ADVERTISEMENT

ರೈತರ ಸಾಲ ವಸೂಲಿ ಕೈಬಿಡದಿದ್ದರೆ ಹೋರಾಟ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 6:00 IST
Last Updated 13 ಅಕ್ಟೋಬರ್ 2011, 6:00 IST

ಬಳ್ಳಾರಿ: ಬರಗಾಲ ಪರಿಸ್ಥಿತಿಯಿಂದಾಗಿ ಸಮಸ್ಯೆಯ ಸುಳಿಗೆ ಸಿಲುಕಿರುವ ರೈತರ ಕೃಷಿ ಸಾಲದ ವಸೂಲಾತಿಯನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಗರದ ಹೊರ ವಲಯದಲ್ಲಿರುವ ಹಲಕುಂದಿ ಗ್ರಾಮದ ರೈತರೊಬ್ಬರ ಜಮೀನಿಗೆ ಬುಧವಾರ ಭೇಟಿ ನೀಡಿ, ಬರ ಸ್ಥಿತಿಯ ಬಗ್ಗೆ ಪರಿಶೀಲಿಸಿದ ಅವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಒತ್ತಾಯಿಸಿದರು.

ರಾಜ್ಯದ ಶೇ. 50ರಷ್ಟು ತಾಲ್ಲೂಕು ಗಳಲ್ಲಿ ಬರಗಾಲ ತಲೆದೋರಿದ್ದು, ಇನ್ನೂ ಕೆಲವು ತಾಲ್ಲೂಕುಗಳು ಈ ಪಟ್ಟಿಗೆ ಸೇರಲಿವೆ. ಈ ಹಿನ್ನೆಲೆಯಲ್ಲಿ ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಬೇಕಲ್ಲದೆ, ಹಿಂಗಾರು ಬಿತ್ತನೆಗೆ ಅನುಕೂಲವಾಗುವಂತೆ  ರೈತರಿಗೆ ಹೊಸದಾಗಿ ಕೃಷಿ ಸಾಲ ನೀಡ ಬೇಕು ಎಂದು ಅವರು ಕೋರಿದರು.

ವರದಿ ಜಾರಿ
ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಲೋಕಾಯುಕ್ತರು ಸಲ್ಲಿಸಿರುವ ವರದಿ ಈಗಾಗಲೇ ಭಾಗಶಃ ಜಾರಿಯಾಗಿದೆ. ಅದರ ಪರಿಣಾಮವಾಗಿಯೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದು, ಬಳ್ಳಾರಿಯ ಮೂವರು ಮುಖಂಡರು ಸಚಿವ ಸ್ಥಾನ ತ್ಯಜಿಸಿದ್ದಾರೆ. ಮೂರು ತಿಂಗಳ ಅವಧಿಯಿದ್ದು, ತಪ್ಪಿತಸ್ಥ 787 ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ. ಒಂದೊಮ್ಮೆ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಮತ್ತೆ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

`ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ ದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ಬುದ್ಧಿ ಇಲ್ಲ. ವಿದ್ಯುತ್ ಸಮಸ್ಯೆಯ ಬಗ್ಗೆ ರಾಜ್ಯ ಸರ್ಕಾರವು ಈವರೆಗೆ ಒಂದೇ ಒಂದು ಮನವಿ ಯನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ. ಆದರೂ ಅವರು ಈ ರೀತಿಯ ಹೇಳಿಕೆ ನೀಡುವುದು ಸಮಂಜಸವಲ್ಲ~ ಎಂದು ಅವರು ಖಾರವಾಗಿ ನುಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಲ್ಲ ನಾಳೆ ಜೈಲಿಗೆ ಹೋಗುತ್ತಾರೆ. ಇದೀಗ ನಿರೀಕ್ಷಣಾ ಜಾಮೀನು ಪಡೆದಿರುವ ಅವರೂ ಉತ್ತಮ ಆಡಳಿತ ನೀಡುವಲ್ಲಿ ವಿಫಲ ರಾಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ಸರಿಯಲ್ಲ. ಅಭಿವೃದ್ಧಿಗೆ ಸಂಬಂಧಿಸಿ ದಂತೆ ಸರ್ಕಾರ ಸಂಪೂರ್ಣ ವಿಫಲ ವಾಗಿದೆ ಎಂದು ಅವರು ದೂರಿದರು.

ಬರಗಾಲದ ಹಿನ್ನೆಲೆಯಲ್ಲಿ ಪಕ್ಕದ ಆಂಧ್ರ ಪ್ರದೇಶದಲ್ಲಿ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಪರಿಹಾರ ನೀಡಬೇಕು ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.