ಹೊಸಪೇಟೆ: ನಗರದ ವಿಜಯನಗರ ಕಾಲೇಜಿನಲ್ಲಿ ಶುಕ್ರವಾರ ‘ಸಾಂಪ್ರದಾಯಿಕ ದಿನ’ ಕಾರ್ಯಕ್ರಮದ ಅಂಗವಾಗಿ ವಾಣಿಜ್ಯ ವಿಭಾಗದ ಪದವಿ ವಿದ್ಯಾರ್ಥಿಗಳಿಗಾಗಿ ಫ್ಯಾಶನ್ ಶೋ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ‘ಸಾಂಪ್ರದಾಯಿಕ ದಿನ’ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಾಣಿಜ್ಯ ವಿಭಾಗದ ಪದವಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಸಂಭ್ರಮಿಸಿದರು. ಕಾಲೇಜಿನ 1400 ವಾಣಿಜ್ಯ ವಿಭಾಗದ ಪದವಿ ವಿದ್ಯಾರ್ಥಿಗಳು ಈ ಫ್ಯಾಶನ್ ಶೋನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿನಿಯರು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸೀರೆ, ಗಾಘ್ರಾ, ಲಂಬಾಣಿ ಉಡುಪುಗಳನ್ನು ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರೆ, ವಿದ್ಯಾರ್ಥಿಗಳು ಪೈಜಾಮ್, ಕುರ್ತಾ, ಪಂಜೆ ಮತ್ತಿತರ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಫ್ಯಾಶನ್ ಶೋದಲ್ಲಿ ಪಾಲ್ಗೊಂಡಿದ್ದರು.
ಆರಂಭದಲ್ಲಿ ಒಬ್ಬೊಬ್ಬರೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರೆ, ನಂತರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಬ್ಬರು ಒಟ್ಟಾಗಿ ರ‍್ಯಾಂಪ್ ಮೇಲೆ ನಡೆದರು. ಈ ವೇಳೆ ತಮ್ಮ ಸ್ನೇಹಿತರತ್ತ ಕೈಬಿಸಿ ಅಭಿನಂದಿಸುತ್ತಿದ್ದಂತೆ ವಿದ್ಯಾರ್ಥಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಇತ್ತ ರ‍್ಯಾಂಪ್ ಮೇಲೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕುತ್ತಿದ್ದಂತೆ ಸಾವಿರಾರು ವಿದ್ಯಾರ್ಥಿಗಳು ಸಿಳ್ಳೆ, ಕೆಕೆ ಹಾಕುತ್ತಾ ಪ್ರೋತ್ಸಾಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಫ್ಯಾಶನ್ ಶೋ ಸ್ಪರ್ಧೆಯಲ್ಲಿ ವಾಣಿಜ್ಯ ವಿಭಾಗದ ಪದವಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿನಿ ಪ್ರಿಯಾಂಕಾ.ಬಿ. ‘ಮಿಸ್ ಬಿ.ಕಾಂ–2014’ ಹಾಗೂ 4ನೇ ಸೆಮಿಸ್ಟರ್‌ನ ಅಕ್ಷಯ್ ಜೈನ್ ’ಮಿಸ್ಟರ್ ಬಿ.ಕಾಂ–2014’ ಪ್ರಶಸ್ತಿಗೆ ಪಾತ್ರರಾದರು.
ಇದಕ್ಕೂ ಮೊದಲು ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಹಾಗೂ ಪ್ರಾಚಾರ್ಯ ಪ್ರೊ.ಎಸ್.ಎಸ್.ಪೊಲೀಸ್‌ಪಾಟೀಲ್ ಅವರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ‘ಸಾಂಪ್ರದಾಯಿಕ ದಿನ’ಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಎಂ.ಜಿ.ಬಸವರಾಜ್, ಪ್ರಾಧ್ಯಾಪಕ ಡಾ.ಕೆ.ಎಂ.ಮಂಜುನಾಥ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.