ADVERTISEMENT

371ನೇ ಕಲಂ ತಿದ್ದುಪಡಿ: ಹೈಕ ಅಭಿವೃದ್ಧಿ ಪೂರಕ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 8:35 IST
Last Updated 7 ಆಗಸ್ಟ್ 2012, 8:35 IST

ಹೂವಿನಹಡಗಲಿ: ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ 371ನೇ ಕಲಂ  ತಿದ್ದುಪಡಿ ಜಾರಿ ಅವಶ್ಯವಿತ್ತು. ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ ಕಲಂ ತಿದ್ದುಪಡಿಗೆ ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ರವೀಂದ್ರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳಿಂದ ಹತ್ತಾರು ಸಂಘಟನೆಗಳು  ಹೋರಾಟ ಮಾಡಿರುವುದರ ಫಲ ಇದಾಗಿದೆ. ಹೈ.ಕ. ಜನತೆಯ ಬಹುದಿನದ ಬೇಡಿಕೆಯಾದ 371ನೇ ಕಲಂ ಜಾರಿಗೊಳಿಸಿ ಸಮಗ್ರ ಅಭಿವೃದ್ಧಿಗೆ ಬದ್ಧರಾಗಬೇಕಾಗಿದೆ ಎಂದರು.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಬಳ್ಳಾರಿ ಜಲ್ಲೆಯನ್ನು ಕೈಬಿಟ್ಟಿದ್ದರಿಂದ ಜಿಲ್ಲೆಯ ಹೋರಾಟ ಸಮಿತಿಯ ಮುಖಂಡರಾದ ಸಿರಿಗೇರಿ ಪನ್ನರಾಜ ಹಾಗೂ ಹೈ.ಕ. ಹೋರಾಟಗಾರರು ಬಳ್ಳಾರಿ ಜಿಲ್ಲೆಯನ್ನು ಕೈಬಿಡದಂತೆ ಸರ್ಕಾರದ ಗಮನವನ್ನು ಸೆಳೆದಿದ್ದರು ಎಂದು ನುಡಿದರು.

ಪಕ್ಕದ ಹರಪನಹಳ್ಳಿ ತಾಲ್ಲೂಕನ್ನು ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಸೇರಿಸುವಂತೆ ಮನವಿ ಮಾಡಲು ವಿನಂತಿಸಿದೆವು. ಆದರೆ ಬಿಜೆಪಿಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸ್ಪಂದಿಸಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಎಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಲೇಜಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಬೇರೆ ಕಾಲೇಜಿಗೆ ವರ್ಗಾವಣೆಯನ್ನು ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಂತವರ ವಿರುದ್ಧ ಪ್ರಗತಿಪರ ಸಂಘಟನೆಗಳ ಜೊತೆಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರಪ್ಪ, ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಯುವ ಕಾಂಗ್ರೆಸ್ ಅಧ್ಯಕ್ಷ ಬಾಹುಬಲಿ ಪಾಟೀಲ್, ಮುಖಂಡರಾದ ಅರವಳ್ಳಿ ವೀರಣ್ಣ, ಅಟವಾಳಿಗಿ ಕೊಟ್ರೇಶ, ಜ್ಯೋತಿಮಲ್ಲಣ್ಣ. ತಾ.ಪಂ. ಸದಸ್ಯ ಪ್ರಕಾಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.