ADVERTISEMENT

ರಾಜ್ಯದಲ್ಲಿ ಅಬ್ಬರಿಸುತ್ತಿದೆ ಕುಂಭದ್ರೋಣ ಮಳೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 5:49 IST
Last Updated 15 ಅಕ್ಟೋಬರ್ 2017, 5:49 IST

ಹೊಳಲು: ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು, ಗಾದೆ ಸುಳ್ಳಾದರೂ ಭವಿಷ್ಯ ಸುಳ್ಳಾಗದು’ ಎಂಬಂತೆ ನಾಡಿನ ಹೆಸರಾಂತ ಸುಕ್ಷೇತ್ರವಾಗಿರುವ ಮೈಲಾರಲಿಂಗೇಶ್ವರನ ದೇವವಾಣಿ ಭವಿಷ್ಯವನ್ನು ನೂರಕ್ಕೆ ನೂರರಷ್ಟು ಸತ್ಯವಾಗಿಸಿದೆ. ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್’ ಎಂಬ ದೇವವಾಣಿಯಂತೆ ರಾಜ್ಯದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ.

ದೇವವಾಣಿಯಂತೆ ಅತಿವೃಷ್ಠಿ ಕಪಿಲಮುನಿಗಳ ಪೀಠದ ಗುರುಗಳಿಂದ ದೀಕ್ಷೆ ಪಡೆದ ಗೊರವಯ್ಯ ನುಡಿಯುವ ಕಾರಣಿಕದಂತೆ ಪ್ರಸಕ್ತ ವರ್ಷದ ಮಳೆ, ಬೆಳೆಗಳು ರಾಜಕೀಯ ಏಳು ಬೀಳನ್ನು ನಿರ್ಧರಿಸುತ್ತದೆ. ಅಂಬಲಿ ಹಳಸಿತು ಕಂಬಳಿ ಬೀಸಿತು ಎಂದರೆ ವಿಪರೀತ ಮಳೆಯಿಂದ ಅತಿವೃಷ್ಟಿ ಸಂಭವಿಸಿ ಕೊಯ್ಲಿಗೆ ಬಂದ ಬೆಳಗಳು ನಾಶವಾಗಿ ಹೋಗುತ್ತವೆ ಎಂದು ಜ್ಞಾನಿಗಳು ಅರ್ಥೈಸುತ್ತಾರೆ.

ಸಾಮಾನ್ಯವಾಗಿ ಮುಂಗಾರು ಪ್ರಾರಂಭದಲ್ಲಿ ಅಬ್ಬರಿಸಬೇಕಿದ್ದ ಮಳೆ ಈಗ ಬೆಳೆಗಳು ಕೈಸೇರುವ ವೇಳೆಯಲ್ಲಿ ಆರ್ಭಟಿಸುತ್ತಿದೆ. ಮಳೆರಾಯನ ರೌದ್ರ ನರ್ತನದಿಂದಾಗಿ ಹಿಂದೆಂದೂ ತುಂಬಿ ಹರಿಯದ ಕೆರೆ, ಕೋಡಿ, ಹಳ್ಳಗಳು ತುಂಬಿ ಹರಿಯುತ್ತಿವೆ. ರೈತರ ಜಮೀನುಗಳು ಜಲಾವೃತಗೊಂಡು ಬೆಳೆಗಳು ನಾಶವಾಗುತ್ತಿವೆ. ಹವಾಮಾನ ವೈಪರಿತ್ಯದಿಂದ ಸೈನಿಕ ಹುಳುಗಳು ಹೆಚ್ಚಾಗಿ, ಬೆಳೆಗಳನ್ನು ತಿಂದು ಹಾಕುತ್ತಿವೆ. ಕಳೆದ ಮೂರು ವರ್ಷದಿಂದ ಬರದ ಭೀಕರತೆಯಿಂದ ತತ್ತರಿಸಿ ಹೋಗಿದ್ದ ರೈತರು ಮತ್ತೆ ಸಂಕಷ್ಟ ಎದುರಿಸಬೇಕಾಗಿದೆ.

ADVERTISEMENT

ದೇವರು ಕೊಟ್ಟ ಎಚ್ಚರಿಕೆ ಗಂಟೆ 
ಮೈಲಾರ ಲಿಂಗೇಶ್ವರನ ದೇವವಾಣಿಗೆ ಪುರಾತನ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷವೂ ಕೂಡಾ ಈ ಭವಿಷ್ಯವಾಣಿಯಂತೆ ಪ್ರಸಕ್ತ ವರ್ಷದ ಆಗು ಹೋಗುಗಳು ನಡೆದುಕೊಂಡು ಬಂದಿವೆ. ಈ ವರ್ಷದ ಮೈಲಾರ ಲಿಂಗೇಶ್ವರನ ಕಾರಣಿಕ ಗಮನಿಸಿದರೆ, ರಾಜ್ಯಕ್ಕೆ ಜಲ ಪ್ರಳಯ ಎದುರಾಗಬಹುದು. ಹವಾಮಾನ ವರದಿಯ ಪ್ರಕಾರ ಜನವರಿವರೆಗೂ ಮಳೆ ರುದ್ರ ನರ್ತನ ಮಾಡಲಿದೆ ಎಂಬುದು ತಿಳಿದು ಬಂದಿದೆ. ಜನ ಜೀವನ ಮತ್ತಷ್ಟು ಸಂಕಷ್ಟವನ್ನು ಎದುರಿಸಬೇಕಾಗಬಹುದು. ಹಾಗಾಗಿ ದೇವವಾಣಿಯು ಮೈಲಾರಲಿಂಗೇಶ್ವರ ನೀಡಿದ ಎಚ್ಚರಿಕೆ ಗಂಟೆಯಾಗಿದೆ.

ಇಂದು ಮಾನವ ಧರ್ಮವನ್ನು ಬಿಟ್ಟು, ಅನೀತಿ, ಅತ್ಯಾಚಾರ, ಅಧರ್ಮದೆಡೆ ಸಾಗುತ್ತಿದ್ದಾನೆ. ಇದರಿಂದ ಧರ್ಮದ ಅವನತಿಯಾಗುತ್ತಿದೆ. ಧರ್ಮದ ಕಡೆ ನಾವು ಹೆಚ್ಚಿನ ಒಲವನ್ನು ಬೆಳೆಸಿಕೊಂಡು, ಸತ್ಯ, ಶುದ್ಧ ಕಾಯಕದಿಂದ ನಡೆದು ದಾನ ಧರ್ಮ ಮಾಡುತ್ತಾ, ಸೌಹಾರ್ದ ಸಹಬಾಳ್ವೆಯಿಂದ ಜೀವನ ನಡೆಸಿದರೆ ಮಾತ್ರ ಇಂತಹ ಸಂಕಷ್ಟದಿಂದ ಪಾರಾಗಬಹುದು ಎಂದು ಕ್ಷೇತ್ರದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.