ADVERTISEMENT

ಪದವಿ ಕಾಲೇಜಿಗೆ ಆಗ್ರಹಿಸಿ 35 ಕಿ.ಮೀ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 13:27 IST
Last Updated 17 ಆಗಸ್ಟ್ 2022, 13:27 IST
ತಂಬ್ರಹಳ್ಳಿಯಲ್ಲಿ ಪದವಿ ಕಾಲೇಜು ಸ್ಥಾಪಿಸುವಂತೆ ಆಗ್ರಹಿಸಿ ಗ್ರಾಮದ ವಿದ್ಯಾರ್ಥಿಗಳು, ಗ್ರಾಮಸ್ಥರು ತಂಬ್ರಹಳ್ಳಿಯಿಂದ ಹೊಸಪೇಟೆ ವರೆಗೆ ಬುಧವಾರ ಪಾದಯಾತ್ರೆ ನಡೆಸಿದರು–ಪ್ರಜಾವಾಣಿ ಚಿತ್ರ
ತಂಬ್ರಹಳ್ಳಿಯಲ್ಲಿ ಪದವಿ ಕಾಲೇಜು ಸ್ಥಾಪಿಸುವಂತೆ ಆಗ್ರಹಿಸಿ ಗ್ರಾಮದ ವಿದ್ಯಾರ್ಥಿಗಳು, ಗ್ರಾಮಸ್ಥರು ತಂಬ್ರಹಳ್ಳಿಯಿಂದ ಹೊಸಪೇಟೆ ವರೆಗೆ ಬುಧವಾರ ಪಾದಯಾತ್ರೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಪದವಿ ಕಾಲೇಜು ಸ್ಥಾಪಿಸುವುದು, ಎರಡನೇ ಹಂತದ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿಯ ಗ್ರಾಮಸ್ಥರು, ವಿದ್ಯಾರ್ಥಿಗಳು ಬುಧವಾರ 35 ಕಿ.ಮೀ ಪಾದಯಾತ್ರೆ ನಡೆಸಿದರು.

ಬೆಳಿಗ್ಗೆ 6.30ಕ್ಕೆ ತಂಬ್ರಹಳ್ಳಿಯಿಂದ ಆರಂಭಗೊಂಡ ಪಾದಯಾತ್ರೆ ಮಧ್ಯಾಹ್ನ ಮರಿಯಮ್ಮನಹಳ್ಳಿ ತಲುಪಿತು. ಅಲ್ಲಿಂದ ಹೊಸಪೇಟೆ ವರೆಗೆ ರಾಷ್ಟ್ರೀಯ ಹೆದ್ದಾರಿ 50 ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಪಾದಯಾತ್ರೆಗೆ ಅವಕಾಶ ಕಲ್ಪಿಸಲಿಲ್ಲ. ಅಲ್ಲಿಂದ ನಗರ ಹೊರವಲಯದ ವರೆಗೆ ವಾಹನಗಳಲ್ಲಿ ಬಂದು, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆಯಲ್ಲಿ ಬಂದು ಡಿ.ಸಿ. ಅನಿರುದ್ಧ್‌ ಶ್ರವಣ್‌ ಪಿ. ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಂಬ್ರಹಳ್ಳಿಯಲ್ಲಿ ಪದವಿ ಕಾಲೇಜು ಸ್ಥಾಪಿಸಬೇಕೆನ್ನುವುದು ಆರು ವರ್ಷಗಳ ಬೇಡಿಕೆಯಾಗಿದೆ. ಇದುವರೆಗೆ ಯಾರೊಬ್ಬರೂ ಸ್ಪಂದಿಸಿಲ್ಲ. ಅನಿವಾರ್ಯವಾಗಿ ಪಾದಯಾತ್ರೆ ನಡೆಸಿ, ಗಮನ ಸೆಳೆಯಲಾಗಿದೆ. ಶೀಘ್ರ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳದಿದ್ದಲಿ ಬರುವ ದಿನಗಳಲ್ಲಿ ಮತ್ತಷ್ಟು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

25 ವರ್ಷಗಳ ಹಿಂದೆ ತಂಬ್ರಹಳ್ಳಿಯಲ್ಲಿ ಪಿ.ಯು. ಕಾಲೇಜು ಸ್ಥಾಪನೆಯಾಗಿದೆ. ನೂರಾರು ವಿದ್ಯಾರ್ಥಿಗಳು ಅಲ್ಲಿ ಓದುತ್ತಿದ್ದಾರೆ. ಪದವಿ ಕಾಲೇಜು ಸ್ಥಾಪಿಸಿದರೆ ತಂಬ್ರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಅನುಕೂಲವಾಗುತ್ತದೆ. ಪದವಿ ಕಾಲೇಜು ಶಿಕ್ಷಣಕ್ಕೆ ದೂರದ ಊರುಗಳಿಗೆ ಹೋಗಬೇಕಿರುವುದರಿಂದ ಅನೇಕರು ಶಿಕ್ಷಣವನ್ನೇ ಮೊಟಕುಗೊಳಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾಲೇಜು ಸ್ಥಾಪಿಸುವುದು ಬಹಳ ಅಗತ್ಯ ಎಂದು ತಿಳಿಸಿದರು.

ಗ್ರಾಮದಲ್ಲಿ ಎರಡನೇ ಹಂತದ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಇದರಿಂದ ಶೇ 70ರಷ್ಟು ರೈತರಿಗೆ ಪ್ರಯೋಜನವಾಗುತ್ತದೆ. ಈ ಸಂಬಂಧ ಏಳು ಸಾವಿರಕ್ಕೂ ಹೆಚ್ಚು ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಪಾದಯಾತ್ರೆಯ ಸಂಚಾಲಕ ಅಕ್ಕಿ ತೋಟೇಶ್‌, ಗ್ರಾಮ ಪಂಚಾಯಿತಿ ಸದಸ್ಯರಾದ ಮೈಲಾರ ಶಿವಕುಮಾರ, ಹರಿಜನ ದೊಡ್ಡಬಸಪ್ಪ, ಮುಖಂಡರಾದ ಟಿ. ವೆಂಕೋಬಪ್ಪ, ಹೆಗ್ಡಾಳ್‌ ರಾಮಣ್ಣ, ದೊಡ್ಡಬಸಪ್ಪ, ಸುರೇಶ್‌, ದೇವಿಪ್ರಸಾದ್‌, 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.