ADVERTISEMENT

ವೈದ್ಯರ ಅವಹೇಳನ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 5:54 IST
Last Updated 12 ಏಪ್ರಿಲ್ 2018, 5:54 IST

ಹೂವಿನಹಡಗಲಿ: ‘ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಶಿವಕುಮಾರ್ ಹಾಗೂ ಇತರ ವೈದ್ಯರ ವಿರುದ್ಧ ಸುಳ್ಳು ಆರೋಪ ಹೊರಿಸಿ, ಅವಹೇಳನ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ, ಆಯುಷ್‌ ವೈದ್ಯಾಧಿಕಾರಿಗಳ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಒತ್ತಾಯಿಸಿದರು.

ಬುಧವಾರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಎನ್.ಮೇಘರಾಜ ನಾಯ್ಕ ಅವರಿಗೆ ಮನವಿ ಸಲ್ಲಿಸಿ, ‘ವೈದ್ಯರ ಕುರಿತು ಅಪಪ್ರಚಾರ ನಡೆಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರ ಮಾನಹಾನಿ ಆಗುವಂತೆ ಅವಹೇಳನ ಮಾಡುತ್ತಿರುವ ಮುದ್ಲಾಪುರ ತಾಂಡಾದ ಡಿ.ಚಂದ್ರಶೇಖರನಾಯ್ಕ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ, ‘ವೈದ್ಯರ ಕುರಿತು ಅನಗತ್ಯ ಗೊಂದಲ ಸೃಷ್ಟಿಸಿ, ವಿಡಿಯೋ ಚಿತ್ರೀಕರಿಸಿ ದೃಶ್ಯ ಮಾಧ್ಯಮಗಳಿಗೆ ನೀಡುತ್ತಿರುವುದರಿಂದ ವೈದ್ಯರಿಗೆ ಮಾನಸಿಕ ಹಿಂಸೆಯಾಗಿದೆ. ಪದೇ ಪದೇ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ ತೊಂದರೆ ನೀಡಿದಲ್ಲಿ ನಾವು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

‘ಆಸ್ಪತ್ರೆಗೆ ಬರುವ ರೋಗಿಗಳ ಜಾತಿ, ಧರ್ಮಗಳನ್ನು ಕೇಳದೇ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ನೀಡುತ್ತೇವೆ. ನಿರ್ದಿರ್ಷ ಜಾತಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿರುವುದರಿಂದ ನಾವು ಆಸ್ಪತ್ರೆಯಲ್ಲಿ ನಿರಾತಂಕವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಸ್ವಹಿತಾಸಕ್ತಿಗಾಗಿ ಜನಾಂಗವನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್ ದೂರಿದರು.

ವೈದ್ಯರ ಸಂಘಟನೆ ಹಾಗೂ ಇತರೆ ಸಂಘಟನೆಗಳ ಪದಾಧಿಕಾರಿಗಳು ನಂತರ ಪೊಲೀಸ್‌ ಠಾಣೆಗೆ ತೆರಳಿ ವೈದ್ಯರ ಅವಹೇಳನ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರು ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಬಸವರಾಜ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಕೆ.ಮಲ್ಲಿಕಾರ್ಜುನಗೌಡ, ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಪ್ರಕಾಶ ಅಟವಾಳಗಿ, ಡಾ.ಬಿ.ಟಿ.ಫಣಿರಾಜ, ಡಾ.ನಾಗನಗೌಡ, ಡಾ.ನಿಖಿಲ್, ಡಾ.ಭಾರತಿ, ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಖಜಾಂಚಿ ಎಚ್.ಲೋಕೇಶ, ಸಿ.ಜೆ.ಚಂದ್ರಪ್ಪ, ಹೊಂಬಾಳೆ ಕೊಟ್ರೇಶ, ಎ.ಅಶೋಕ, ಎಚ್.ಬಿ.ರಾಜೇಶ್, ಕೆ.ಮಲ್ಲಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.