ಬಾಗಲಕೋಟೆ: ‘ಇಂಗಳೆಮಾರ್ಗ’ ಕನ್ನಡ ಚಲನಚಿತ್ರ ಶೀಘ್ರದಲ್ಲೇ ರಾಜ್ಯದ 20ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ, ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಬಾಗಲಕೋಟೆಯ ಘನಶ್ಯಾಮ ಭಾಂಡಗೆ ತಿಳಿಸಿದರು.
ನವನಗರದಲ್ಲಿ ಸೋಮವಾರ ನಡೆದ ‘ಇಂಗಳೆಮಾರ್ಗ’ ಚಿತ್ರದ ನಾಯಕಿಯರಾದ ರೂಪಿಕಾ ಮತ್ತು ಶಿವಾನಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ. ಸರಜೂ ಕಾಟ್ಕರ್ ಅವರ ‘ದೇವರಾಯ’ ಕಾದಂಬರಿ ಆಧಾರಿತ ‘ಇಂಗಳೆಮಾರ್ಗ’ವನ್ನು ವೈಷ್ಣೋದೇವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಬೆಳಗಾವಿ, ಹುಕ್ಕೇರಿ, ಚಿಚಖಂಡಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.
ವಿಶಾಲ್‌ರಾಜ್ ನಿರ್ದೇಶನ, ಸತೀಶ್ ಕುಲಕರ್ಣಿ ಅವರ ಸಾಹಿತ್ಯ ಮತ್ತು ವಿ. ಮನೋಹರ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಸುಚೇಂದ್ರ ಪ್ರಸಾದ್, ನಾಯಕಿಯಾಗಿ ಶಿವಾನಿ ಮತ್ತು ಮುಖ್ಯ ಪಾತ್ರದಲ್ಲಿ ರೂಪಿಕಾ, ಶಂಕರ್ ಅಶ್ವಥ್, ರಮೇಶ್ ಪಂಡಿತ್ ಮತ್ತಿತರರು ಮನೋಜ್ಞವಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ‘ಇಂಗಳೆಮಾರ್ಗ’ ಚಿತ್ರ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದರು ಎಂದು ತಿಳಿಸಿದರು.
ಬೆಳಗಾವಿ ಮತ್ತು ಮಹಾರಾಷ್ಟ್ರ ಭಾಗದಲ್ಲಿ ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಮೂಢನಂಬಿಕೆ ವಿರುದ್ಧ ಹಾಗೂ ದಲಿತ ಪರವಾದ ಹೋರಾಟ ರೂಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಸಮಕಾಲೀನ ಹೋರಾಟಗಾರ ದೇವರಾಯ ಕುರಿತಾದ ‘ಇಂಗಳೆಮಾರ್ಗ’ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಲಾತ್ಮಕ ಚಿತ್ರವಾಗಿದೆ ಎಂದರು.
‘ಹೆಮ್ಮೆಯ ಸಂಗತಿ’: ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರೂಪಿಕಾ ಮಾತನಾಡಿ, ‘ನಿರ್ಮಾಪಕ ಘನಶ್ಯಾಮ ಭಾಂಡಗೆ ಅಂಗವಿಕಲರಾಗಿದ್ದರೂ ಅದನ್ನೇ ಸವಾಲಾಗಿ ಸ್ವೀಕರಿಸಿ ವಿವಿಧ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಚಿತ್ರ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.
‘ಈಗಾಗಲೇ 12 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದು, ಇಂಗಳೆಮಾರ್ಗದಲ್ಲಿನ ನನ್ನ ವಿಭಿನ್ನ ಪಾತ್ರ ಹೆಚ್ಚು ಖುಷಿ ನೀಡಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಈ ಚಿತ್ರದಲ್ಲಿ ಇದೆ. ಇಂತಹ ಕಲಾತ್ಮಕ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ’ ಎಂದರು.
‘ಎಲ್ಲರೂ ನೋಡಿ’: ಚಿತ್ರದ ನಾಯಕಿ ಶಿವಾನಿ ಮಾತನಾಡಿ, ‘ಕಲಾತ್ಮಕ ಚಿತ್ರದಲ್ಲಿ ನಟಿಸುವುದು ನಿನಗೆ ಒಪ್ಪುವುದಿಲ್ಲ, ಸಾಧ್ಯವೂ ಇಲ್ಲ ಎಂದು ಕೆಲವರು ನನಗೆ ಛೇಡಿಸಿದ್ದರು. ಆದರೆ, ‘ಇಂಗಳೆಮಾರ್ಗ’ದಲ್ಲಿ ಕಸ್ತೂರಿಬಾಯಿ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿರುವ ಸಮಾಧಾನವಿದೆ’ ಎಂದು ಹೇಳಿದರು.
‘ಈ ಚಿತ್ರವನ್ನು ಉತ್ತರ ಕರ್ನಾಟಕದ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ’ ಎಂದರು.
ನಟಿಯರಿಗೆ ಸನ್ಮಾನ
ನಟಿಯರಾದ ರೂಪಿಕಾ ಮತ್ತು ಶಿವಾನಿ ಅವರನ್ನು ನಿರ್ಮಾಪಕ ಘನಶ್ಯಾಮ ಭಾಂಡಗೆ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಭಾಂಡಗೆ, ಆನಂದ ಭಾಂಡಗೆ, ಪೂಜಾ, ಮೀನಾಕ್ಷಿ ಬೋಸ್ಲೆ, ಶಶಿಪ್ರಭಾ ಮತ್ತು ಕರುಣಾ ಸಾಗರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.