ADVERTISEMENT

‘ದಾಂಪತ್ಯ ಜೀವನದುದ್ದಕ್ಕೂ ಶಿಸ್ತು ಪಾಲಿಸಿ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 5:31 IST
Last Updated 10 ಡಿಸೆಂಬರ್ 2013, 5:31 IST

ಹಗರಿಬೊಮ್ಮನಹಳ್ಳಿ: ‘ಆಡಂಬರದಿಂದ ಮದುವೆ ಮಾಡಿಕೊಂಡು ಸಾಲದ ಸುಳಿಗೆ ಸಿಲುಕದೇ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗಿ ದಾಂಪತ್ಯ ಜೀವನದುದ್ದಕ್ಕೂ ಶಿಸ್ತು ಸಂಯಮ ಪಾಲಿಸಿಕೊಂಡು ಗಳಿಕೆಯಲ್ಲಿ ಉಳಿತಾಯ ಮಾಡುವ ಮೂಲಕ ಬಡ ಸಮುದಾಯ ಮಾದರಿಯಾಗಬೇಕು’ ಎಂದು ಹನುಮನಹಳ್ಳಿಯ ಸಮಾಜ ಸೇವಕ ಕೆ.ಶಿವಮೂರ್ತಿ ಸಲಹೆ ನೀಡಿದರು.

ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನೆರಳು ಪತ್ರಿಕೆಯ 17ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ಯ ಸಹಯೋಗದಲ್ಲಿ ನವೋದಯ ಯುವಕ ಮಂಡಳಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನ ಸಾಮಾನ್ಯರು ಕೂಡಾ ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಮೆರೆಸಲು ಆಡಂಬರ ಪ್ರದರ್ಶಿ­ಸುತ್ತಾ ಅದ್ದೂರಿ ವಿವಾಹ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿ ಪರಿತಪಿಸುತ್ತಿದ್ದಾರೆ. ಇದು ಕೊನೆಯಾಗಬೇಕು, ಸರಳ ಸಾಮೂಹಿಕ ಆದರ್ಶ ವಿವಾಹಗಳನ್ನು ಮಾಡಿಕೊಳ್ಳುವ ಮೂಲಕ ಬದುಕನ್ನು ಸುಂದರಗೊಳಿಸಬೇಕು ಎಂದು ಆಶಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಸುರೇಶ್‌ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಾಮೂಹಿಕ ವಿವಾಹಗಳ ಮೂಲಕ ಸಾವಿರಾರು ವಧು–ವರರಿಗೆ ಕಂಕಣ­ಭಾಗ್ಯ ಒದಗಿಸಿ ಹೆಣ್ಣು ಹೆತ್ತವರ ಹೊಟ್ಟೆಯನ್ನು ತಣ್ಣಗೆ ಮಾಡುವ ಕಾರ್ಯವನ್ನು ಸಂಪಾದಕ ಬುಡ್ಡಿ ಬಸವರಾಜ್‌ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಸಾನಿಧ್ಯ ವಹಿಸಿದ್ದ ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ  ಸ್ವಾಮೀಜಿ ಆಶೀರ್ವಚನ ನೀಡಿ, ವರದಕ್ಷಿಣೆಯಂತಹ ಸಮಸ್ಯೆ ಇನ್ನೂ ಜೀವಂತ­ವಾಗಿದೆ. ಆದ್ದರಿಂದ ಸಾಮೂಹಿಕ ವಿವಾಹ­ಗಳಿಂದ ಮಧ್ಯಮ ವರ್ಗದವರು ಸ್ವಲ್ಪ ಮಟ್ಟಿಗಾ­ದರೂ ನೆಮ್ಮದಿ ಪಡೆಯುವಂತಾಗಿದೆ’ ಎಂದರು.

ಪತ್ರಕರ್ತ ಬುಡ್ಡಿ ಬಸವರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸಮಾರಂಭದಲ್ಲಿ ನೂತನ ದಾಂಪತ್ಯ ಬದುಕಿಗೆ ಮುನ್ನುಡಿ ಬರೆದ 23 ಜೋಡಿ ನೂತನ ವಧು–ವರರಿಗೆ ಶುಭ ಹಾರೈಸಿದರು. ಕೃಷ್ಣಾಪುರ ಗ್ರಾಮದ ಶಹಾಪುರ ನಿಂಗಪ್ಪ ಹುಟ್ಟು ಮೂಗಿಯಾದ ಎಣ್ಣಿ ದ್ಯಾಮವ್ವಳಿಗೆ ಕೈಹಿಡಿದ ಹಿನ್ನಲೆಯಲ್ಲಿ ಪ್ರಶಂಸೆಗೆ ಪಾತ್ರರಾದರು. ಈ ಜೋಡಿಯನ್ನು ಸನ್ಮಾನಿಸಲಾಯಿತು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್‌, ಮುಖಂಡರಾದ ಹೆಗ್ಡಾಳು ರಾಮಣ್ಣ, ರಾರಾಳುತಾಂಡಾ ಎಚ್‌.ಕೃಷ್ಣಾನಾಯ್ಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಪೂರ್‍ಯಾನಾಯ್ಕ, ಉಪಾಧ್ಯಕ್ಷೆ ಕುರುಬರ ನಾಗರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬೆಣಕಲ್‌ ಪ್ರಕಾಶ್‌, ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್‌.ಮಹೇಶ್‌, ವೇದಿಕೆಯ ನಗರ ಘಟಕ ಅಧ್ಯಕ್ಷ ಎಸ್‌.ಸಂದೀಪ್‌, ಎಐಕೆಎಸ್‌ ಮುಖಂಡ ಎ.ಅಡಿವೆಪ್ಪ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ನಿರ್ದೇಶಕ ಬಿ.ಗಂಗಾಧರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುಕ್ಕ ಹನಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ಶಾರದಾ ಪ್ರಾರ್ಥನಾ ಗೀತೆ ಹಾಡಿದರು. ಬಿ.ಹುಲುಗಪ್ಪ, ಗಾಳೇಶ್‌ ಮತ್ತು ನೇಕಾರ್‌ ಸಂಜೀವಕುಮಾರ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.