ADVERTISEMENT

ಸ್ಥಳಾಂತರಕ್ಕೆ ಸಂತ್ರಸ್ತರ ಹಿಂದೇಟು

64 ಕುಟುಂಬಗಳಿಗೆ ಕೇವಲ 50 ಮನೆ ನಿರ್ಮಾಣ: ಮೂಲಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 11:01 IST
Last Updated 10 ಆಗಸ್ಟ್ 2016, 11:01 IST
ಹೂವಿನಹಡಗಲಿ ತಾಲ್ಲೂಕು ಮದಲಗಟ್ಟಿಯಲ್ಲಿ ಅಪೂರ್ಣಗೊಂಡ ‘ಆಸರೆ’ ಸ್ಥಳಾಂತರ ಗ್ರಾಮದಲ್ಲಿ ಜಾಲಿ ಬೆಳೆದಿರುವುದು
ಹೂವಿನಹಡಗಲಿ ತಾಲ್ಲೂಕು ಮದಲಗಟ್ಟಿಯಲ್ಲಿ ಅಪೂರ್ಣಗೊಂಡ ‘ಆಸರೆ’ ಸ್ಥಳಾಂತರ ಗ್ರಾಮದಲ್ಲಿ ಜಾಲಿ ಬೆಳೆದಿರುವುದು   

ಹೂವಿನಹಡಗಲಿ: ತಾಲ್ಲೂಕಿನ ಮದಲಗಟ್ಟಿಯಲ್ಲಿ ನಿರಾಶ್ರಿತರ ಪುನರ್ವಸತಿಗಾಗಿ ರೂಪಿಸಿರುವ ‘ಆಸರೆ’ ಯೋಜನೆ ಏಳು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಸಂತ್ರಸ್ತರ ಸೂರಿನ ಕನಸು ಕನಸಾಗಿಯೇ ಉಳಿದಿದೆ.

ಗಣಿ ಕಂಪೆನಿಯ ನೆರವಿನಲ್ಲಿ ಜಾರಿಯಾದ ವಸತಿ ಯೋಜನೆ ನನೆಗುದಿಗೆ ಬಿದ್ದು ವರ್ಷಗಳೇ ಉರುಳಿವೆ. 64 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಹೊಣೆ ಹೊತ್ತ ಕಂಪೆನಿಯು ಬರೀ 50 ಮನೆ ಮಾತ್ರ ನಿರ್ಮಿಸಿ ಕೈ ತೊಳೆದುಕೊಂಡಿದೆ. ಕನಿಷ್ಠ ಮೂಲ ಸೌಕರ್ಯ ಇಲ್ಲದ ನವಗ್ರಾಮಕ್ಕೆ ಸ್ಥಳಾಂತರಗೊಳ್ಳಲು ಸಂತ್ರಸ್ತರು ಹಿಂದೇಟು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮದಲಗಟ್ಟಿ ನಿರಾಶ್ರಿತರಿಗೆ ‘ಆಸರೆ’ ಮರೀಚಿಕೆಯಾಗಿದೆ.

ಹೊಸಪೇಟೆ ತುಂಗಭದ್ರಾ ಜಲಾಶಯ ನಿರ್ಮಾಣ ವೇಳೆ ಮದಲಗಟ್ಟಿಯನ್ನು ‘ಮುಳುಗಡೆ ಗ್ರಾಮ’ ಎಂದು ಘೋಷಿಸಲಾಗಿತ್ತು. ಕಾರಣಾಂತರದಿಂದ ಇಲ್ಲಿನ ಜನರು ಗುರುತಿಸಿದ ಸ್ಥಳಕ್ಕೆ ತೆರಳದೇ ಮೂಲ ಗ್ರಾಮದಲ್ಲೇ ಉಳಿದಿದ್ದರು. 1990ರ ದಶಕದಲ್ಲಿ ಸತತ ನೆರೆ ಹಾವಳಿ ಮತ್ತು ತುಂಗಭದ್ರಾ ಸೇತುವೆ ನಿರ್ಮಾಣದಿಂದ ಅನೇಕ ಕುಟುಂಬಗಳು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದವು. ಬಳಿಕ ಪುನರ್ವಸತಿ ಕಲ್ಪಿಸುವಂತೆ ಸಂತ್ರಸ್ತರು ನಿರಂತರ ಹೋರಾಟ ನಡೆಸಿದ್ದರಿಂದ ಸರ್ಕಾರ 2009ರಲ್ಲಿ ‘ಆಸರೆ’ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು.

ಮೂಲ ಗ್ರಾಮ ಹತ್ತಿರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಸೇರಿದ 3.42 ಎಕರೆ ಜಮೀನಿನಲ್ಲಿ ನಿರಾಶ್ರಿತ 64 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಗಣಿ ಕಂಪೆನಿಗೆ ವಹಿಸಿಕೊಡಲಾಗಿತ್ತು. ಗಣಿ ಕಂಪೆನಿಯಿಂದ ಗುತ್ತಿಗೆ ಪಡೆದ ಗುತ್ತಿಗೆದಾರು 50 ಮನೆ ಮಾತ್ರ ನಿರ್ಮಿಸಿದ್ದಾರೆ. ಅವು ಕೂಡ ವಾಸಕ್ಕೆ ಯೋಗ್ಯವಾಗಿಲ್ಲ. 14 ಮನೆಗಳು ಬುನಾದಿ ಹಂತದಲ್ಲೇ ಇವೆ. ಮನೆಗಳಿಗೆ ಕಿಟಕಿ, ಬಾಗಿಲು ಅಳವಡಿಸಿಲ್ಲ. ಇಡೀ ನವಗ್ರಾಮ ಸುತ್ತಲೂ ಬಳ್ಳಾರಿ ಜಾಲಿ, ಗಿಡ–ಗಂಟಿಗಳು ಬೆಳೆದಿದ್ದು, ಹಗಲು ಹೊತ್ತಿನಲ್ಲೂ ಭಯದ ವಾತಾವರಣವಿದೆ.

