ADVERTISEMENT

ಶಾಲೆಗೆ ಡಿಡಿಪಿಐ ಭೇಟಿ: ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 9:40 IST
Last Updated 16 ಫೆಬ್ರುವರಿ 2011, 9:40 IST

ಕಂಪ್ಲಿ: ಸ್ಥಳೀಯ ಸಕ್ಕರೆ ಕಾರ್ಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಿ.ಡಿ.ಪಿ.ಐ ಡಾ. ಎಚ್. ಬಾಲರಾಜ್ ಮತ್ತು ಬಿ.ಇ.ಓ ಎಲ್.ಡಿ. ಜೋಷಿ ಇತ್ತೀಚೆಗೆ ಹಠಾತ್ ಭೇಟಿ ನೀಡಿ ಶಾಲೆಯ ಹಣಕಾಸು ವ್ಯವಹಾರ, ದಾಖಲೆಗಳನ್ನು ಪರಿಶೀಲಿಸಿದರು.

ಸರ್ವ ಶಿಕ್ಷಣ ಅಭಿಯಾನ ನಗದು ಪುಸ್ತಕ ನಿರ್ವಹಣೆ ಅಸಮರ್ಪಕವಾಗಿದ್ದು, ಮೇಲ್ನೊಟಕ್ಕೆ ದುರುಪಯೋಗವಾಗಿದ್ದು ಕಂಡು ಬಂದಿದೆ. ಡಿಸೆಂಬರ್ 2009ರವರೆಗೆ ಮಾತ್ರ ಮಧ್ಯಾಹ್ನ ಬಿಸಿಯೂಟದ ಬಗ್ಗೆ ದಾಖಲೆ ಬರೆಯಲಾಗಿದೆ. ನಂತರ ಬಿಸಿಯೂಟಕ್ಕೆ ಸಂಬಂಧಿಸಿದ ಯಾವುದೇ ವೋಚರ್‌ಗಳು ಇರುವುದಿಲ್ಲ. ಪ್ರಸ್ತುತ ಶಾಲೆಯಲ್ಲಿ ನಲಿ-ಕಲಿ ಯೋಜನೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದರೂ ತರಗತಿ ವೇಳೆ ಪಟ್ಟಿ ಸಿದ್ಧಪಡಿಸದಿರುವುದು ಕಂಡು  ಬಂದಿತು.

ಈ ಸಂದರ್ಭದಲ್ಲಿ ಕೆಲ ದಾಖಲೆಗಳನ್ನು ಕೇಳಿದಾಗ ಮುಖ್ಯಗುರು ಅಶಿಸ್ತಿನಿಂದ ಉತ್ತರ ನೀಡಿ ಉದ್ದಟತನ ಪ್ರದರ್ಶಿಸಿದ್ದರಿಂದ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಾಲೆಯ ಬಗ್ಗೆ ಕಾಳಜಿ, ಸಾರ್ವಜನಿಕರೊಂದಿಗೆ ಸೌಹಾರ್ದತೆ ಇಲ್ಲದಿರುವುದು ಮತ್ತು ಶಾಲೆಯಲ್ಲಿ ಯಾವುದೇ ದಾಖಲೆಗಳನ್ನು ಸರಿಯಾಗಿ ನಿರ್ವಹಿದಿರುವುದರಿಂದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿ.ಡಿ.ಪಿ.ಐ ಡಾ. ಎಚ್. ಬಾಲರಾಜ್  ತಿಳಿಸಿದರು.

ಸಮಗ್ರ ತನಿಖೆ: ಪ್ರಸ್ತುತ ಶಾಲೆಯ ಸಮಗ್ರ ತನಿಖೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಅಧಿಕಾರಿಗಳನ್ನು ನಿಯೋಜಿಸುವಂತೆ ಬಿ.ಇ.ಓ ಅವರಿಗೆ ಡಿ.ಡಿ.ಪಿ.ಐ ಈ ಸಂದರ್ಭದಲ್ಲಿ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.