ADVERTISEMENT

ಹಂಪಿ ಜಾತ್ರೆಯಲ್ಲಿ ರೊಟ್ಟಿ ದಾಸೋಹ

60 ವರ್ಷಗಳಿಂದ ಹಂಪಿಯಲ್ಲಿ ರೊಟ್ಟಿ ಮಾಡಿ ಉಣಬಡಿಸುತ್ತಿರುವ ಭಕ್ತರ ಅನನ್ಯ ಸೇವೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಮಾರ್ಚ್ 2018, 11:35 IST
Last Updated 29 ಮಾರ್ಚ್ 2018, 11:35 IST
ಹಂಪಿಯ ವಿರೂಪಾಕ್ಷೇಶ್ವರ ದೇಗುಲ ಸಮೀಪದ ಮಂಟಪದ ಬಳಿ ರೊಟ್ಟಿ ಮಾಡುತ್ತಿರುವ ಆರಾಳು ಗ್ರಾಮಸ್ಥರು
ಹಂಪಿಯ ವಿರೂಪಾಕ್ಷೇಶ್ವರ ದೇಗುಲ ಸಮೀಪದ ಮಂಟಪದ ಬಳಿ ರೊಟ್ಟಿ ಮಾಡುತ್ತಿರುವ ಆರಾಳು ಗ್ರಾಮಸ್ಥರು   

ಹಂಪಿ (ಹೊಸಪೇಟೆ ತಾಲ್ಲೂಕು): ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಸುತ್ತ ಈಗ ಒಂದೇ ಸದ್ದು. ಅದು ಟಪ್‌...ಟಪ್‌...ಟಪ್‌....ಎಂಬ ಶಬ್ದ.

ಇದೇನಿದು ಸದ್ದು ಎಂದು ಆಶ್ಚರ್ಯ ಪಡಬೇಕಿಲ್ಲ. ವಿರೂಪಾಕ್ಷನ ಸನ್ನಿಧಿಗೆ ಬರುವ ಭಕ್ತರಿಗೆ ಇಲ್ಲಿ ನಿತ್ಯ ರೊಟ್ಟಿ ದಾಸೋಹ ಮಾಡಲಾಗುತ್ತಿದೆ. ಅದಕ್ಕಾಗಿ ಮಹಿಳೆಯರು ರೊಟ್ಟಿ ಸಿದ್ಧಪಡಿಸುತ್ತಿದ್ದಾರೆ. ಹಾಗಾಗಿ ಎಲ್ಲೆಡೆ ರೊಟ್ಟಿ ತಟ್ಟುವ ಶಬ್ದ ಅನುರಣಿಸುತ್ತಿದೆ. ಅಂದಹಾಗೆ ಇದು ದೇವಸ್ಥಾನದಿಂದ ಮಾಡಿರುವ ದಾಸೋಹ ವ್ಯವಸ್ಥೆ ಅಲ್ಲ. ನೆರೆಯ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆರಾಳು ಗ್ರಾಮದ ಶ್ರೀಗುರು ರುದ್ರಸ್ವಾಮಿ ದಾಸೋಹ ಸಮಿತಿ ಸದಸ್ಯರು ಸ್ವಯಂ ಇಚ್ಛೆಯಿಂದ ಮಾಡುತ್ತಿರುವ ಕೆಲಸ.

ಅಂದಹಾಗೆ ಅವರು ನಿನ್ನೆ, ಮೊನ್ನೆಯಿಂದ ಈ ಕೆಲಸ ಮಾಡುತ್ತಿಲ್ಲ. ಅದಕ್ಕೆ ಸುದೀರ್ಘ 60 ವರ್ಷಗಳ ಇತಿಹಾಸವಿದೆ. ಪ್ರತಿವರ್ಷ ಹಂಪಿ ಜಾತ್ರೆಗೂ ಒಂದು ವಾರದ ಮುಂಚೆಯೇ ಬಂದು ಬೀಡು ಬಿಟ್ಟಿರುತ್ತಾರೆ. ಜಾತ್ರೆ ಮುಗಿದ ನಾಲ್ಕೈದು ದಿನ ಇಲ್ಲೇ ಇದ್ದು, ವಿವಿಧ ಕಡೆಗಳಿಂದ ಬರುವ ಭಕ್ತರಿಗೆ ರೊಟ್ಟಿ ಉಣಬಡಿಸುತ್ತಾರೆ.

