ಬಳ್ಳಾರಿ: ‘ಬಳ್ಳಾರಿಯಲ್ಲಿ ನಡೆಯಲಿರುವ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹40 ಕೋಟಿ ಅನುದಾನವನ್ನು ಸರ್ಕಾರದಿಂದ ತಂದು ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮನವಿ ಮಾಡಿದ್ದಾರೆ.
ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲಾ ಸಂಸದರು, ಶಾಸಕರು, ಚುನಾಯಿತ ಜನಪ್ರತಿನಿಧಿಗಳು, ಮಠಾಧೀಶರು, ಸಂಘ ಸಂಸ್ಥೆಗಳು ಸಮ್ಮೇಳನ ಯಶಸ್ವಿಯಾಗಿ ನಡೆಸಲು ಉತ್ಸುಕರಾಗಿದ್ದಾರೆ’ ಎಂದು ಹೇಳಿದ್ದಾರೆ.
‘ಸಮ್ಮೇಳನಕ್ಕೆ ₹40 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾಧ್ಯಮದ ಮೂಲಕ ತಿಳಿಸಿರುತ್ತಾರೆ. ಆದರೆ, ಅಷ್ಟು ಅನುದಾನ ನೀಡಬಾರದೆಂದು ಮಂಡ್ಯ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜಯಪ್ರಕಾಶ ಗೌಡ, ಸಂಗಡಿಗರು, ಬೆಂಗಳೂರಿನ ಕೆಲ ಸಾಹಿತಿಗಳು ಮತ್ತು ಕಸಾಪದ ಸದಸ್ಯರಲ್ಲದ ಕೆಲ ಸಂಘಟನೆಗಳ ಮುಖ್ಯಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ಮಂಡ್ಯದಲ್ಲಿ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 8-9 ಲಕ್ಷ ಜನ ಭಾಗವಹಿಸಿದ್ದಾರೆಂಬ ಮಾಹಿತಿ ಪರಿಷತ್ತಿಗೆ ಇದೆ. ಮಂಡ್ಯದಲ್ಲಿ ಅಂದಾಜು ₹29 ಕೋಟಿ ವೆಚ್ಚವಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಚೆಲುವರಾಯಸ್ವಾಮಿ ಮತ್ತು ಸ್ವಾಗತ ಸಮಿತಿಯ ಕೋಶ್ಯಾಧ್ಯಕ್ಷ, ಮಂಡ್ಯ ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ 67 ವರ್ಷಗಳ ನಂತರ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಹಾಗೂ ಆಂಧ್ರ ಮತ್ತು ತೆಲಂಗಾಣದ ಗಡಿಯಾಚೆ ವಾಸಿಸುತ್ತಿರುವ ಕನ್ನಡಿಗರು ಸೇರಿ ಅಂದಾಜು 12-13 ಲಕ್ಷ ಜನ ಬರುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ.
‘ಕಸಾಪ ಅಧ್ಯಕ್ಷರು ಹಿಂದಿನ ಸಮ್ಮೇಳನಗಳ ಅನುಭವದಲ್ಲಿ ₹40 ಕೋಟಿ ಖರ್ಚಾಗಬಹುದೆಂದು ಅಂದಾಜಿಸಿ ಸರ್ಕಾರಕ್ಕೆ ಕ್ರಿಯಾ ಯೋಜನೆಯ ಮೂಲಕ ಅನುದಾನವನ್ನು ಕೇಳುವವರಿದ್ದಾರೆ. ಪರಿಷತ್ತಿನ ಮನವಿಯನ್ನು ಸರ್ಕಾರ ಪುರಸ್ಕರಿಸುತ್ತದೆ ಎನ್ನುವ ವಿಶ್ವಾಸ ಹೊಂದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
‘ಸಮ್ಮೇಳನ ನಡೆಯುವ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಜಿಲ್ಲಾಧಿಕಾರಿಗಳು ಸರ್ಕಾರದ ನಿಯಮದಂತೆ ಹಣಕಾಸಿನ ನಿರ್ವಹಣೆ ಮಾಡಿ ಸರ್ಕಾರಿ ಲೆಕ್ಕಪತ್ರ ಪರಿಶೋಧಕರಿಂದ ಪರಿಶೀಲಿಸಿ ಲೆಕ್ಕಪತ್ರಗಳನ್ನು ಮಂಡಿಸುತ್ತಾರೆ. ಈ ಬಗ್ಗೆ ಯಾರು ಅನುಮಾನವಿಟ್ಟು ಕೊಳ್ಳುವುದು ಬೇಡ’ ಎಂದು ಅವರು ಸಲಹೆ ನೀಡಿದ್ದಾರೆ.
‘ಸಮ್ಮೇಳನ ನಂತರ ಅನುದಾನದ ಹಣ ಉಳಿಕೆಯಾದರೆ ಆ ಅನುದಾನವನ್ನು ಗಡಿ ಜಿಲ್ಲೆಯಲ್ಲಿ ಕನ್ನಡದ ಅಭಿವೃದ್ಧಿಗೆ ಬಳಸಬಹುದು ಅಥವಾ ಕೇಂದ್ರ ಸಾಹಿತ್ಯ ಪರಿಷತ್ತು ನಿರ್ದೇಶಿಸಲ್ಪಡುವ ವಿಧಾಯಕ ಕನ್ನಡ ಕಾರ್ಯ ಚಟುವಟಿಕೆಗಳಿಗೆ ಆ ಹಣವನ್ನು ಸದ್ವಿನಿಯೋಗ ಮಾಡಲಾಗುವುದು’ ಎಂದು ನಿಷ್ಠಿ ರುದ್ರಪ್ಪ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.