
ಎಂ.ಪಿ.ಪ್ರಕಾಶ್ ವೇದಿಕೆ (ಕಂಪ್ಲಿ): ‘ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಬದುಕಿಲ್ಲ. ಒಂದು ವೇಳೆ ಇಂದು ಕನ್ನಡ ಬದುಕಿದ್ದರೆ ಅದು ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ’ ಎಂದು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಸಾಹಿತಿ ನಾ.ಡಿಸೋಜಾ ಅಭಿಪ್ರಾಯಪಟ್ಟರು.
 
 ಇಲ್ಲಿನ ಎಂ.ಪಿ.ಪ್ರಕಾಶ್ ವೇದಿಕೆಯಲ್ಲಿ ಶನಿವಾರ ನಡೆದ 17ನೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
 
 ‘ಬೆಂಗಳೂರನ್ನು ಆಂಗ್ಲ ಭಾಷೆ ಆಕ್ರಮಿಸಿಕೊಂಡಿದೆ. ಇಂಗ್ಲಿಷ್ ಭಾಷೆ ಬೇಡವಂತಲ್ಲ. ಆದರೆ ಇಂಗ್ಲಿಷ್ ಬದುಕು ಬೇಡ’ ಎಂದು ಅವರು ಹೇಳಿದರು.
 
 ‘ಸಮ್ಮೇಳನಗಳಿಂದ ಭಾಷೆಯ ಅಭಿವೃದ್ಧಿಯಾಗಲಿ ಅಥವಾ ಉಳಿವಾಗಲಿ ಸಾಧ್ಯವಿಲ್ಲ. ಭಾಷೆ ಉಳಿದು ಅಭಿವೃದ್ಧಿಯಾಗಬೇಕಾದರೆ ಅದರ ಬಳಕೆಯಾಗಬೇಕು. ಈ ಕಾರಣದಿಂದ ಪ್ರತಿಯೊಬ್ಬರು ಕನ್ನಡದ ಪುಸ್ತಕಗಳನ್ನ ಹಾಗೂ ಕನ್ನಡದ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಬೇಕು. ಮೊಬೈಲ್ ಸಂಖ್ಯೆಗಳನ್ನು ಕನ್ನಡದಲ್ಲಿ ಹೇಳುವ ರೂಢಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು’ ಎಂದು ಡಿಸೋಜಾ ಸಲಹೆ ಮಾಡಿದರು.
 
 ‘ರಾಜ್ಯದಲ್ಲಿ ವಾಸಿಸುವ ಅನ್ಯ ಭಾಷಿಕರೊಂದಿಗೆ ಅವರ ಭಾಷೆಯಲ್ಲಿಯೇ ಮಾತನಾಡುವ ಮನೋಭಾವ ಕಡಿಮೆಯಾಗಬೇಕು. ಅವರಿಗೆ ಕನ್ನಡ ಕಲಿಸಿ ನಂತರ ಅಗತ್ಯವಿದ್ದರೆ ಅವರ ಭಾಷೆಯಲ್ಲಿ ಮಾತನಾಡಿ’ ಎಂದರು.
 
 ಆಶಯ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕದ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ, ‘ಸಾಹಿತ್ಯ ಸಮ್ಮೇಳನಗಳು ನೆಲದ ಸಂಸ್ಕೃತಿಯನ್ನು ಅವಲೋಕಿಸುವ ಸಂಭ್ರಮದ ಕ್ಷಣಗಳು. ಈವರೆಗೂ ಕೇವಲ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನಗಳು ಈಗ ಕಂಪ್ಲಿಯಂತಹ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ’ ಎಂದರು.
 
 ‘ಅನ್ಯ ಭಾಷೆಗಳ ದಾಳಿ ನಡುವೆ ಕನ್ನಡ ಉಳಿಯುವಂತಾಗಲು ಭಾಷೆಯ ಬಳಕೆ ಅಗತ್ಯ. ಅಲ್ಲದೆ ಕನ್ನಡ ಭಾಷೆಯನ್ನು ಬಳಸುವ ಜನರ ರಕ್ಷಣೆಯೂ ಅಷ್ಟೇ ಮುಖ್ಯ’ ಎಂದು ಅವರು ಹೇಳಿದರು.
 
 ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಮಾತನಾಡಿ, ‘ಸಮಾಜಕ್ಕೆ ಸಾಹಿತಿಗಳ ಮಾರ್ಗದರ್ಶನ ಅಗತ್ಯ. ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಇಂಥ ಸಾಂಸ್ಕೃತಿಕ ಹಬ್ಬಗಳ ಆಚರಣೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಿದೆ’ ಎಂದು ಹೇಳಿದರು. 
 
 ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕ.ಮ.ಹೇಮಯ್ಯ ಸ್ವಾಮಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 
 ಸಮಾರಂಭದಲ್ಲಿ ಕೆ.ಶ್ರೀನಿವಾಸರಾವ್, ಪಿ. ಮೂಕಯ್ಯಸ್ವಾಮಿ, ಎಂ.ಸುಧೀರ್, ಸಯ್ಯದ್ ಉಸ್ಮಾನ್, ಅಗಳಿ ಪಂಪಾಪತಿ, ವಿ.ವಿದ್ಯಾಧರ, ವೆಂಕಟರಾಮ ರಾಜು, ಕಟ್ಟೆ ಅಯ್ಯಪ್ಪ, ಎ.ಸಿ. ದಾನಪ್ಪ, ಸಿ.ಆರ್.ಹನುಮಂತ, ಕ.ಮನೋಹರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
 
 ಶಿಷ್ಟಾಚಾರ ಉಲ್ಲಂಘನೆ?
ಸಾಹಿತ್ಯ ಸಮ್ಮೇಳನ ಸೇರಿದಂತೆ ಯಾವುದೇ ಕಾರ್ಯಕ್ರಮಗಳ ಉದ್ಘಾಟನೆಯಾದ ನಂತರ ಉದ್ಘಾಟಕರು ಮಾತನಾಡುವುದು ಸಂಪ್ರದಾಯ. ಅದರಂತೆ ಶನಿವಾರ ಇಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜಾ ಅವರು ಮಾತನಾಡಬೇಕಿತ್ತು. ಆದರೆ, ಯಾರದೊ ಒತ್ತಡಕ್ಕೆ ಮಣಿದ ಪರಿಷತ್ತಿನ ಜಿಲ್ಲಾ ಘಟಕದ ಹಾಗೂ ಸಮ್ಮೇಳನ ಸಮಿತಿಯವರು ಉದ್ಘಾಟನೆಯಾದ ತಕ್ಷಣ ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟು ಶಿಷ್ಟಾಚಾರ ಉಲ್ಲಂಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.