ADVERTISEMENT

ಹೊಸಪೇಟೆಗೆ ಎರಡು ಶತಮಾನದ ಸಂಭ್ರಮ

ಕೆ.ರಾಮಚಂದ್ರ
Published 21 ಏಪ್ರಿಲ್ 2013, 7:14 IST
Last Updated 21 ಏಪ್ರಿಲ್ 2013, 7:14 IST

ಜೋಳದರಾಶಿ ಗುಡ್ಡ ಯಾವ ಊರಲ್ಲಿದೆ?  ತುಂಗಭದ್ರಾ ನದಿಗೆ ಅಣೆಕಟ್ಟು ಕಟ್ಟಿದ್ದು ಅದು ಎಲ್ಲಿದೆ? ಹಂಪಿಯಂಥ ಸಂಸ್ಕೃತಿಯ ಆಗರವಾದ ಸ್ಥಳ ಯಾವ ದೇಶದಲ್ಲಿದೆ? ಇವೆಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ ಹೊಸಪೇಟೆ.

ಹೊಸಪೇಟೆಯ ನೀರಿಗೆ, ಮಣ್ಣಿಗೆ, ಭಾಷೆಗೆ, ಕಬ್ಬಿಣಕ್ಕೆ ಮುಖ್ಯವಾಗಿ ಕಬ್ಬಿಗೆ ವಿಶಿಷ್ಟ ಗುಣ ಇದೆ. ಈ ಗುಣ ಜಗತ್ತಿನಲ್ಲಿ ಬೇರೆ ಕಡೆ ಎಲ್ಲಿಯೋ ನೋಡಲು ಸಿಗದು. ನಗರದ ಪೂರ್ವಕ್ಕೆ ಹಂಪಿ, ವಿಜಯನಗರ ಸಾಮ್ರೋಜ್ಯದ ಅವಶೇಷಗಳು, ಪಶ್ಚಿಮಕ್ಕೆ ವಿವಿಧೋದ್ದೇಶ ಯೋಜನೆಯ ತುಂಗಭದ್ರಾ ಅಣೆಕಟ್ಟು, ದಕ್ಷಿಣಕ್ಕೆ ಕಬ್ಬಿಣ ಅದುರಿನ ನಿಕ್ಷೇಪ ಮತ್ತು ಜೋಳದರಾಶಿ ಗುಡ್ಡ ಹಾಗೂ ಉತ್ತರಕ್ಕೆ ಧರ್ಮದಬನ್ನಿ ಗುಡ್ಡದ ಬಳಿ ತುಂಗಭದ್ರಾ ನದಿ ಹರಿಯುತ್ತಿದೆ.

ಶ್ರೀ ಕೃಷ್ಣದೇವರಾಯ ತನ್ನ ತಾಯಿಯ ಗೌರವಾರ್ಥವಾಗಿ ನಾಗಲಾಪುರ ಕಟ್ಟಿಸಿದ (ಈಗಿನ ನಾಗೇನಹಳ್ಳಿ). ಅದರ ಉಪ- ನಗರವಾಗಿ ಬೆಳೆಯಿತು 'ಹೊಸಾ..ಪ್ಯಾಟಿ' ಬರ ಬರುತ್ತಾ ಅದು 1813ರಲ್ಲಿ “ಹೊಸಪೇಟೆ“ ಎಂಬ ಹೆಸರು ಪಡೆಯಿತು. ಅದಕ್ಕೀಗ ಇನ್ನೂರು ವರ್ಷಗಳ ಇತಿಹಾಸ. ನಗರಕ್ಕೆ ರೈಲು ಸಂಪರ್ಕ 1884ರಲ್ಲಿ ಬಂತು. ಹೊಸಪೇಟೆ ಯಲ್ಲಿ 1920ರಲ್ಲಿ ರೊದ್ದ ಶ್ರೀನಿವಾಸರಾಯರ ಅಧ್ಯಕ್ಷತೆ ಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. 1934ರಲ್ಲಿ ಮಹಾತ್ಮ ಗಾಂಧೀಜಿಯವರು ನಗರಕ್ಕೆ ಕೆಲವು ಗಂಟೆಗಳ ಕಾಲ ಭೇಟಿ ನೀಡಿದ್ದರು. ನಗರದ ಕಾಸ್ಮೋಪಾಲಿಟಿನ್ ಕ್ಲಬ್ 1900 ಸ್ಥಾಪನೆಯಾಗಿ ಇಂದಿಗೂ ಚಾಲ್ತಿಯಲ್ಲಿದೆ.

