ಬಳ್ಳಾರಿ: ವೇಶ್ಯಾವಾಟಿಕೆ ಆರೋಪದಲ್ಲಿ, ಬುಧವಾರ ನಗರದ ಕೋಟೆ ಪ್ರದೇಶದ ಕೆಎಚ್‌ಬಿ ಕಾಲೊನಿಯಲ್ಲಿನ ಮನೆ ಯೊಂದಕ್ಕೆ ನುಗ್ಗಿದ ಗುಂಪೊಂದು, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಆಕೆಯ ಮನೆಯವರು ಹಾಗೂ ಸಹ ಪಾಠಿಯ ಮೇಲೆ ಹಲ್ಲೆ ನಡೆಸಿರುವ ಕ್ರಮವನ್ನು ವಿರೋಧಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಗುರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ವಾರ್ಡ್ಲಾ ಪದವಿಪೂರ್ವ ಕಾಲೇಜು ಆವರಣದಿಂದ ನೂರಾರು ಸಂಖ್ಯೆಯ ವಿದ್ಯಾರ್ಥಿನಿಯರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಯ ಸದಸ್ಯರು, ರಾಯ ಚೂರು ಸಂಸದ ಸಣ್ಣಫಕಿರಪ್ಪ ಅವರ ಪುತ್ರ ಮುತ್ತು ಸೇರಿದಂತೆ 50ಕ್ಕೂ ಅಧಿಕ ಜನರ ಗುಂಪು ವಿದ್ಯಾರ್ಥಿನಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಕ್ರಮ ಖಂಡನೀಯ ಎಂದರು.
ವೈಯಕ್ತಿಕ ದ್ವೇಷ, ಪರಸ್ಪರ ಆರೋಪ–ಪ್ರತ್ಯಾರೋಪಗಳು ಏನೇ ಇದ್ದರೂ ಕಾನೂನನ್ನು ಕೈಗೆ ತೆಗೆದು ಕೊಂಡು, ಹಲ್ಲೆಯಂತಹ ಕುಕೃತ್ಯಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ಪ್ರಕ್ರಿಯೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರಕರಣಕ್ಕೆ ಸಂಬಂಧಿಸಿದ ಇತರ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹಾಂತೇಶ ನಾಯಕ, ಕೇದಾರನಾಥ, ವಿನೋದಕುಮಾರ್, ಎಸ್.ಆರ್. ರವಿಗೌಡ, ಮಣಿಕಂಠ ರೆಡ್ಡಿ, ರಾಮ ಕೃಷ್ಣ, ಶೈಲಜಾ, ಕಾವ್ಯಾ, ಇಂದ್ರಜಾ, ಲಕ್ಷ್ಮಿ, ಸೌಮ್ಯಾ, ಗೀತಾ, ಪೂರ್ಣಿಮಾ, ತ್ರಿವೇಣಿ, ಶಿಲ್ಪಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಖಂಡನೆ: ನಗರದ ಕೊಟೆ ಪ್ರದೇಶದಲ್ಲಿ ಭಾಗ್ಯಮ್ಮ ಅವರ ನಿವಾಸಕ್ಕೆ ನುಗ್ಗಿ ತೀವ್ರ ಹಲ್ಲೆ ನಡೆಸಿರುವ ರಾಯಚೂರು ಸಂಸದ ಸಣ್ಣಫಕೀರಪ್ಪ ಅವರ ಪುತ್ರ ಮತ್ತಿತರರ ಗುಂಪಿನ ಕೃತ್ಯ ಅಮಾನ ವೀಯ ಎಂದು ಎಐಎಂ ಎಸ್ಎಸ್ ಹಾಗೂ ಎಐಡಿಎಸ್ಒ ಸಂಘಟನೆಗಳು ಖಂಡಿಸಿವೆ. ಘಟನೆಗೆ ಸಂಬಂಧಿಸಿದಂತೆ ಆರೋಪ, -ಪ್ರತ್ಯಾರೋಪಗಳು ಏನೇ ಇದ್ದರೂ ಮಹಿಳೆಯರ ಮೇಲೆ ಹಲ್ಲೆ ನಡೆಸುವ ವರ್ತನೆಯನ್ನು ಒಪ್ಪಲು ಸಾಧ್ಯವಿಲ್ಲ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಎ.ಶಾಂತಾ, ಡಾ.ಪ್ರಮೋದ್ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.