ADVERTISEMENT

‘ಯಾವ ಪಕ್ಷಕ್ಕೂ ಸಿದ್ಧಾಂತವಿಲ್ಲ’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2014, 11:19 IST
Last Updated 29 ಮಾರ್ಚ್ 2014, 11:19 IST
ಹೊಸಪೇಟೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ಅಭ್ಯರ್ಥಿ ಶಿವಕುಮಾರ ಮಾಳಗಿ ಶುಕ್ರವಾರ ಚುನಾವಣಾ ಪ್ರಚಾರದ ರ್‍ಯಾಲಿ ನಡೆಸಿದರು.
ಹೊಸಪೇಟೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ಅಭ್ಯರ್ಥಿ ಶಿವಕುಮಾರ ಮಾಳಗಿ ಶುಕ್ರವಾರ ಚುನಾವಣಾ ಪ್ರಚಾರದ ರ್‍ಯಾಲಿ ನಡೆಸಿದರು.   

ಹೊಸಪೇಟೆ: ‘ಗಣಿ ಹಗರಣದಲ್ಲಿ ಜಿಲ್ಲೆಯ ಪ್ರತಿಷ್ಠತ ಕೈಗಾರಿಕೆ ಜೆಎಸ್‌­ಡಬ್ಲ್ಯೂ ಕಂಪೆನಿಯ ಪಾತ್ರ ಹೆಚ್ಚಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.­ಯಡಿಯೂರಪ್ಪ ಕಂಪೆನಿಯ ಕುತಂತ್ರಕ್ಕೆ ಬಲಿಯಾದರು’ ಎಂದು ಜನ ಸಂಗ್ರಾಮ ಪರಿಷತ್ತಿನ ಕಾರ್ಯದರ್ಶಿ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.

ಆಮ್‌ ಆದ್ಮಿ ಪಾರ್ಟಿಯ ಅಭ್ಯರ್ಥಿ ಶಿವಕುಮಾರ ಮಾಳಗಿ ಅವರ ಪರ ಪ್ರಚಾರ ರ್‍ಯಾಲಿಯಲ್ಲಿ ಶುಕ್ರವಾರ ಪಾಲ್ಗೊಂಡು ನಂತರ ಸುದ್ದಿಗಾರ­ರೊಂದಿಗೆ ಅವರು ಮಾತನಾಡಿದರು.

‘ಗಣಿ ಹಗರಣದಲ್ಲಿ ಯಡಿಯೂರಪ್ಪ ಅವರ ಪಾತ್ರ ಅಷ್ಟಕಷ್ಟೆ. ಆದರೆ, ಹಗರಣದಲ್ಲಿ ಭಾಗಿಯಾಗಿದ್ದ ಜೆಎಸ್‌ಡಬ್ಲ್ಯೂ ಕಂಪೆನಿ ತನ್ನ ಹುಳುಕನ್ನು ಮುಚ್ಚಿಹಾಕಲು ಅಡ್ಡ ಮಾರ್ಗ ಹಿಡಿಯಿತು. ಅಲ್ಲದೆ ಹಗರಣ­ದಲ್ಲಿ ಯಡಿಯೂರಪ್ಪ ಅವರನ್ನು ವ್ಯವಸ್ಥಿತ­ವಾಗಿ ಸಿಕ್ಕಿಸುವಲ್ಲಿ ಯಶಸ್ವಿಯಾಯಿತು’ಎಂದರು.

‘10 ವರ್ಷಗಳಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಭೂ ಮಾಫಿಯಾ ದಂಧೆಗೆ ಇಳಿದಿದ್ದು, 2ಜಿ ಹಗರಣ­ಕ್ಕಿಂತಲೂ ದೊಡ್ಡ ಮೊತ್ತದ ಹಗರಣ ಈ ಕ್ಷೇತ್ರದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಬ್ರಹ್ಮಿಣಿ ಉಕ್ಕು ಕಂಪೆನಿ ಆರಂಭ­ವಾಗದಿದ್ದರೂ ಅದರ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕಬಳಿಸಲಾಗಿದೆ. ಕೈಗಾರಿಕೆ ಹೆಸರಿನಲ್ಲಿ ಅಂದಾಜು 11.90 ಲಕ್ಷ ಎಕರೆ ಭೂಮಿಯನ್ನು ಎಲ್ಲ ಸರ್ಕಾರಗಳು ಕೊಳ್ಳೆ ಹೊಡೆದಿವೆ.

