ADVERTISEMENT

ಸಕ್ಕರೆ ಕಾರ್ಖಾನೆ ಪುನಃಶ್ಚೇತನಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 8:30 IST
Last Updated 9 ಅಕ್ಟೋಬರ್ 2012, 8:30 IST

ಕಂಪ್ಲಿ: ಸ್ಥಳೀಯ ಸಹಕಾರ ಸಕ್ಕರೆ ಕಾರ್ಖಾನೆ ಪುನಃಶ್ಚೇತನಕ್ಕೆ ಕಂಪ್ಲಿ ಹೋಬಳಿ ವ್ಯಾಪ್ತಿಯ ರೈತರು, ಸಾರ್ವಜನಿಕರು ಪಕ್ಷಾತೀತವಾಗಿ ಸಹಕರಿಸುವಂತೆ ಕಂಪ್ಲಿ ವಿಧಾನಸಭಾ ಕ್ಷೇತ್ರ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎಚ್.ಡಿ. ಬಸವರಾಜ ಮನವಿ ಮಾಡಿದರು.

ಕಂಪ್ಲಿ ವಿಧಾನಸಭಾಕ್ಷೇತ್ರ ನಾಗರಿಕ ಹಿತರಕ್ಷಣಾ ಸಮಿತಿ ಕಚೇರಿ ಬಳಿ  ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದುಃಸ್ಥಿಯಲ್ಲಿರುವ ಸಕ್ಕರೆ ಕಾರ್ಖಾನೆ ಸ್ಥಳದಲ್ಲಿ ನೂತನ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಶೀಘ್ರದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಕಂಪ್ಲಿ ಸಹಕಾರ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ಮಾರಾಟವಾಗಿದ್ದರೂ ಅವರ ಹೆಸರಿನಲ್ಲಿ ಇಲ್ಲಿಯವರೆಗೆ ನೋಂದಣಿಯಾಗಿಲ್ಲ. ಈ ಮಧ್ಯೆ ಕಾರ್ಖಾನೆ ಯಂತ್ರೋಪಕರಣಗಳನ್ನು ವರ್ಗಾವಣೆ ಮಾಡಬಾರದು ಎಂದು ಕರಾರು ವಿಧಿಸಿದ್ದರೂ ಕರಾರು ಉಲ್ಲಂಘಿಸಿ ವರ್ಗಾವಣೆ ಮಾಡಲಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆ ಮುಂದುವರಿಸಬೇಕು ಎಂದು ಒಡಂಬಡಿಕೆ ಆಗಿದ್ದರೂ ನಿರ್ಲಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಉದಾಸೀನತೆ ತೋರಿದ್ದು, ಈ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು ಎಂದು ವಿವರಿಸಿದರು.
ಸರ್ಕಾರ ಕಂಪ್ಲಿಯಲ್ಲಿ ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಹಕಾರ ನೀಡದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಕಲ್ಮಠ ಅಭಿನವ ಪ್ರಭುಸ್ವಾಮೀಜಿ ಮಾತನಾಡಿ, ಈ ಭಾಗದ ರೈತರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆ ಅಗತ್ಯ ಎಂದರು.

ಸಮಿತಿ ಸದಸ್ಯ ಜಿ. ಲಿಂಗನಗೌಡ, ಬೂದಗುಂಪಿ ಹುಸೇನ್‌ಸಾಬ್, ಕಲ್ಗುಡಿ ಮಂಜುನಾಥ, ಪಿ. ಮೂಕಯ್ಯಸ್ವಾಮಿ, ಎಂ.ಗಾಳಿಕುಮಾರ್, ಡಾ.ವಿ.ಎಲ್. ಬಾಬು, ಭೀಮನಗೌಡ ಕಾಶೀರೆಡ್ಡಿ, ಪೆನಕಲಪಾಟಿ ಹನುಮಂತರಾಯುಡು, ಎಚ್. ಲಿಂಗನಗೌಡ, ಬಿ.ಡಿ. ಶಂಕ್ರಪ್ಪ, ಶ್ರೀಧರಶೆಟ್ಟಿ, ಚೆಲ್ಲಾ ವೆಂಕಟನಾಯ್ಡು, ಸಿ. ಮಲ್ಲನಗೌಡ, ಎಂ. ಯಶೋದಮ್ಮ, ಅಂಚೆ ಮಾಬುಸಾಬ್, ಎನ್. ಮಲ್ಲಿಕಾರ್ಜುನ, ಡಿ. ಜಡೆಪ್ಪ, ಎಂ.ಎನ್. ಬಸಪ್ಪ, ಪೆದ್ದರೆಡ್ಡಿ ಹಾಜರಿದ್ದರು.

ಸ್ವಚ್ಛತಾ ಕಾರ್ಯಕ್ರಮ
ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದ ಜೆಎಚ್‌ವಿ ಶಾಲೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಜೆ.ಮಲ್ಲಿಕಾರ್ಜುನ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಸ್ತೆ ಸ್ವಚ್ಛಗೊಳಿಸಿ ಶ್ರಮದಾನ ಮಾಡಿ ಗಾಂಧಿ ಜಯಂತಿ ಆಚರಿಸಿದರು.

ಸ್ಥಳೀಯ ಸಿರಿಗನ್ನಡ ಸಾಂಸ್ಕೃತಿಕ ಸಂಘ ಅಧ್ಯಕ್ಷ ಎಸ್.ಎಂ. ನಾಗರಾಜಸ್ವಾಮಿ, ಕನಕದಾಸ ಯುವಕ ಸಂಘದ ಅಧ್ಯಕ್ಷ ಸಿ.ರಮೇಶ್, ಮೆಹಬೂಬ್ ಬಾಷಾ, ಜೆ.ಬಸವನಗೌಡ, ಶರಣಬಸವ, ಶಿವಕುಮಾರ್ ಶಾಲೆಯ ಶಿಕ್ಷಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.