ಬಳ್ಳಾರಿ: ಸಾಧನೆ ಮನುಷ್ಯನನ್ನು ದೊಡ್ಡವರನ್ನಾಗಿಸುತ್ತದೆ. ಪ್ರತಿಯೊಬ್ಬರಲ್ಲೂ ಒಂದಿಲ್ಲ ಒಂದು ರೀತಿಯ ಸಾಮರ್ಥ್ಯವನ್ನು ದೇವರು ನೀಡಿದ್ದು, ಅದನ್ನು ಒರೆಗೆ ಹಚ್ಚಿ ಸಾಧನೆಯ ಬೆಳಕು ಚೆಲ್ಲಬೇಕು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ರಾಘವಕಲಾ ಮಂದಿರದಲ್ಲಿ ಮಂಗಳವಾರ ಸಂಜೆ ಶ್ರೀ ಪುಟ್ಟರಾಜ ಕವಿ-ಗವಾಯಿಯವರ ಸೇವಾ ಸಂಘ ಏರ್ಪಡಿಸಿದ್ದ ಪಂ. ಪುಟ್ಟರಾಜ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರತಿಯೊಬ್ಬರೂ ತಮ್ಮಲ್ಲಿ ಅಡಗಿರುವ ಕಲೆಯನ್ನು ಸ್ವಯಂ ಪ್ರೇರಣೆಯಿಂದ ಹೊರ ಹಾಕಿ, ಸಾಧನೆಯತ್ತ ಮುಖ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದು ಅವರು ಹೇಳಿದರು.
ಅನೇಕರು ಪ್ರತಿಭಾವಂತರಾಗಿದ್ದರೂ ಸಾಧನೆಯ ಹಾದಿಯನ್ನು ಕಂಡುಕೊಳ್ಳದೇ ಜೀವನವನು್ನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಹುಟ್ಟಿನಿಂದ ಅಂಧರಾದರೂ, ತಮ್ಮ ಒಳಗಣ್ಣಿನಿಂದ ಸಂಗೀತದ ಹಾದಿ ಗುರುತಿಸಿಕೊಂಡ ಪುಟ್ಟರಾಜ ಗವಾಯಿಯವರು ಅನೇಕರನ್ನು ಸಾಧನೆಯ ಪಥದತ್ತ ಕೊಂಡೊಯ್ದಿದ್ದಾರೆ. ಸರ್ಕಾರವು ಪುಟ್ಟರಾಜ ಕವಿ ಗವಾಯಿ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಶ್ರೀಗಳು ಸರ್ಕಾರಗಳಲ್ಲಿ ಕೋರಿದರು.
ಹಿಂದೂಸ್ತಾನಿ ಗಾಯಕ ಧಾರವಾಡದ ಪಂಡಿತ್ ಸೋಮನಾಥ ಮರಡೂರು ಅವರಿಗೆ 2014ನೇ ಸಾಲಿನ ಪಂ. ಪುಟ್ಟರಾಜ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಗದುಗಿನ ಶ್ರೀವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಕಾರ್ಯಕ್ರಮ ಉದ್ಘಾಟಿಸಿದರು. ವಾಮದೇವ ಮಹಾಂತ ಶಿವಾಚಾರ್ಯರು, ಕಲ್ಯಾಣ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯರು, ಪಂಪಯ್ಯ ಶಾಸ್ತ್ರಿ, ಶಿವರುದ್ರ ತಾತ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಗುತ್ತಿಗನೂರು ವಿರೂಪಾಕ್ಷಗೌಡ, ಎಸ್.ಗುರುಲಿಂಗನಗೌಡ, ದರೂರು ಪುರುಷೋತ್ತಮಗೌಡ, ಎರ್ರಂಗಳಿ ತಿಮ್ಮಾರೆಡ್ಡಿ, ರೂಪನಗುಡಿ ಬಸವರಾಜ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಬಂಡ್ರಾಳ್ ಮೃತ್ಯುಂಜಯ ಸ್ವಾಮಿ ಸ್ವಾಗತಿಸಿದರು. ಸಿದ್ಧರಾಮ ಕಲ್ಮಠ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.