ADVERTISEMENT

ಹಂಪಿಯಲ್ಲಿ ಮುಂದುವರಿದ ಉತ್ಖನನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 10:08 IST
Last Updated 6 ಜೂನ್ 2018, 10:08 IST
ಹಂಪಿಯಲ್ಲಿ ನಡೆಯುತ್ತಿರುವ ಉತ್ಖನನದ ಸಂದರ್ಭದಲ್ಲಿ ಪತ್ತೆಯಾಗಿರುವ ನೀರಿನ ಸಂಪರ್ಕ ವ್ಯವಸ್ಥೆಯನ್ನು ಎ.ಎಸ್‌.ಐ. ಹಂಪಿ ವೃತ್ತದ ಸೂಪರಿಟೆಂಡೆಂಟ್‌ ಕೆ. ಮೂರ್ತೇಶ್ವರಿ ಅವರು ಮಂಗಳವಾರ ವೀಕ್ಷಿಸಿದರು
ಹಂಪಿಯಲ್ಲಿ ನಡೆಯುತ್ತಿರುವ ಉತ್ಖನನದ ಸಂದರ್ಭದಲ್ಲಿ ಪತ್ತೆಯಾಗಿರುವ ನೀರಿನ ಸಂಪರ್ಕ ವ್ಯವಸ್ಥೆಯನ್ನು ಎ.ಎಸ್‌.ಐ. ಹಂಪಿ ವೃತ್ತದ ಸೂಪರಿಟೆಂಡೆಂಟ್‌ ಕೆ. ಮೂರ್ತೇಶ್ವರಿ ಅವರು ಮಂಗಳವಾರ ವೀಕ್ಷಿಸಿದರು   

ಹಂಪಿ (ಹೊಸಪೇಟೆ ತಾಲ್ಲೂಕು): ಇಲ್ಲಿನ ರಾಜರ ಖಾಸಾ ಜಾಗದಿಂದ ಸ್ವಲ್ಪವೇ ದೂರದಲ್ಲಿ ಪತ್ತೆಯಾಗಿರುವ ವಿಜಯನಗರ ಅರಸರ ಕಾಲದ ಕುಡಿಯುವ ನೀರಿನ ಪೈಪ್‌ಲೈನ್‌ ವ್ಯವಸ್ಥೆ ಇರುವ ಸ್ಥಳದಲ್ಲಿ ಉತ್ಖನನ ಮುಂದುವರಿದಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ (ಎ.ಎಸ್‌.ಐ.) ಮಾರ್ಚ್‌ನಲ್ಲಿ ಕಾಂಪೌಂಡ್‌ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ನೆಲ ಅಗೆಯುತ್ತಿದ್ದಾಗ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಂಪರ್ಕ ಕಲ್ಪಿಸಿದ್ದ ಪೈಪ್‌ಗಳು ಪತ್ತೆಯಾಗಿದ್ದವು. ಎರಡೂವರೆಯಿಂದ ಮೂರು ಅಡಿ ನೆಲದಾಳದಲ್ಲಿ ಹಾಗೂ ಅದರ ಮೇಲ್ಭಾಗದಲ್ಲಿ ಇನ್ನೊಂದು ಪೈಪ್‌ಲೈನ್‌ ಇದೆ. 4X4 ಅಡಿ ಆಳ, ಅಗಲದ ತೊಟ್ಟಿ ಕೂಡ ಈ ವೇಳೆ ಸಿಕ್ಕಿದೆ. ತೊಟ್ಟಿಗೆ ಒಂದು ಕಡೆ ನೀರಿನ ಸಂಪರ್ಕ ಕಲ್ಪಿಸಿದರೆ, ಅದರಿಂದ ಬೇರೆ ಬೇರೆ ಕಡೆ ನೀರು ಹರಿದು ಹೋಗಲು ಮೂರು ಕಡೆಗಳಲ್ಲಿ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಲಾಗಿದೆ.

‘ಮಡಕೆ ತಯಾರಿಸುವ ಮಣ್ಣು ಉಪಯೋಗಿಸಿಕೊಂಡು ಪೈಪ್‌ಗಳನ್ನು ಮಾಡಲಾಗಿದೆ. ಪೈಪ್‌ಲೈನ್‌ ಕೆಳಭಾಗ ಹಾಗೂ ಮೇಲ್ಭಾಗವನ್ನು ಗಾರೆ, ಇಟ್ಟಿಗೆಯಿಂದ ಕಟ್ಟಲಾಗಿದೆ. ತೊಟ್ಟಿ ಸಹ ನಿರ್ಮಿಸಲಾಗಿದೆ. ಪೈಪ್‌ಲೈನ್‌ ಹಾದು ಹೋಗಿರುವ ಕುರುಹು ಆಧರಿಸಿ ಉತ್ಖನನ ಮುಂದುವರಿದಿದೆ’ ಎಂದು ಎ.ಎಸ್‌.ಐ. ಹಂಪಿ ವೃತ್ತದ ಸೂಪರಿಟೆಂಡೆಂಟ್‌ ಕೆ. ಮೂರ್ತೇಶ್ವರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪೈಪ್‌ಲೈನ್‌ ಅವಶೇಷಗಳು ದೊರೆತ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ರಾಜರ ಖಾಸಾ ಜಾಗವಿದ್ದು, ವೀರ ಹರಿಹರನ ಅರಮನೆ, ನೆಲಮಾಳಿಗೆ ಸ್ಮಾರಕಗಳ ಕುರುಹುಗಳು ಉತ್ಖನನದ ಸಂದರ್ಭದಲ್ಲಿ ಪತ್ತೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.