ಶತಮಾನೋತ್ಸವ ಆಚರಿಸಿಕೊಂಡಿರುವ ಕೆಲವೇ ಕೆಲವೂ ನಗರಸಭೆಗಳಲ್ಲಿ ಹೊಸಪೇಟೆಯೂ ಒಂದು. ಈ ನಗರಕ್ಕೆ ಮಹಾತ್ಮಾ ಗಾಂಧೀಜಿ, ನೆಹರೂ, ಬಾಬು ರಾಜೇಂದ್ರಪ್ರಸಾದ್, ಇಂದಿರಾ ಗಾಂಧಿ, ದೇವರಾಜ ಅರಸ್ ಮುಂತಾದ ನಾಯಕರು, ದ.ರಾ.ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಮುಂತಾದ ಸಾಹಿತಿಗಳು ಭೇಟಿ ನೀಡಿದ್ದಾರೆ.

ಖ್ಯಾತ ಸಾಹಿತಿ ಚಿದಾನಂದ ಮೂರ್ತಿಯವರು ಬೆಂಗಳೂರಿ ಂದ ಹೊಸಪೇಟೆವರೆಗೆ ಕಾಲು ನಡಿಗೆಯಲ್ಲಿ ಬಂದಿದ್ದಾರೆ. ಕನ್ನಡದ ಎಂಟನೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರು ಆರು ವರ್ಷಗಳ ಕಾಲ ಇಲ್ಲಿ ನಡೆದಾಡಿದ್ದಾರೆ.  ಕಳೆದ ನೂರು ವರ್ಷಗಳಲ್ಲಿ ಹೊಸಪೇಟೆ ನಗರ ಹಂತ ಹಂತವಾಗಿ ಬೆಳೆದು ವಿವಿಧ ರಂಗದ ಜನ ಜೀವನಕ್ಕೆ ನೆರವಾಗಿದೆ. ಇದಕ್ಕೆಲ್ಲಾ ನಗರಸಭಾ ಸದಸ್ಯರು, ಅಧ್ಯಕ್ಷರು, ಶಾಸಕರು, ತೆರಿಗೆದಾರರು, ನಾಗರಿಕರು, ಮುಖ್ಯವಾಗಿ ಜಾಡಮಾಲಿಗಳು ಕಾರಣ.

ದೇಶದಲ್ಲಿಯೇ ಪ್ರಥಮ ಬಾರಿಗೆ ಹೊಸಪೇಟೆಯಲ್ಲಿ ರಾಷ್ಟ್ರಮಟ್ಟದ 'ನಗರಾಭಿವೃದ್ಧಿ ವಿಚಾರ ಸಂಕಿರಣ“ ನಡೆದದ್ದು ಒಂದು ದಾಖಲೆಯಾಗಿದೆ. ಹೊಸಪೇಟೆಯ ಮೀರ್ ಆಲಮ್ ಟಾಕೀಸ್‌ನಲ್ಲಿ ಅದು ನಡೆದಿತ್ತು. ಆಗ ನಡೆದ ವಿಚಾರಗಳು ಇಂದು ಫಲ ಕೊಡುತ್ತಿವೆ ಎಂದರೆ ತಪ್ಪಾಗದು. ಒಟ್ಟಿನಲ್ಲಿ ನಮ್ಮ ನಗರಕ್ಕೆ ಸುಸಜ್ಜಿತ ನಗರಸಭಾ ಕಾರ್ಯಾಲಯ ಸಿದ್ಧವಾಗಿದೆ. ಇದು ನಮ್ಮ ನಗರದ ಕಾರ್ಯ ಚಟುವಟಿಕೆ ಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗಿದೆ.

ಈ ಸುಸಜ್ಜಿತ ಕಾರ್ಯಾಲಯ ನಿರ್ಮಾಣವಾಗಲು ಕಾರಣವಾದವರು ಮುಖ್ಯವಾಗಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ನಗರಸಭಾ ಅಧ್ಯಕ್ಷ ಅಮ್ಜದ್ ಇನ್ನೂ ಮುಂತಾದವರು. ಆಯ್ಕೆಯಾಗಿರುವ ನೂತನ ನಗರಸಭೆಯ ನವ ನಾಯಕರು ನಾಗರಿಕರಿಗೆ ನೆಮ್ಮದಿ ನೀಡುವಂತಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.