ADVERTISEMENT

ಶ್ರೀರಾಮುಲು ಹರಕೆಯ ಕುರಿ: ಉಗ್ರಪ್ಪ

ಕೇಂದ್ರದಿಂದ ಚುನಾವಣಾ ಆಯೋಗದ ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಮೇ 2018, 9:36 IST
Last Updated 5 ಮೇ 2018, 9:36 IST

ಬಳ್ಳಾರಿ: ’ಬಾದಾಮಿ ಮತ್ತು ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಣಕ್ಕೆ ಇಳಿಸುವ ಮೂಲಕ ಬಿಜೆಪಿಯು ಸಂಸದ ಬಿ.ಶ್ರೀರಾಮುಲು ಅವರನ್ನು ಹರಕೆಯ ಕುರಿ ಮಾಡಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಪ್ರತಿಪಾದಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡುವುದೇ ಆಗಿದ್ದರೆ ಬಾದಾಮಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನೇ ಕಣಕ್ಕೆ ಇಳಿಸಬೇಕಾಗಿತ್ತು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಯಡಿಯೂರಪ್ಪ ಅಲ್ಲದಿದ್ದರೆ ಜಗದೀಶ ಶೆಟ್ಟರ್‌ ಅಥವಾ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಸ್ಪರ್ಧಿಸಬಹುದಾಗಿತ್ತು. ಆದರೆ ಎಲ್ಲರನ್ನೂ ಬಿಟ್ಟು ಶ್ರೀರಾಮುಲು ಅವರನ್ನು ಪಕ್ಷ ಕುರಿ ಮಾಡಲು ಹೊರಟಿದೆ. ಶ್ರೀರಾಮುಲು ಮೊಳಕಾಲ್ಮೂರಿನಲ್ಲೂ ಗೆಲ್ಲುವ ಸಾಧ್ಯತೆ ಇಲ್ಲ. ಅವರಿಗೆ ಉತ್ತಮ ಸ್ಥಾನ ನೀಡುವದೇ ಆಗಿದ್ದರೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಬಿಜೆಪಿಯಲ್ಲಿ ಪ್ರಧಾನಿ ಮೋದಿ ಹಿಟ್ಲರ್‌, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿದೂಷಕ. ಮುಖ್ಯಮಂತ್ರಿಯಾಗಿದ್ದಾಲೇ ಜೈಲು ವಾಸ ಅನುಭವಿಸಿದ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲೇ ಮತ್ತೆ ಸರ್ಕಾರ ರಚಿಸುವುದಾಗಿ ಹೇಳುವ ಮೂಲಕ ಪ್ರಧಾನಿ ನೈತಿಕ ಮೌಲ್ಯಗಳನ್ನು ಬಿಟ್ಟುಕೊಟ್ಟಿದ್ದಾರೆ’ ಎಂದು ದೂರಿದರು.

‘ಪ್ರಧಾನಿ ಮೋದಿ ಅವರು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಸಿದ್ದರಾಮಯ್ಯ ಮತ್ತು ಸಚಿವರ ಕುರಿತು ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ನಾಲ್ಕು ವರ್ಷ ಅವಧಿಯಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಧನೆಗಳ ಕುರಿತಾಗಲೀ, 2008ರಿಂದ 2013ರವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಸಾಧನೆ ಬಗ್ಗೆಯಾಗಲೀ ಮಾತನಾಡಲು ಅವರ ಬಳಿ ಏನೂ ಇಲ್ಲ. ಏಕೆಂದರೆ ಯಾವ ಸಾಧನೆಯನ್ನೂ ಮಾಡಿಲ್ಲ’ ಎಂದು ವ್ಯಂಗ್ಯವಾಡಿದರು.

‘ಹತ್ತು ಪರ್ಸೆಂಟ್‌ ಸರ್ಕಾರ, ನಂಗಾ ನಾಚ್‌ ಸರ್ಕಾರ ಎಂದು ಒಬ್ಬ ಪ್ರಧಾನಿಯಾಗಿ ಹೇಳಿಕೆ ನೀಡುವುದು ಸರಿಯಲ್ಲ. ಅದನ್ನು ಅವರು ಸಾಬೀತುಪಡಿಸಬೇಕು. ಇಲ್ಲವಾದರೆ ಅಂಥ ಸರ್ಕಾರವನ್ನು ರದ್ದುಪಡಿಸಬೇಕು. ಆದರೆ ಆರೋಪಿಸುವುದನ್ನು ಬೇರೆ ಯಾವ ಕೆಲಸವನ್ನೂ ಪ್ರಧಾನಿ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿರು.

‘ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರಿಗೆ ನಿರ್ದಿಷ್ಟ ಸ್ಥಳದಲ್ಲಿ ಬ್ಯಾನರ್‌ ಅಳವಡಿಸಲು ಅವಕಾಶ ಕೊಡಲಿಲ್ಲ ಎಂಬ ಕಾರಣದಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ ಪ್ರಸಾದ್‌ ಅವರನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತು ಬೆಂಬಲಿಗರ ಮನೆಗಳ ಮೇಲೆ ಕೇಂದ್ರ ಸರ್ಕಾರ ವಿನಾಕಾರಣ ಆದಾಯ ತೆರಿಗೆ ಇಲಾಖೆ ಮೂಲಕ ದಾಳಿ ಕಾರ್ಯಾಚರಣೆ ನಡೆಸುತ್ತಿದೆ. ಈ ರೀತಿಯ ಅಧಿಕಾರ ದುರ್ಬಳಕೆಯನ್ನು 70 ವರ್ಷದಲ್ಲಿ ನಾನು ಕಂಡಿರಲಿಲ್ಲ’ ಎಂದರು.

‘ಬಿಜೆಪಿಯಲ್ಲಿದ್ದ ಅಕ್ರಮ ಗಣಿಗಾರಿಕೆ ಆರೋಪಿಗಳನ್ನು ದೂಷಿಸುತ್ತಿದ್ದ ಕಾಂಗ್ರೆಸ್‌ ಚುನಾವಣೆ ಸಂದರ್ಭದಲ್ಲಿ ಏಕೆ ಅಂಥವರನ್ನು ಸೇರಿಸಿಕೊಂಡು ಟಿಕೆಟ್‌ ಕೊಟ್ಟಿತು ಎಂದು ಕೇಳುವುದು ಸರಿಯಾಗಿದೆ. ಆದರೆ ವಿಷಯ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಏನೂ ಹೇಳಲಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಚುನಾವಣೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತದೆ ಎಂದು ಎಐಸಿಸಿ ವರಿಷ್ಠರೇ ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಐಸಿಸಿ ವೀಕ್ಷಕ ಬಾಪಿರಾಜು, ಶಾಸಕ ಜಬ್ಬರ್‌ಸಾಬ್‌, ವೆಂಕಟೇಶ್ವರ್‌, ಸೈಯದ್‌ ರಿಜ್ವಾನ್‌ ಇದ್ದರು.

**
ಪ್ರಧಾನಿ ಹುದ್ದೆಯ ಘನತೆಗೆ ತಕ್ಕಂತೆ ಮಾತನಾಡದ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಕುರಿತು ಚಿಂತನೆ ನಡೆದಿದೆ
– ವಿ.ಎಸ್‌.ಉಗ್ರಪ್ಪ, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.