ADVERTISEMENT

ಹಾಲಿನ ದರ ಹೆಚ್ಚಳ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 5:59 IST
Last Updated 3 ಆಗಸ್ಟ್ 2013, 5:59 IST

ಹೂವಿನಹಡಗಲಿ: ಹಾಲಿನ ದರ ಹೆಚ್ಚಿಸುವ ಕುರಿತು ಕರ್ನಾಟಕ ಹಾಲು ಮಹಾಮಂಡಳ ಕೈಗೊಂಡಿರುವ ತೀರ್ಮಾನ ವಿರೋಧಿಸಿ ಇಲ್ಲಿನ ಸೋಷಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪ್ರತಿಭಟನೆ ನಡೆಸಿತು.

ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಹಾಲಿನ ದರ ಹೆಚ್ಚಿಸುವ ತೀರ್ಮಾನ ಕೈಬಿಡುವಂತೆ ಒತ್ತಾಯಿಸಿ ತಹಶೀಲ್ದಾರ್‌ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಎಸ್‌ಯುಸಿಐ ಸಂಚಾಲಕ ರಹಮತ್ ಬೀರಬ್ಬಿ  ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಮತ್ತು ಮಧ್ಯಮವರ್ಗದ ಕುಟುಂಬಗಳು ತತ್ತರಿಸಿರುವಾಗ ವರ್ಷದಲ್ಲಿ 2ನೇ ಬಾರಿ ಹಾಲು ದರ ಹೆಚ್ಚಿಸುವ ಸರ್ಕಾರದ ತೀರ್ಮಾನ ಜನವಿರೋಧಿಯಾಗಿದೆ ಎಂದು ಖಂಡಿಸಿದರು.

ವರ್ಷದ ಆರಂಭದಲ್ಲಿ ಪ್ರತಿ ಲೀಟರ್ ಹಾಲಿಗೆ ರೂ 3  ಏರಿಸಿದ್ದು, ಆಗಸ್ಟ್10 ರಿಂದ ಮತ್ತೆ ್ಙ 2 ಏರಿಸುವ ಅವೈಜ್ಞಾನಿಕ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿದ ಅವರು, ಹಾಲಿನ ಉತ್ಪನ್ನ ಮತ್ತು ಸಿಹಿ ತಿನಿಸುಗಳ ಮೂಲಕ ಹೋಟೆಲ್‌ಗಳು ಹಾಲಿನ ಬೆಲೆ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ಹೊರಿಸಲಿವೆ ಎಂದರು.

ಹಾಲಿನ ದರ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ ಅಷ್ಟೇನೂ ಲಾಭವಾಗುವುದಿಲ್ಲ. ಈ ಹಿಂದೆಯೂ ಹಾಲಿನ ಬೆಲೆ ಏರಿಕೆಯ ಹೆಚ್ಚಿನ ಭಾಗ ಆಡಳಿತ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚಕ್ಕೆ ಸರಿದೂಗಿಸಿದ ಉದಾಹರಣೆಗಳಿವೆ. ಮೂಲಸೌಕರ್ಯ ವೃದ್ಧಿ ಮತ್ತು ನಷ್ಟ ಭರ್ತಿಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿರುವುದು ವಿಷಾದನೀಯ ಎಂದರು.

ಕೆಎಂಎಫ್‌ನ ದುಂದು ವೆಚ್ಚದ ಹೊರೆಯನ್ನು ಗ್ರಾಹಕರಿಗೆ ಹೊರಿಸುವ ತೀರ್ಮಾನ ಸರಿಯಲ್ಲ. ಹಾಲು ದರ ಹೆಚ್ಚಳ ತೀರ್ಮಾನ ಕೈಬಿಟ್ಟು ಬಡ, ಮಧ್ಯಮವರ್ಗದ ಜನರ ಹಿತಾಸಕ್ತಿ ಕಾಯುವಂತೆ ಅವರು  ರಹಮತ್ ಆಗ್ರಹಿಸಿದರು. ಮಲ್ಲಿಕಾರ್ಜುನ, ಬೀರಾನಾಯ್ಕ, ರಾಮದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.