2ಜಿ ಹಗರಣದಲ್ಲಿ  ₨1.76 ಲಕ್ಷ ಕೋಟಿ ಅವ್ಯವಹಾರ­ವಾಗಿದ್ದರೆ, ಇದರಲ್ಲಿ ಅಂದಾಜು ₨ 2 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂದು ವಿ.ಬಾಲಸುಬ್ರಮಣ್ಯಂ ಹಾಗೂ ಎ.ಟಿ. ರಾಮಸ್ವಾಮಿ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ವರದಿ ಸಲ್ಲಿಕೆಯಾಗಿ ನಾಲ್ಕು ವರ್ಷ ಕಳೆದರೂ ಯಾವ ಸರ್ಕಾರವೂ ಈ ಬಗ್ಗೆ ಕ್ರಮ ಜರುಗಿಸುವ ಎದೆಗಾರಿಕೆ ತೋರಿಲ್ಲ’ ಎಂದು ದೂರಿದರು.

‘ರಾಜ್ಯದ ಖನಿಜ, ಕಲ್ಲು ಹಾಗೂ ರೈತರ ಭೂಮಿಯನ್ನು ಕೊಳ್ಳೆ ಹೊಡೆದಿ­ರುವುದರಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಹಿಂದೆ ಬಿದ್ದಿಲ್ಲ. ಎಲ್ಲ ಪಕ್ಷಗಳು ಅಧಿಕಾರ­ದಲ್ಲಿದ್ದಾಗಲೂ ಈ ಹಗರಣಗಳು ನಡೆದಿವೆ. ಯಾವ ಪಕ್ಷಗಳಿಗೂ ಸಿದ್ಧಾಂತವಿಲ್ಲ’ ಎಂದು ಕುಟುಕಿದರು.
‘ಈ ಎಲ್ಲ ಕಾರಣಗಳಿಂದ ಮತದಾರರ ಮುಂದಿರುವ ಆಯ್ಕೆ ಎಂದರೆ ಆಮ್ ಆದ್ಮಿ ಪಾರ್ಟಿ ಮಾತ್ರ. ಜಿಲ್ಲೆಯ ಮತದಾರರು ಶಿವಕುಮಾರ ಮಾಳಗಿ ಅವರನ್ನು ಬೆಂಬಲಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಅಭ್ಯರ್ಥಿ ಶಿವಕುಮಾರ ಮಾಳಗಿ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಒಬ್ಬ ‘ಕಿಂದರ ಜೋಗಿ’ ಇದ್ದ ಹಾಗೆ. ಪಕ್ಷಾಂತರ ಮಾಡುವುದನ್ನು ಬಿಟ್ಟರೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿಲ್ಲ. ಆದರೆ, ಚುನಾವಣೆ ಬಂದಾಗ ಮಾತ್ರ ಅವರು ಜಿಲ್ಲೆಯ ಸಮಸ್ಯೆಗಳ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡು­ತ್ತಾರೆ.

ತಾವು ಅಧಿಕಾರದಲ್ಲಿ­ದ್ದಾಗ ಸುಮ್ಮನಿದ್ದು, ಈಗ ಮಾತನಾಡು­ತ್ತಿ­ದ್ದಾರೆ’ ಎಂದು ಲೇವಡಿ ಮಾಡಿದರು. ‘ಬಿ.ಶ್ರೀರಾಮುಲು ಅವರು ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯ­ವನ್ನು ದುರುಪಯೋಗ ಪಡಿಸಿಕೊಳ್ಳುತ್ತಿ­ದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಸಮಾಜದ ವಿದ್ಯಾರ್ಥಿಗಳಿಗೆ ಒಂದೆ ಒಂದು ಶಿಕ್ಷಣ ಸಂಸ್ಥೆಯನ್ನಾಗಲಿ ಅಥವಾ ವಿದ್ಯಾರ್ಥಿ ನಿಲಯವನ್ನಾಗಲಿ ನಿರ್ಮಿಸಿದ ನಿದರ್ಶನಗಳಿಲ್ಲ’ ಎಂದು ಆರೋಪಿಸಿದರು.

‘ಬಿ.ಶ್ರೀರಾಮುಲು ಅವರನ್ನು ಪರಪ್ಪನ ಅಗ್ರಹಾರದಿಂದಲೆ ನಿಯಂತ್ರಿಸ­ಲಾಗುತ್ತಿದೆ. ಯಾವುದೆ ಸ್ವಂತಿಕೆಯಿಲ್ಲದ ಅವರನ್ನು ಜಿಲ್ಲೆಯ ಮತದಾರರು ತಿರಸ್ಕರಿಸಬೇಕು’ ಎಂದರು.

ಕಾರ್ಯಕರ್ತರಾದ ಟಿ.ರಾಮಪ್ಪ, ಡಾ.ವಿಜಯಮಹಾಂತೇಶ್‌, ಎಂ. ಕುಮಾರ­­ಸ್ವಾಮಿ, ಮಲ್ಲನಗೌಡ, ಜೆ. ವೀರನ­ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.