ADVERTISEMENT

ಆರಾಳು ಗ್ರಾಮದಿಂದ ಸುಮಾರು 75ಕ್ಕೂ ಹೆಚ್ಚು ಜನ ಹಂಪಿಗೆ ಬಂದಿದ್ದಾರೆ. 12 ಕ್ವಿಂಟಲ್‌ ಅಕ್ಕಿ, ಒಂದು ಕ್ವಿಂಟಲ್ ತೊಗರಿ ಬೇಳೆ, ಮೂರು ಕ್ವಿಂಟಲ್‌ ಜೋಳ, ತಲಾ 100 ಕೆ.ಜಿ. ಬದನೆಕಾಯಿ, ಆಲೂಗಡ್ಡೆ, 200 ಕೆ.ಜಿ. ಉಳ್ಳಾಗಡ್ಡಿಯನ್ನು ಅವರು ತಮ್ಮೊಂದಿಗೆ ವಾಹನದಲ್ಲಿ ತಂದಿದ್ದಾರೆ.

ವಿರೂಪಾಕ್ಷೇಶ್ವರ ದೇಗುಲದ ಮನ್ಮಥ ಹೊಂಡದ ಬಳಿಯಿರುವ ಮಂಟಪದಲ್ಲಿ ನಿತ್ಯ ಅಡುಗೆ ತಯಾರಿಸುತ್ತಾರೆ. ಯಾರು, ಎಲ್ಲಿಂದ, ಯಾವ ಜಾತಿ ಯಾವುದನ್ನೂ ಕೇಳದೇ ಪ್ರತಿಯೊಬ್ಬರಿಗೂ ರೊಟ್ಟಿ ಉಣ ಬಡಿಸುತ್ತಾರೆ. ಅಷ್ಟು, ಇಷ್ಟೇ ಎಂದು ಏನನ್ನೂ ಪ್ರಶ್ನಿಸುವುದಿಲ್ಲ. ಹೊಟ್ಟೆ ತುಂಬುವವರೆಗೆ ಊಟ ಮಾಡಬಹುದು. ತಮ್ಮೊಂದಿಗೆ ತಂದ ಬೇಳೆ, ಕಾಳು ಮುಗಿಯುವವರೆಗೆ ಇಲ್ಲೇ ಇರುತ್ತಾರೆ. ಹಿಡಿ ಕಾಳು ಕೂಡ ಮರಳಿ ಒಯ್ಯುವುದಿಲ್ಲ. ಈ ಕುರಿತು ಪ್ರಶ್ನಿಸಿದರೆ, ‘ದೇವರು ನಮಗೆ ಕೊಟ್ಟದ್ದನ್ನು ಎಲ್ಲರೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದೇವೆ. ನಾವೇನೂ ದೊಡ್ಡ ಕೆಲಸ ಮಾಡುತ್ತಿಲ್ಲ’ ಎಂದು ವಿನಯದಿಂದ ಹೇಳುತ್ತಾರೆ ಆರಾಳು ಗ್ರಾಮಸ್ಥರು.

ಕೆಲ ಮಹಿಳೆಯರು ಬೆಳಿಗ್ಗೆ ರೊಟ್ಟಿ, ಪಲ್ಯ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡರೆ, ಕೆಲವರು ಬಂದವರಿಗೆ ಊಟ ಬಡಿಸುತ್ತಾರೆ. ಸಂಜೆ ವೇಳೆಯಲ್ಲಿ ಇವರ ಕೆಲಸ ಅದಲು ಬದಲಾಗುತ್ತದೆ. ಯಾರೋ ಒಬ್ಬರ ಮೇಲೆ ಹೆಚ್ಚಿನ ಕೆಲಸದ ಭಾರ ಬೀಳಬಾರದು ಎಂದು ಪಾಳಿ ಪ್ರಕಾರ ದಾಸೋಹ ಸೇವೆ ಮಾಡುತ್ತಿದ್ದಾರೆ.