ಮೂಲ ಗ್ರಾಮದಲ್ಲಿ ವಾಸಿಸಲು ಮನೆ ಇಲ್ಲದ 12 ಕುಟುಂಬಗಳು ಇಲ್ಲಿಗೆ ಸ್ಥಳಾಂತರಗೊಂಡಿವೆ. ಕಿಟಕಿ, ಬಾಗಿಲುಗಳ ಭದ್ರತೆ ಇಲ್ಲದ ಮನೆಗಳಿಗೆ ಸೀರೆ, ಬಟ್ಟೆ, ಚಾಪೆ ಕಟ್ಟಿಕೊಂಡು ವಾಸವಾಗಿದ್ದಾರೆ. ಕುಡಿಯುವ ನೀರಿಗಾಗಿ ಸುತ್ತಲಿನ ತೋಟಗಳಿಗೆ ಅಲೆಯುವ ಜನರು, ಬೀದಿದೀಪ ಇಲ್ಲದೇ ಕತ್ತಲೆಯಲ್ಲಿ ವಿಷಜಂತುಗಳ ಭಯದಲ್ಲೇ ಬದುಕುತ್ತಿದ್ದಾರೆ. ಇನ್ನೂ ಹಸ್ತಾಂತರವಾಗದ ನವಗ್ರಾಮಕ್ಕೆ  ಗ್ರಾಮ ಪಂಚಾಯ್ತಿ ಮೂಲಸೌಕರ್ಯವನ್ನೂ ಕಲ್ಪಿಸಿಲ್ಲ. ಸಮಸ್ಯೆಗಳ ನಡುವೆಯೂ ಬದುಕು ಕಟ್ಟಿಕೊಂಡ ಇಲ್ಲಿನ ಬಡ ನಿರಾಶ್ರಿತರು ನಿತ್ಯ ನರಕ ಅನುಭವಿಸುತ್ತಿದ್ದಾರೆ.

‘ಇಲ್ಲಿ ಕುಡಿಯಾಕ ನೀರು, ಕರೆಂಟು, ರಸ್ತೆ ಒಂದೂ ಇಲ್ಲ. ಊರೊಳಗ ಮನಿ ಇಲ್ಲದ್ದಕ್ಕಾಗಿ ಸಣ್ಣ ಮಕ್ಕಳ್ಳನ್ನ ಕಟ್ಟಿಕೊಂಡು ಜಾಲಿ ನಡುವೆ ವಾಸ ಮಾಡಕ್ಕತ್ತೀವಿ. ದಿನಾ ಹತ್ತಿರದ ತೋಟಕ್ಕೆ ಹೋಗಿ ನೀರು ತರೋದೆ ದೊಡ್ಡ ಕೆಲ್ಸ ಆಗೇತಿ. ನಮ್ಮ ಗೋಳಿಗೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಇಲ್ಲಿನ ನಿವಾಸಿ ಪುಷ್ಪಾವತಿ ಅಳಲು ತೋಡಿಕೊಂಡರು.

‘ನಮ್ಮೂರಿನ 64 ಕುಟುಂಬಕ್ಕೆ ಮನೆ ಕಟ್ಟಿಕೊಡ್ತೀವಿ ಅಂತಾ ಹೇಳಿದವರು ಬರೀ 50 ಮನೆ ಮಾತ್ರ ಕಟ್ಟಿಸಿ ಊರಿನ ಜನರ ನಡುವೆ ಸರ್ಕಾರದವರು ಜಗಳ ಹಚ್ಯಾರ. ಗಣಿ ಕಂಪೆನಿಯವ್ರು ಹಣ ನೀಡಿಲ್ಲ ಅಂತಾ ಗುತ್ತಿಗೆದಾರ ಮನೆಯ ಕಿಟಕಿ, ಬಾಗಿಲು, ಕಡಪ ಕಲ್ಲು ಕಿತ್ಕೊಂಡು ಹೋದ. ಇದನ್ನು ಯಾರೂ ಕೇಳಿಲ್ಲ. ಊರೊಳಗ  ಮನೆ ಕಟ್ಟಂಗಿಲ್ಲ, ಇಲ್ಲಿ ನೋಡಿದ್ರ ಯಾವುದೇ ಸೌಲಭ್ಯ ಇಲ್ಲ’ ಎಂದು ಸಂತ್ರಸ್ತ ಮುದ್ದಾಬಳ್ಳಿ ರಂಗಸ್ವಾಮಿ ದೂರಿದರು.

ಜಿಲ್ಲಾಧಿಕಾರಿ ಇಲ್ಲಿಗೆ ಖುದ್ದು ಭೇಟಿ ನೀಡಿ ಅಪೂರ್ಣಗೊಂಡಿರುವ ‘ಆಸರೆ’ ಯೋಜನೆಯನ್ನು ಪರಿಶೀಲಿಸಬೇಕು. ಎಲ್ಲ ನಿರಾಶ್ರಿತರಿಗೂ ಮನೆ ನಿರ್ಮಿಸಿಕೊಡುವ ಜತೆಗೆ ಸ್ಥಳಾಂತರ ಗ್ರಾಮಕ್ಕೆ ಜಿಲ್ಲಾಡಳಿತದಿಂದಲೇ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಮದಲಗಟ್ಟಿ ಸಂತ್ರಸ್ತರು ಆಗ್ರಹಿಸಿದ್ದಾರೆ.
–ಕೆ. ಸೋಮಶೇಖರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.