ADVERTISEMENT

ಸೋಮಪ್ಪನ ಕೆರೆ ಅಂಗಳ ತೆರವಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 9:50 IST
Last Updated 24 ಜನವರಿ 2012, 9:50 IST

ಕಂಪ್ಲಿ: ಸೋಮಪ್ಪನ ಕೆರೆ ಅಂಗಳದಲ್ಲಿ ಆರು ದಶಕಗಳಿಂದ ವಾಸಿಸುತ್ತಿರುವ ಸುಮಾರು 320 ಕುಟುಂಬಗಳ ತೆರವು ವಿರೋಧಿಸಿ, ಕೆರೆ ನಿವಾಸಿಗಳ ಧರಣಿಗೆ ಶಾಸಕರು ಬೆಂಬಲಿಸಿ, ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್. ಶಿವಶಂಕರ ಆರೋಪಿಸಿದ್ದಾರೆ.

ಪಟ್ಟಣದ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಜರುಗಿದ ಕೆರೆ ನಿವಾಸಿಗಳ ಸಭೆಯಲ್ಲಿ ಮಾತನಾಡಿ, ಕಂಪ್ಲಿ ಶಾಸಕರಿಗೆ ಹಲವು ತಿಂಗಳ ಹಿಂದೆ ತೆರವು ವಿಚಾರ ಪ್ರಸ್ತಾಪಿಸಲಾಗಿದೆ. ಆ ಕುರಿತು ವಿಧಾನಸಭೆಯಲ್ಲಿ ಚರ್ಚಿಸದೆ, ನಿರ್ಲಕ್ಷ್ಯ ತೋರಿದ್ದಾರೆ. ಬಡವರ ಸ್ಥಿತಿಗತಿ, ಕಷ್ಟ ಕಾರ್ಪಣ್ಯಗಳ ಬಗ್ಗೆ ಅವರು ಅರ್ಥ ಮಾಡಿಕೊಂಡಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ಕೆರೆ ವಿಸ್ತೀರ್ಣ ಪುನರ್ ಪರಿಶೀಲಿಸಿ, ಕೆರೆ ನಿವಾಸಿಗಳಿಂದ ಭವಿಷ್ಯದಲ್ಲಿ ಕೆರೆಗೆ ಯಾವ ಅಪಾಯವಿಲ್ಲ ಮತ್ತು ಕೆರೆ ಅಭಿವೃದ್ಧಿಗೆ ಇವರಿಂದ ಯಾವುದೇ ತೊಂದರೆ ಇಲ್ಲ ಎನ್ನುವ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಕೆರೆ ನಿವಾಸಿಗಳಿಗೆ ಪಟ್ಟಾ ವಿತರಿಸುವಲ್ಲಿ ಮುಂದಾಗಲಿ ಎಂದರು. ಇದೇ ಸಂದರ್ಭದಲ್ಲಿ ಕಂಪ್ಲಿ ಪ್ರದೇಶ ಅಭಿವೃದ್ಧಿ ಕುರಿತು ಶಾಸಕರು ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ. ಗಾದಿಲಿಂಗಪ್ಪ ಕೆರೆ ನಿವಾಸಿಗಳಿಗೆ ಬೆಂಬಲ ಸೂಚಿಸಿದರು.

 ಸೋಮಪ್ಪನ ಕೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಜಿ. ಆನಂದಮೂರ್ತಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎಚ್.ಎಂ. ವಿಶ್ವನಾಥ ಸ್ವಾಮಿ, ಸಿಐಟಿಯು ಸ್ಥಳಿಯ ಮುಖಂಡ ಬಂಡಿ ಬಸವರಾಜ, ಹಮಾಲರ ಸಂಘದ ಮುಖಂಡ ಮುನಿಸ್ವಾಮಿ, ಪುರಸಭೆ ಮಾಜಿ ಸದಸ್ಯ ಬೈರೆಡ್ಡಿ ತಿರುಪಾಲ್, ಬಾದನಹಟ್ಟಿ ಸಿಐಟಿಯು ಮುಖಂಡ ಅಂಜಿನಪ್ಪ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಮುಖಂಡ ಹೊನ್ನುರಸಾಬ್, ಕೆರೆ ಸಂಘದ ಹಬೀಬ್ ರೆಹಮಾನ್, ಟಿ. ಅಮೀನ್ ಅಲಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT