ADVERTISEMENT

ಸಾಮಾಜಿಕ ಕಾಳಜಿಯ ಶಿಕ್ಷಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 8:25 IST
Last Updated 15 ಜನವರಿ 2012, 8:25 IST

ಬಳ್ಳಾರಿ: ಶಿಕ್ಷಣದಲ್ಲಿ ಸಾಮಾಜಿಕ ಕಾಳಜಿ ಇಲ್ಲದ ಕಾರಣ ಸರ್ಕಾರಿ ಶಾಲೆಗಳಿಂದ ಜನಸಾಮಾನ್ಯರು ದೂರ ಸರಿಯುತ್ತಿದ್ದಾರೆ ಎಂದು ಪತ್ರಕರ್ತ ಪಿ.ಆರ್. ವೆಂಕಟೇಶ್ ಅಭಿಪ್ರಾಯಪಟ್ಟರು.

ಸಮೀಪದ ಹಂದ್ಯಾಳ್ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗ್ರಾಮಾಂತರ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ, ಎಸ್. ದುರುಗಪ್ಪ ಮತ್ತು ವೀರಮ್ಮ ದತ್ತಿ ಕಾರ್ಯಕ್ರಮದಲ್ಲಿ, `ಶಿಕ್ಷಣ ಮತ್ತು ಸಾಮಾಜಿಕ ಮೌಲ್ಯ~ ಕುರಿತ ಉಪನ್ಯಾಸ ನೀಡಿದರು.

ದೇಶದ ಬೆನ್ನೆಲುಬಾದ ಕೃಷಿಯ ರಕ್ಷಣೆಯ ಬಗ್ಗೆ ಶಿಕ್ಷಣ ಕುರುಡಾಗಿದೆ. ಶೈಕ್ಷಣಿಕ ಕ್ಷೇತ್ರ ಸೊರಗುತ್ತಿದೆ. ಸಮಾಜ ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಮಿಕ ಮುಖಂಡ ಎಂ.ಆರ್.ಎಂ. ಇಸ್ಮಾಯಿಲ್ ಮಾತನಾಡಿ, ವಿದೇಶಿ ಸಂಸ್ಕೃತಿಯ ದಾಳಿಯಿಂದಾಗಿ ದೊಡ್ಡ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಅನಿವಾರ್ಯವಾಗಿದೆ. ಇದಕ್ಕೆ ಸರ್ಕಾರವೂ ಮಣೆ ಹಾಕುತ್ತಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಗ್ರಾಮಾಂತರ ಘಟಕದ ಅಧ್ಯಕ್ಷ ಪುರಷೋತ್ತಮ ಹಂದ್ಯಾಳ್ ಮಾತನಾಡಿ, ಸಾಹಿತ್ಯ ಕೇವಲ ನಗರದ ಬುದ್ಧಿಜೀವಿಗಳಿಗೆ ಸೀಮಿತವಾಗದೇ, ಗ್ರಾಮಾಂತರ ಜನರೊಂದಿಗೆ ಬೆಸೆದುಕೊಂಡಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಡಿ. ಜಾನಕಿರಾಮ್ ಕಾರ್ಯಕ್ರಮ ಉದ್ಘಾಟಿಸಿದರು. ಕವಯತ್ರಿ ಎನ್.ಡಿ. ವೆಂಕಮ್ಮ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಶಿಕ್ಷಕಿ ಅಲವೇಲು ಮಂಗಮ್ಮ, ಸಮಾಜಸೇವಕ ಅನೆ ಗಂಗಣ್ಣ, ಪತ್ರಕರ್ತ ವೀರೇಶ್, ಎಸ್‌ಡಿಎಂಸಿ ಅಧ್ಯಕ್ಷ ಶಂಕ್ರಪ್ಪ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಕೇಶವ, ಯು. ದೇವಣ್ಣ, ರಂಗಣ್ಣ ಮುಂತಾದವರು ಉಪಸ್ಥಿತರಿದ್ದರು. ರಾಮಚಂದ್ರರಾವ್ ಭಾವಗೀತೆ ಹಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.