ADVERTISEMENT

ಸಮಸ್ಯೆ ಮರೆತ ಅಭ್ಯರ್ಥಿಗಳು: ಆಕ್ರೋಶ

‘ಹಣದ ಆಮಿಷಕ್ಕೆ ಮತದಾರರು ಸೋಲಬಾರದು’

​ಪ್ರಜಾವಾಣಿ ವಾರ್ತೆ
Published 9 ಮೇ 2018, 8:10 IST
Last Updated 9 ಮೇ 2018, 8:10 IST

ಬಳ್ಳಾರಿ: ‘ಜಿಲ್ಲೆಯ ಒಂಬತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಹುತೇಕ ಅಭ್ಯರ್ಥಿಗಳು ಆಯಾ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳ ಕುರಿತು ಚರ್ಚಿಸದೆ, ನಗರ ಮತ್ತು ಪಟ್ಟಣ ಕೇಂದ್ರಿತ ಸಭೆ, ಸಮಾರಂಭ, ಪ್ರಚಾರಗಳಲ್ಲಿ ನಿರತರಾಗಿದ್ದಾರೆ’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಬಳ್ಳಾರಿಯಲ್ಲಿ ಚುನಾವಣೆ ಎಂದರೆ ಹೊರಜಿಲ್ಲೆಗಳ ಜನರಲ್ಲಿ ಉಪ್ಪ್ರೇಕ್ಷಿತ ತಿಳಿವಳಿಕೆ ಇದೆ. ಆದರೆ, ಜಿಲ್ಲೆಯ ಒಳಗೆ ಅಭಿವೃದ್ಧಿಯ ಬಗ್ಗೆ ಮಾತನಾಡುವವರು ಇಲ್ಲ. ಮತದಾರರು ಅಭಿವೃದ್ಧಿ ಕೇಂದ್ರಿತ ದೂರಾಲೋಚನೆ ಉಳ್ಳವರಿಗೆ ಮತ ಹಾಕಬೇಕು’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ತುಂಗಭದ್ರಾ ಜಲಾಶಯದಲ್ಲಿ ಹೂಳು ತೆರವು, ಕೃಷ್ಣಾ ಮತ್ತು ತುಂಗಭದ್ರಾ ನದಿ ಜೋಡಣೆ, ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡುವುದು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಲ್ಲ. ಅಭ್ಯರ್ಥಿಗಳೂ ಈ ಬಗ್ಗೆ ಎಲ್ಲಿಯೂ ಚಕಾರ ಎತ್ತುತ್ತಿಲ್ಲ’ ಎಂದು ದೂರಿದರು.

ADVERTISEMENT

ಹಣದ ಆಮಿಷಕ್ಕೆ ಮತದಾರರು ಒಳಗಾಗದೆ, ಅಭ್ಯರ್ಥಿಗಳ ಗುಣ ಪರಾಮರ್ಶೆ ಮಾಡಿ, ಅರ್ಹರಿಗೆ ಮತದಾನ ಮಾಡಿದರೆ ಮಾತ್ರ ಐದು ವರ್ಷದಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದರು.

‘ಸಿರುಗುಪ್ಪದಲ್ಲಿ ತುಂಗಭದ್ರಾ ಮತ್ತು ವೇದಾವತಿ ನಡುವೆ ತಡೆಗೋಡೆ ನಿರ್ಮಿಸಿ ಆ ಭಾಗದ ಒಣಬೇಸಾಯದ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಬೇಕು. ಬತ್ತದ ಮಾರುಕಟ್ಟೆಯನ್ನು ಸ್ಥಾಪಿಸಬೇಕು. ಮರಳು ಮಾರಾಟದ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗೆ ವಹಿಸಬೇಕು’ ಎಂದು ಆಗ್ರಹಿಸಿದರು.

‘ಬಳ್ಳಾರಿ ನಗರದಲ್ಲಿ ಮಿನಿ ವಿಧಾನಸೌಧನ ರಚಿಸಬೇಕು. ನಗರದ ಸುತ್ತಮುತ್ತ ಕಾರ್ಖಾನೆಗಳಿಗಾಗಿ ರೈತರಿಂದ ವಶಪಡಿಸಿಕೊಂಡ ರೈತರ ಜಮೀನನ್ನು ವಾಪಸ್‌ ಕೊಡಬೇಕು’ ಎಂದು ಆಗ್ರಹಿಸಿದರು.

‘ಕಂಪ್ಲಿಯಲ್ಲಿ ಏತ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಹಕಾರಿ ಕಬ್ಬಿಣ ಕಾರ್ಖಾನೆ ಮರುಸ್ಥಾಪಿಸಬೇಕು. ಕುರುಗೋಡಿನ ಐತಿಹಾಸಿಕ ಪರಂಪರೆಯನ್ನು ರಕ್ಷಿಸಬೇಕು. ಹೊಸಪೇಟೆಯಲ್ಲಿ ರಾಯನಕೆರೆ ಮತ್ತು ಕಮಲಾಪುರ ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಹೆಚ್ಚಿನ ನೀರು ಸಂಗ್ರಹಕ್ಕೆ ಅನುವು ಮಾಡಬೇಕು. ಕಾಲುವೆಗಳನ್ನು ಪುನರ್‌ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘ಸಂಡೂರು ತಾಲ್ಲೂಕಿನಲ್ಲಿ ಗಣಿ ಸಂತ್ರಸ್ತರಿಗೆ ಮೀಸಲಿರುವ ಖನಿಜ ನಿಧಿಯನ್ನು ಸಮರ್ಪಕವಾಗಿ ಬಳಸಬೇಕು. ಅದಿರು ಸಾಗಣೆ ವ್ಯವಸ್ಥೆಯನ್ನು ಮಾರ್ಪಡಿಸಬೇಕು. ಜೆಎಸ್‌ಡಬ್ಲ್ಯು ಸಂಸ್ಥೆಯಲ್ಲಿ ಸ್ಥಳೀಯರಿಗೆ ಉನ್ನತ ಉದ್ಯೋಗ ನೀಡಬೇಕು. ಕೂಡ್ಲಿಗಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಹಗರಿಬೊಮ್ಮನಹಳ್ಳಿಯ ಕೆರೆಗಳಿಗೆ ತುಂಗಭದ್ರಾ ಜಲಾಶಯದ ಹಿನ್ನೀರನ್ನು ತುಂಬಿಸಬೇಕು. ಹಡಗಲಿಯಲ್ಲಿ ಹೂ ಸಂಸ್ಕರಣ ಘಟಕಗಳನ್ನು ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಬಸವನಗೌಡ, ಡಿ.ಶಿವಯ್ಯ, ಶ್ರೀಧರಗೌಡ, ವೆಂಕಟೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.