ADVERTISEMENT

371ನೇ ಕಲಂಗೆ ತಿದ್ದುಪಡಿ: ಕಾಂಗ್ರೆಸ್ ಹರ್ಷ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 7:58 IST
Last Updated 19 ಡಿಸೆಂಬರ್ 2012, 7:58 IST

ಬಳ್ಳಾರಿ: ಹೈದರಾಬಾದ್ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಸಂಬಂಧ ಮಂಗಳವಾರ ಲೋಕಸಭೆಯಲ್ಲಿ ಈ ಕುರಿತ `ಜೆ' ಮಸೂದೆಯನ್ನು ಮಂಡಿಸಿರುವುದಕ್ಕೆ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ವಿದರ್ಭ, ಮರಾಠವಾಡಾ ಮಾದರಿಯ ಅಭಿವೃದ್ಧಿ ಹಾಗೂ ತೆಲಂಗಾಣ ಮಾದರಿಯ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಒಳಗೊಂಡ ವಿಶೇಷ ಸ್ಥಾನಮಾನ ಕಲ್ಪಿಸಲಯ ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಅಡ್ಡಿ ಉಂಟು ಮಾಡಿದ್ದರಿಂದ ಸಮಗ್ರ ಸೌಲಭ್ಯ ಕಲ್ಪಿಸಲಿರುವ ಈ ಮಸೂದೆಯ ಮಂಡನೆಗೆ ವಿಳಂಬವಾಗಿತ್ತು. ಹೈದರಾಬಾದ್ ಕರ್ನಾಟಕದ ಬೀದರ್, ಗುಲ್ಬರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಉತ್ತಮ ಮಾದರಿಯಲ್ಲೇ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ತಿದ್ದುಪಡಿ ನಂತರ ಈ ಭಾಗದ ಅಭಿವೃದ್ಧಿಗೂ ಸಾಕಷ್ಟು ಹಣ ಬಿಡುಗಡೆಯಾಗಲಿದ್ದು, ರಾಜ್ಯ ಸರ್ಕಾರ ಆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ.ಆಯಾ ಹಣಕಾಸು ವರ್ಷದಲ್ಲಿ ಬಳಕೆಯಾಗದ ಅನುದಾನವು ಕೇಂದ್ರ ಸರ್ಕಾರಕ್ಕೆ ಮರಳಿ ಹೋಗದೆ, ಮುಂದಿನ ವರ್ಷ ಬಳಕೆ ಮಾಡಿಕೊಳ್ಳಲು ಅವಕಾಶ ದೊರೆಯುವಂತೆಯೇ ಕಾನೂನು ರೂಪಿಸಲಾಗಿದೆ. ರಾಜ್ಯಪಾಲರ ಮಾರ್ಗದರ್ಶನದಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ರೆಡ್ಡಿ ಹರ್ಷ: ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ದತ್ತಾತ್ರೇಯ ರೆಡ್ಡಿ ಅವರೂ ತಿದ್ದುಪಡಿ ತರುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಸಂವಿಧಾನದ 371ನೇ ಕಲಂ ಮಂಡಿಸಿರುವುದು ಅಭಿನಂದನೀಯ ಎಂದು ತಿಳಿಸಿದ್ದಾರೆ.

`ಜನ ಸಮುದಾಯದ ಕನಸು ನನಸಾಗಿದೆ'
ಹೊಸಪೇಟೆ
: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ   371 ಕಲಂಗೆ ಅಂಗೀಕರಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಈ ಭಾಗದ ಜನಸಮುದಾಯಗಳ ಕನಸನ್ನು ನನಸು ಮಾಡಿದೆ ಎಂದು ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ರವೀಂದ್ರ ತಿಳಿಸಿದ್ದಾರೆ.

ಮೊದಲಿನಿಂದಲೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸುತ್ತಿದ್ದ ಹೈದ್ರಾಬಾದ್ ಕರ್ನಾಟಕದ ಗುಲ್ಬರ್ಗ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿಯ ನಾಗರೀಕರ ಸಾಮಾಜಿಕ ಭದ್ರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ 371ನೇ  ಕಲಂನ್ನು ಜಾರಿಗೊಳಿಸಿ ದಿಟ್ಟ ಹೆಜ್ಜೆ ಇಟ್ಟಿದೆ. ವಿಧೆಯಕವನ್ನು ಅಂಗೀಕರಿಸುವಲ್ಲಿ ಪಕ್ಷಾತೀತವಾಗಿ ಶ್ರಮವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.