‘ಹಂಚಿಕೊಂಡು ತಿನ್ನಬೇಕು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಮೊದಲು ಅವರೇ ಈ ದಾಸೋಹ ಪ್ರಾರಂಭಿಸಿದ್ದರು. ಈಗ ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಎಂದು ಗ್ರಾಮಸ್ಥರಾದ ಸುಮತಿ, ದಕ್ಷಿಣಮೂರ್ತಿ ದಾಸ್ನಾಳುಮಠ, ಚೆನ್ನವೀರನಗೌಡ ಕೇರಿ, ಶ್ರೀಧರಗೌಡ ಮಾಲಿಪಾಟೀಲ, ಯಮನಪ್ಪ ನವಲಿ ಹೇಳಿದರು.

ಬೇರೆ ಊರುಗಳಲ್ಲಿ ನಡೆಯುವ ಜಾತ್ರೆಗೆ ಭಕ್ತರು ಮನೆಯಲ್ಲಿ ತಯಾರಿಸಿದ ಅಲ್ಪಸ್ವಲ್ಪ ರೊಟ್ಟಿ, ಜೋಳ ಹಾಗೂ ಇತರೆ ಪದಾರ್ಥಗಳನ್ನು ತಂದು ಕೊಡುತ್ತಾರೆ. ಆದರೆ, ಈ ಗ್ರಾಮಸ್ಥರು ಸ್ವತಃ ದೇವಸ್ಥಾನಕ್ಕೆ ಬಂದು, ಅಲ್ಲಿಯೇ ಎರಡು ವಾರ ಉಳಿದುಕೊಂಡು ಸ್ವಂತ ಅವರೇ ಅಡುಗೆ ಮಾಡಿ ಉಣಬಡಿಸುತ್ತಿರುವುದು ವಿಶೇಷ.

31ರಂದು ಬ್ರಹ್ಮರಥೋತ್ಸವ

ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಇದೇ 31ರಂದು ಹಂಪಿ ವಿರೂಪಾಕ್ಷೇಶ್ವರ ದೇಗುಲದ ರಥಬೀದಿಯಲ್ಲಿ ನಡೆಯಲಿದೆ.ಬೆಳಿಗ್ಗೆ 10.45ಕ್ಕೆ ಮಡಿತೇರು ನಡೆಯಲಿದೆ. ಸಂಜೆ 4ಕ್ಕೆ ಧ್ವಜ ಮುಕ್ತಿಬಾವುಟದ ಹರಾಜು ಪ್ರಕ್ರಿಯೆ ಜರುಗುವುದು. ಸಂಜೆ 4.35ಕ್ಕೆ ಬ್ರಹ್ಮರಥೋತ್ಸವವು ವಿದ್ಯಾರಣ್ಯ ಭಾರತಿ ಅವರ ಸಮ್ಮುಖದಲ್ಲಿ ಜರುಗಲಿದೆ.

ಏ.1ರಂದು ರಾತ್ರಿ ರಜತ ಅಶ್ವವಾಹನೋತ್ಸವ ಮೃಗಯಾತ್ರೆ ಕಡಬಿನ ಕಾಳಗ, 2ರಂದು ಬೆಳಿಗ್ಗೆ 7ಕ್ಕೆ ಪೂರ್ಣಾಹುತಿ ವಸಂತೋತ್ಸವ, 10.30ಕ್ಕೆ ಚಕ್ರತೀರ್ಥ ಕೋದಂಡರಾಮಸ್ವಾಮಿ ಕಲ್ಯಾಣೋತ್ಸವ ಹಾಗೂ ರಥೋತ್ಸವ, ರಾತ್ರಿ 8.30ಕ್ಕೆ ಮನ್ಮಥತೀರ್ಥದಲ್ಲಿ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

**

ಅನ್ನ ದಾಸೋಹಕ್ಕಿಂತ ದೊಡ್ಡ ಕೆಲಸ ಯಾವುದೂ ಇಲ್ಲ. ಅದೇ ನಿಜವಾದ ಭಗವಂತನ ಸೇವೆ ಎಂದು ತಿಳಿದುಕೊಂಡು ಪ್ರತಿವರ್ಷ ರೊಟ್ಟಿ ದಾಸೋಹ ಸೇವೆ ಮಾಡುತ್ತಿದ್ದೇವೆ – ಶ್ರೀಧರಗೌಡ ಮಾಲಿಪಾಟೀಲ, ಆರಾಳು ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.