ADVERTISEMENT

ಸ್ಮರಣ ಶಕ್ತಿ ವೃದ್ಧಿಗೆ ಏಕಾಗ್ರತೆಯೇ ಮದ್ದು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 4:45 IST
Last Updated 6 ಫೆಬ್ರುವರಿ 2012, 4:45 IST

ಬಳ್ಳಾರಿ: ಏಕಾಗ್ರತೆ, ನಂಬಿಕೆ, ಸಹಕಾರ, ಉತ್ತಮ ಚಿಂತನೆ, ನಿಯಮಿತ ನಿದ್ರೆ, ಕ್ರಿಯಾಶೀಲತೆ, ಸಕಾರಾತ್ಮಕ ಆಲೋಚನೆಯಿಂದ ಸ್ಮರಣ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದಾಗಿದೆ ಎಂದು `ಮೆಮರಿ ಗುರು~ ಖ್ಯಾತಿಯ ಬಿಸ್ವರೂಪ್ ರಾಯ್ ಚೌಧರಿ ತಿಸಿದರು.

ನಗರದ ರಾಘವ ಕಲಾಮಂದಿರದಲ್ಲಿ ಭಾನುವಾರ ಸ್ಮರಣ ಶಕ್ತಿ ದ್ವಿಗುಣ ಮಾಡಿಕೊಳ್ಳುವ ಕುರಿತು ಅವರು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರೀಕ್ಷೆಯ ಕುರಿತ ಭಯ, ಆತಂಕ, ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಕುರಿತ ನ್ಯೂನತೆ, ಅವಸರ, ವಿಷಯಗಳನ್ನು ನೆನಪಿಸಿಕೊಳ್ಳಲು ಇರುವ ತೊಡಕುಗಳನ್ನು ಸ್ವಯಂ ಆಗಿ ನಿವಾರಿಸಿಕೊಂಡು, ಸ್ಪರ್ಧಾತ್ಮಕ ಜಗತ್ತಿನಲ್ಲಿ  ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳೇ ಮುಂದಾಗಬೇಕು ಎಂದು ಅವರು ಹೇಳಿದರು.

ಮನುಷ್ಯ ಇಷ್ಟೆಲ್ಲ ಅಭಿವೃದ್ಧಿ ಸಾಧಿಸಲು, ಆವಿಷ್ಕಾರಗಳನ್ನು ನಡೆಸಲು ಆತನ ಮೆದುಳೇ ಮೂಲ ಕಾರಣ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಏನೆಲ್ಲ ಸಾಧನೆ ಮಾಡಬೇಕಾದರೆ ಮನುಷ್ಯನ ಮೆದುಳೇ ಪ್ರೇರಣೆ. ಆ ಮೆದುಳಿಗೆ  ಇರುವ ಸಾಮರ್ಥ್ಯವನ್ನು ಪ್ರತಿಯೊಬ್ಬರೂ ಸೂಕ್ತವಾಗಿ, ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ದಡ್ಡ ಎನ್ನಿಸಿಕೊಂಡ ವಿದ್ಯಾರ್ಥಿಯು ಅಭ್ಯಾಸದಲ್ಲಿ ಎಲ್ಲರಿಗಿಂತ ಹಿಂದೆ ಉಳಿಯುವುದಕ್ಕೆ ಆಸಕ್ತಿಯ ಕೊರತೆ ಹಾಗೂ ನೆನಪಿನ ಶಕ್ತಿಯ ನ್ಯೂನತೆಯೇ ಕಾರಣ. ಇರುವ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಾರೂ ದಡ್ಡರಲ್ಲ ಎಂದು ಅವರು ಒತ್ತಿಹೇಳಿದರು.

ಸ್ವರಣ ಶಕ್ತಿಯ ದ್ವಿಗುಣಕ್ಕೆ ಹಾಗೂ ಪರಿಣಾಮಕಾರಿ ಓದಿಗೆ ನೆರವಾಗುವ ನಿಟ್ಟಿನಲ್ಲಿ ಈಗಾಗಲೇ ದೇಶ- ವಿದೇಶಗಳಲ್ಲಿ 2000ಕ್ಕೂ ಹೆಚ್ಚು ಉಪನ್ಯಾಸ ನೀಡಿರುವುದಾಗಿ ತಿಳಿಸಿದ ಅವರು, ಈ ಕುರಿತು 25ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾಗಿ ಹೇಳಿದರು.

ಮೆಮರಿ ಲ್ಯಾಬ್, ನೆಮೋನಿಕ್ ಪೆನ್, ಹ್ಯಾಪಿನೆಸ್ ಮೆಷಿನ್ ಅಂಡ್ ಅನಿಮೇಟೆಡ್ ಕಾಸ್ಮಿಕ್ ಎನರ್ಜಿ ಕಾರ್ಡ್‌ಗಳ ಮೂಲಕ ಯುವಕರು, ಉದ್ಯೋಗಿಗಳ ಸ್ಮರಣ ಶಕ್ತಿ ಹೆಚ್ಚಿಸಲು ನಗರದಲ್ಲಿ ಇದೇ 6ರಿಂದ ನಾಲ್ಕು ದಿನಗಳ ಕಾಲ ವಿಶೇಷ ತರಬೇತಿ ನೀಡುವುದಾಗಿ ಅವರು ತಿಳಿಸಿದರು.

ರಾಘವ ಕಲಾಮಂದಿರ ಹಾಗೂ ಜೋಳದರಾಶಿ ಡಾ.ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿರುವ ಈ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ನ್ಯೂನತೆಯನ್ನು ಸರಿಪಡಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಪರೀಕ್ಷೆಗೆ ಸಂಬಂಧಿಸಿದಂತೆ ಸ್ಮರಣ ಶಕ್ತಿ ಹೆಚ್ಚಳ, ಪರೀಕ್ಷೆಯಲ್ಲಿ ತಪ್ಪುಗಳಾಗದಂತೆ ತಡೆಯುವ ಬಗೆ, ಮನಸ್ಸನ್ನು ನಿಯಂತ್ರಣದಲ್ಲಿ ಇಡುವ ತಂತ್ರಗಾರಿಕೆ, ಪರೀಕ್ಷೆಯ ಭಯದಿಂದ ಹೊರಬರುವುದು, ಏಕಾಗ್ರತೆಯನ್ನು ಸಾಧಿಸುವ ಬಗೆಯ ಕುರಿತು ಅವರು ಪ್ರಾತ್ಯಕ್ಷಿಕೆ ಸಮೇತ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.