಿ ಬಿಕ್ಕಿಮರಡಿ ದುರುಗಮ್ಮನ ರಥೋತ್ಸವದಲ್ಲಿ ಭಕ್ತರು ಜೀವಂತ ಕೋಳಿಗಳನ್ನು ತೂರುವ ದೃಶ್ಯ (ಸಂಗ್ರಹ ಚಿತ್ರ)   

ರಥಕ್ಕೆ ಬಾಳೆಹಣ್ಣು, ಉತ್ತತ್ತಿ ತೂರುವುದು, ದೇವಿ ಜಾತ್ರೆಗಳಾದರೆ ಕುರಿ, ಕೋಳಿ, ಬಲಿಕೊಡುವುದು ಸಾಮಾನ್ಯ. ಆದರೆ ಇಲ್ಲಿ ಯಾವುದೇ ಪ್ರಾಣಿ ಬಲಿ ನೀಡದೇ ಜೀವಂತ ಕೋಳಿಗಳನ್ನೇ ರಥಕ್ಕೆ ತೂರುವುದು ವಿಶೇಷ.

ಈ ವಿಶೇಷ ಕಣ್ತುಂಬಿಕೊಳ್ಳಲು ಕೂಡ್ಲಿಗಿ ಸಮೀಪದ ಕೊಟ್ಟೂರು ಹೊರವಲಯದ ಐತಿಹಾಸಿಕ ಕೆರೆ ದಂಡೆಯ ಮೇಲಿನ ಬಿಕ್ಕಿ ಮರಡಿ ದೇವಿಯ ಜಾತ್ರೆಗೆ ಭಾನುವಾರ (ಏ.29) ಬರಬೇಕು.

ಇಲ್ಲಿನ ಭಕ್ತರು ದೇವಿಯ ರಥಕ್ಕೆ ಜೀವಂತ ಕೋಳಿಗಳನ್ನು ತೂರಿ ತಮ್ಮ ಭಕ್ತಿಯನ್ನು ಸಮರ್ಪಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಪ್ರತಿ ವರ್ಷ ಬೌದ್ಧ ಪೌರ್ಣಿಮೆಯಂದು ಈ ಉತ್ಸವ ನಡೆಯುತ್ತದೆ.

ADVERTISEMENT

ಪಟ್ಟಣದ ಪ್ರತಿಯೊಬ್ಬರ ಮನೆಯಲ್ಲೂ ಸಿಹಿ ಊಟವನ್ನು ತಯಾರಿಸಿ ಎಡೆ ಅರ್ಪಿಸುತ್ತಾರೆ. ಇಡೀ ಜಾತ್ರೆಯ ವಿಧಿ ವಿಧಾನಗಳು ಕೇವಲ 4 ಗಂಟೆ ಅವಧಿಯೊಳಗೆ ಮುಗಿದುಹೋಗುತ್ತದೆ. ಸಂಜೆ 4 ಗಂಟೆಗೆ ದೇವಿಯ ಪೂಜಾ ಕಾರ್ಯಗಳು ಆರಂಭವಾಗಿ 5.30ಕ್ಕೆ ರಥೋತ್ಸವ ನಡೆಯುತ್ತದೆ. ನಂತರ ದೇವಿಯ ಗುಡಿ ತುಂಬಿಸುವುದು ಸೇರಿದಂತೆ ಎಲ್ಲಾ ಕಾರ್ಯಗಳು ರಾತ್ರಿ 8 ಕ್ಕೆ ಮುಕ್ತಾಯಗೊಳ್ಳುತ್ತವೆ.

ಸಂಜೆ 5.50 ರ ಸಮಯವಾಗುತ್ತಿದ್ದಂತೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ನಾಯಕ ಜನಾಂಗದ ಆಯಗಾರರು ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಗುಡಿಯಿಂದ ಹೊರತಂದು ರಥದಲ್ಲಿ ಇರಿಸುತ್ತಾರೆ. ನಂತರ ದೇವರ ಪಟವನ್ನು ಹರಾಜು ಹಾಕುತ್ತಿದ್ದಂತೆಯೇ ಕೊಟ್ಟೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವಿಯ ರಥಕ್ಕೆ ಜೀವಂತ ಕೋಳಿಗಳನ್ನು ತೂರಿ ಭಕ್ತಿಯನ್ನು ಸಮರ್ಪಿಸುತ್ತಾರೆ.

ಮುಗಿಬೀಳುವರು: ರಥಕ್ಕೆ ತೂರಿದ ಕೋಳಿಗಳನ್ನು ಹಿಡಿಯಲು ನಾ ಮುಂದು ತಾ ಮುಂದು ಎಂದು ಭಕ್ತರು ಮುಗಿಬೀಳುವ ವೇಳೆಯೂ ಸಂಭ್ರಮ ಮೇರೆ ಮೀರುತ್ತದೆ. ಕೈಗೆ ಸಿಕ್ಕ ಕೋಳಿಗಳನ್ನು ತೆಗೆದುಕೊಂಡು ಭಕ್ತರು ಮನೆಗೆ ಹೋಗುತ್ತಾರೆ. ಕೋಳಿಗಳನ್ನು ಬಳಸಿ ಯಾವುದೇ ಕಾರಣಕ್ಕೂ ಅಡುಗ ಮಾಡದೆ ಮನೆಯಲ್ಲಿ ಸಾಕಿ ಮತ್ತೆ ಮುಂದಿನ ವರ್ಷದ ರಥೋತ್ಸವದಲ್ಲಿ ತಂದು ತೂರುತ್ತಾರೆ.

ಇಲ್ಲಿ ಜಾತ್ರೆಯ ದಿನ ಮಾತ್ರ ದುರುಗಮ್ಮ ದೇವಿಯ ವಿಗ್ರಹವನ್ನು ಗುಡಿಯಲ್ಲಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಉಳಿದ ದಿನಗಳಲ್ಲಿ ಪಟ್ಟಣದ ಇನ್ನೊಂದು ಗುಡಿಯಲ್ಲಿಟ್ಟು ಪೂಜಿಸುವುದು ಸಂಪ್ರದಾಯವಾಗಿದೆ. ನವದಂಪತಿಗಳು ಈ ದೇವಿಯ ರಥದ ಕಳಸವನ್ನು ನೋಡಿ ಪುನೀತರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಮತ್ತೊಂದು ವಿಶೇಷ.

ಪಟ್ಟಣದಿಂದ ಸುಮಾರು 2 ಕಿ.ಮೀ. ದೂರವಿರುವ ಈ ಜಾತ್ರಾ ಸ್ಥಳಕ್ಕೆ ಬರಲು ಸ್ವಂತ ವಾಹನವಿರಬೇಕು ಅಥವಾ ಆಟೊರಿಕ್ಷಾಗಳನ್ನು ಆಶ್ರಯಿಸಬೇಕು.

-ಎ.ಎಂ. ಸೋಮಶೇಖರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.