ADVERTISEMENT

ಆಮ್ಲಜನಕ ಘಟಕ ಮೇಲೆ ಹೆಚ್ಚು ನಿಗಾ

24 ಗಂಟೆ ಕಣ್ಣಿಡಲು ಪ್ರತ್ಯೇಕವಾಗಿ ಸಿಬ್ಬಂದಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 15:08 IST
Last Updated 17 ಮೇ 2021, 15:08 IST
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯ ಆಮ್ಲಜನಕ ಘಟಕದ ಬಳಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಆಮ್ಲಜನಕ ಲಭ್ಯತೆ ಕುರಿತು ಕ್ಷಣಕ್ಷಣದ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯ ಆಮ್ಲಜನಕ ಘಟಕದ ಬಳಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಆಮ್ಲಜನಕ ಲಭ್ಯತೆ ಕುರಿತು ಕ್ಷಣಕ್ಷಣದ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಯಲ್ಲಿನ ಆಮ್ಲಜನಕ ಘಟಕಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಎಂತಹ ಪರಿಸ್ಥಿತಿಯಲ್ಲೂ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಿಂದ ಸಾಕಷ್ಟು ಸಾವು ನೋವು ಉಂಟಾಗಿತ್ತು. ಶನಿವಾರ ನಗರದ ಸರ್ಕಾರಿ ಆಸ್ಪತ್ರೆಯ ಘಟಕದಲ್ಲಿ ಆಮ್ಲಜನಕ ಮುಗಿಯುವ ಹಂತಕ್ಕೆ ಬಂದಿತ್ತು. ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರ ಸಮಯಪ್ರಜ್ಞೆಯಿಂದ ಸಕಾಲಕ್ಕೆ ಆಮ್ಲಜನಕ ಪೂರೈಸಿ ಆಗಬಹುದಾಗಿದ್ದ ದೊಡ್ಡ ದುರಂತ ತಪ್ಪಿ ಹೋಗಿದೆ.

ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಎಲ್ಲ ತಾಲ್ಲೂಕುಗಳಲ್ಲಿ ಸಮರ್ಪಕ ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಂಡಿದೆ. ಆಮ್ಲಜನಕ ಲಭ್ಯತೆ ಮೇಲೆ ದಿನದ 24 ಗಂಟೆ ಕಣ್ಣಿಡಲು ಎಲ್ಲ ಘಟಕಗಳ ಬಳಿ ಸಿಬ್ಬಂದಿಯನ್ನು ನಿಯೋಜಿಸಿದೆ.

ADVERTISEMENT

ನಗರದ ಸರ್ಕಾರಿ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕದಲ್ಲಿ ಜಂಬೋ ಸಿಲಿಂಡರ್‌ಗಳ ಜತೆಗೆ ಹೆಚ್ಚುವರಿ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತುರ್ತು ಸೇವೆ, ಶಸ್ತ್ರ ಚಿಕಿತ್ಸೆ ವಿಭಾಗ, ಕೋವಿಡ್‌ ವಾರ್ಡ್‌, ಸಾಮಾನ್ಯ ವಾರ್ಡ್‌ಗಳಿಗೆ ಆ ಘಟಕಗಳ ಮೂಲಕವೇ ಆಮ್ಲಜನಕ ಪೂರೈಕೆಯಾಗುತ್ತಿದೆ. ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮೇಲಿಂದ ಮೇಲೆ ಆಮ್ಲಜನಕ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

‘ಎಲ್ಲ ತಾಲ್ಲೂಕುಗಳಲ್ಲಿ ಅಗತ್ಯ ಆಮ್ಲಜನಕಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ಜಂಬೋ ಸಿಲಿಂಡರ್‌ ಕೂಡ ಇಟ್ಟುಕೊಳ್ಳಲಾಗಿದೆ. ಘಟಕಗಳ ಮೇಲೆ ನಿಗಾ ಇಡುವುದಕ್ಕಾಗಿಯೇ ಪ್ರತ್ಯೇಕವಾಗಿ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.