ADVERTISEMENT

`ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನಿರಂತರ ಅಧ್ಯಯನ ಅಗತ್ಯ'

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 5:39 IST
Last Updated 15 ಜೂನ್ 2013, 5:39 IST

ಹೊಸಪೇಟೆ: `ಪತ್ರಿಕೋದ್ಯಮ ಜಗತ್ತಿನ ಶಕ್ತಿಶಾಲಿ ಕ್ಷೇತ್ರವಾಗಿದ್ದು, ಜೀವ ಕೋಟಿಯ ಬದುಕನ್ನು ಗಾಢವಾಗಿ ಆವರಿಸಿಕೊಂಡಿದೆ. ಅದನ್ನು ಉನ್ನತೀಕರಿಸಲು ಒಂದು ಪತ್ರಿಕೆ ದಿನದ 24 ಗಂಟೆಗಳ ಕಾಲವೂ ಎಚ್ಚರದಲ್ಲೆೀ ಇದ್ದು ಕಾರ್ಯ ನಿರ್ವಹಿಸುತ್ತಿರಬೇಕು. ಆಡಳಿತ ಯಂತ್ರ ವಿವೇಕ ರಹಿತವಾಗಿ ನಡೆದಾಗ ಎಚ್ಚರಿಸುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು' ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಹೇಳಿದರು. 

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನವಿಜಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಪರ್ಕ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದ ಅವರು ಜಾಗತಿಕ ವಿದ್ಯಮಾನಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರವೇಶಿಸಿರುವ ನಿಮಗೆ ಗುರುತರ ಜವಾಬ್ದಾರಿ ಇದೆ. ಇಲ್ಲಿ ಗುರಿ ತಲುಪಲು, ಕೆಲಸದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನಿರಂತರ ಅಧ್ಯಯನ ಅತ್ಯಗತ್ಯ ಎನ್ನುವುದನ್ನು ನೀವು ಮನಗಾಣವಂತೆ ಸೂಚಿಸಿದರು. 

ಪತ್ರಕರ್ತನಾದವನಿಗೆ ಸಾಹಿತ್ಯದ ಹಿನ್ನೆಲೆಯಿದ್ದರೆ ಅದೇ ಅವನ ಪ್ರಖರ ಶಕ್ತಿಯಾಗುತ್ತದೆ ಎಂಬ ಅಂಶದ ಕಡೆ ಗಮನಹರಿಸಿ, ಕನ್ನಡವಷ್ಟೇ ಅಲ್ಲದೆ ಇನ್ನಿತರ ಭಾಷೆಗಳ ಶ್ರೇಷ್ಠ ಸಾಹಿತ್ಯವನ್ನು ನಿರಂತರ ಅಭ್ಯಾಸ ಮಾಡುವುದರಿಂದ ಅರಿವಿನ ಜೊತೆಗೆ ಕುತೂಹಲವೂ ಗರಿಗೆದರುತ್ತದೆ. ಅದೇ ನಿಮ್ಮನ್ನು ಪತ್ರಿಕಾ ವೃತ್ತಿಯು ಸದೃಢವಾಗಿ ಮುನ್ನಡೆಯಲು ಸಹಕಾರಿಗುತ್ತದೆ ಎಂದರು.

ವಾಣಿಜ್ಯ, ಕಲೆ, ರಾಜಕೀಯ, ಸಂಗೀತ- ಹೀಗೆ ಅನೇಕ ವಿಷಯಗಳ ಬಗ್ಗೆ ಕನಿಷ್ಠ ಪ್ರಾಥಮಿಕ ಜ್ಞಾನವನ್ನಾದರೂ ಪಡೆದುಕೊಳ್ಳಲು ನಿರಂತರ ಅಭ್ಯಾಸ ನಡೆಸುತ್ತಲೇ ಇರಬೇಕು ಭಾರತವನ್ನು ಮತ್ತಷ್ಟು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪತ್ರಕರ್ತರ ಪಾತ್ರದ ಹಿರಿಮೆ ಅರಿತು ಕೆಲಸ ಮಾಡಿ, ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಮಾತನಾಡಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನದ ವೈಶಿಷ್ಟ್ಯತೆಗಳನ್ನು ತಮ್ಮ ಮಾತುಗಳಲ್ಲಿ ಕಟ್ಟಿಕೊಡುತ್ತ, ಕನ್ನಡಿಗರ ಅಭಿವ್ಯಕ್ತಿ, ಭಾಷೆ, ಸಂಸ್ಕೃತಿ, ಪರಿಸರ, ಸಂವೇದನೆಗಳ ಸೂಕ್ಷ್ಮತೆಯ ಚೌಕಟ್ಟಿನಲ್ಲಿ ದೂರಶಿಕ್ಷಣದ ಪಠ್ಯಕ್ರಮವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಪ್ರಜಾಪ್ರಭುತ್ವ ಮತ್ತು ಈ ದೇಶದ ಕಟ್ಟಕಡೆಯ ಪ್ರಜೆಯನ್ನು ಎಚ್ಚರಿಕೆಯಲ್ಲಿರುಸುವಂಥದ್ದು ಪತ್ರಿಕಾ ರಂಗ. ಆಳುವವರ ಆಳಿಸಿಕೊಳ್ಳುವವರ ಅರೆಕೊರೆಗಳನ್ನು ಯಶಸ್ವಿಯಾಗಿ ಪತ್ರಿಕಾ ರಂಗ ಬಿಂಬಿಸುತ್ತಿರುವುದರಿಂದ ಅನೇಕ ವೈವಿಧ್ಯತೆಗಳ ನಡುವೆಯೂ ಸರ್ಕಾರದ ಆಡಳಿತ ಯಶಸ್ವಿಯಾಗಿ ಸಾಗುತ್ತಿದೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಮಾಧ್ಯಮ ಅಕಾಡೆಮಿಯ ಸಹಯೋಗದಲ್ಲಿ ಪತ್ರಿಕೋದ್ಯಮ ಮತ್ತು ಪ್ರವಾಸೋದ್ಯಮ ಕುರಿತ ರಾಷ್ಟ್ರಮಟ್ಟದ ಶಿಬಿರವೊಂದನ್ನು ಮಾಡುವ ಯೋಜನೆಯ ಕುರಿತು ಮಾಹಿತಿ ಹಂಚಿಕೊಂಡರು.

ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ವಿಠಲರಾವ್ ಗಾಯಕವಾಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಲುಗಪ್ಪ ನಿರೂಪಿಸಿದರು. ಉಪನಿರ್ದೇಶಕ ಡಾ.ಎಸ್.ಆರ್. ಚನ್ನವೀರಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.