ADVERTISEMENT

ಹವಾಮಾನ ಮಾಹಿತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 8:35 IST
Last Updated 20 ಜನವರಿ 2011, 8:35 IST

ಹಗರಿಬೊಮ್ಮನಹಳ್ಳಿ: ಮುಂದಿನ ಮುಂಗಾರು ಹಂಗಾಮಿನಲ್ಲಿ  ತೋಟಗಾರಿಕೆ ಬೆಳೆಗಾರರಿಗೆ ವಾರಕ್ಕೊಮ್ಮೆ ವಾತಾವರಣದ ನಿಖರ ಮಾಹಿತಿ ನೀಡುವ ವ್ಯವಸ್ಥೆ ಸಾಧ್ಯವಾಗಬಹುದು ಎಂಬ ಸುಳಿವನ್ನು ಧಾರವಾಡ ಕೃಷಿ ವಿ.ವಿ. ಪ್ರಾಧ್ಯಾಪಕ ಡಾ.ವಿ.ಬಿ. ನರಗುಂದ ನೀಡಿದರು.

ತಾಲ್ಲೂಕಿನ ಶಿವಾನಂದನಗರ ಗ್ರಾಮದಲ್ಲಿ ದಾಳಿಂಬೆ ಬೆಳೆಗಾರರಾದ ಹರಿರಾಜು ಅವರ ತೋಟದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ “ದಾಳಿಂಬೆ ಬೆಳೆಯ ದುಂಡಾಣು ಅಂಗಮಾರಿ ರೋಗದ ಹತೋಟಿ ಕ್ರಮಗಳ ಬಗ್ಗೆ ರೈತರೊಂದಿಗೆ ವಿಚಾರ ವಿನಿಮಯ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನಿರೀಕ್ಷಿತವಾಗಿ ವಾತಾವರಣ ಬದಲಿಯಾಗುವುದರಿಂದ ತಾಲ್ಲೂಕಿನ ದಾಳಿಂಬೆ ಕೃಷಿಕರು ಅತಂತ್ರಗೊಂಡಿದ್ದಾರೆ ಎಂಬ ರೈತರ ಆತಂಕಗಳಿಗೆ ಅವರು ಉತ್ತರಿಸಿದರು. ‘ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ವಾತಾವರಣ ಅಧ್ಯಯನ ಕೇಂದ್ರಗಳು ವಾತಾವರಣ ಬದಲಾವಣೆ ಕುರಿತು ನಿರಂತರ ಸಂಶೋಧನೆ ನಡೆಸುತ್ತಿವೆ’ ಎಂದು ತಿಳಿಸಿದರು.     
      
ಶಿರಸಿ ವಿಸ್ತರಣಾ ಘಟಕದ ವಿಸ್ತರಣಾ ಮುಖಂಡ ಡಾ.ಎಂ.ಆರ್. ರವಿಕುಮಾರ್ ಅವರು ದಾಳಿಂಬೆ ಬೆಳೆಗೆ ತಗಲುವ ರೋಗಗಳು ಹಾಗೂ ನಿರ್ವಹಣೆಯ ಕ್ರಮಗಳನ್ನು ವಿವರಿಸಿದರು.

‘ಮೋಡದ ವಾತಾವರಣ, ತೇವಾಂಶ ಮತ್ತು ಮಳೆ ದಾಳಿಂಬೆ ಬೆಳೆಯ ನಾನಾ ರೋಗಗಳಿಗೆ ಕಾರಣವಾಗಿದೆ.  ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡುವ ಮೂಲಕ ದಾಳಿಂಬೆ ಹಣ್ಣು ಸೀಳುವ ಸಮಸ್ಯೆಗೆ ಪರಿಹಾರ ಪಡೆಯಬಹುದು’ ಎಂದರು.

‘ದಾಳಿಂಬೆ ಗಿಡಗಳು ಪ್ರಾಥಮಿಕ ಹಂತದಲ್ಲಿದ್ದಾಗ ಮಾತ್ರ ಮಿಶ್ರ ಬೇಸಾಯವಾಗಿ ಬೀನ್ಸ್, ಮೂಲಂಗಿ ಮತ್ತು ಚೆಂಡು ಹೂಗಳನ್ನು ಬೆಳೆಸಿ ಸಾರಜನಕದ ಕೊರತೆ ನೀಗಿಸಬಹುದು ಎಂದು ಸೂಚಿಸಿದರು.

‘ಎಕರೆಗೆ 80 ಲಕ್ಷ ಲಾಭ’
‘ಹಿರಿಯೂರು, ಬಾಗಲಕೋಟೆ ಬಳಿಯ ಕಲಾದಗಿ ಮತ್ತು ರಾಜ್ಯದ ಇತರೆಡೆ ದಾಳಿಂಬೆ ಕೃಷಿ ಕೈಗೊಂಡು ಪ್ರತಿ ಎಕರೆ 80ಲಕ್ಷ ಲಾಭ ಸಂಪಾದಿಸಿರುವ ಉದಾಹರಣೆಗಳಿವೆ. ಹರಿಯುವ ನೀರಿನ ಬದಲಾಗಿ ಹನಿ ನೀರಾವರಿ ಪದ್ಧತಿಯಲ್ಲಿ ದಾಳಿಂಬೆ ಕೃಷಿ ಚಟುವಟಿಕೆ ನಡೆಸುವುದು ಸೂಕ್ತ’ ಎಂದು ಡಾ.ಎಂ.ಆರ್. ರವಿಕುಮಾರ್ ಅಭಿಪ್ರಾಯಪಟ್ಟರು.

ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಎತ್ತಿನಮನಿ ಸೇರಿದಂತೆ ಪ್ರಗತಿಪರ ರೈತರಾದ ಬನ್ನಿಗೋಳು ವೆಂಕಣ್ಣ, ಟಿ.ಮಂಜುನಾಥ್, ಬಾಣದ ಬಸಪ್ಪ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ಜಿ.ಪರಮೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.