ADVERTISEMENT

ಹಂಪಿ ಕನ್ನಡ ವಿ.ವಿ.: ಕಾಯ್ದೆ ಮೀರಿ ₹50 ಕೋಟಿ ಕಾಮಗಾರಿ!

ಕನ್ನಡ ವಿ.ವಿ.: ಲೋಕಾಯುಕ್ತದಿಂದ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಫೆಬ್ರುವರಿ 2022, 21:10 IST
Last Updated 6 ಫೆಬ್ರುವರಿ 2022, 21:10 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಮಲ್ಲಿಕಾ ಎಸ್‌.ಘಂಟಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅವಧಿಯಲ್ಲಿ (2015ರಿಂದ 2019) ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ₹50.86 ಕೋಟಿ ಮೊತ್ತದ ಕಾಮಗಾರಿ, ಖರೀದಿ ಮಾಡಿದ್ದರು ಎಂದು ಲೋಕಾಯುಕ್ತ ಸರ್ಕಾರಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ತಿಳಿಸಿದೆ.

ಲೋಕಾಯುಕ್ತವು ಉನ್ನತ ಶಿಕ್ಷಣ ಇಲಾಖೆಗೆ ಬರೆದ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 2017ರ ದೂರಿನ ಮೇರೆಗೆ ವಿಸ್ತೃತ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿರುವ ಲೋಕಾಯುಕ್ತದ ಪ್ರಕಾರ, ಸರ್ಕಾರದಿಂದ ಬಿಡುಗಡೆಯಾದ ₹77.84 ಕೋಟಿ ಅನುದಾನದಲ್ಲಿ ₹50.86 ಕೋಟಿ ಮೊತ್ತದ ಕಾಮಗಾರಿ ಮತ್ತು ಖರೀದಿಗಳಲ್ಲಿ ಕೆಟಿಪಿಪಿ ಕಾಯ್ದೆ, ನಿಯಮಗಳ ಉಲ್ಲಂಘನೆಯಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

2017ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ₹36 ಕೋಟಿ ಭ್ರಷ್ಟಾಚಾರ ನಡೆದಿದ್ದು, ಅಂದಿನ ಕುಲಪತಿ ಮಲ್ಲಿಕಾ ಘಂಟಿ, ಕುಲಸಚಿವ ಡಿ.ಪಾಂಡುರಂಗಬಾಬು ಮತ್ತಿತರರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಕೆಟಿಪಿಪಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕೆಂದು ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಸೂಪರಿಟೆಂಡೆಂಟ್‌ ಎಚ್‌.ಎಂ. ಸೋಮನಾಥ ಎಂಬುವರು ಲೋಕಾಯು
ಕ್ತಕ್ಕೆ ದೂರು ಸಲ್ಲಿಸಿದ್ದರು. ಸೋಮನಾಥ ಕೊಟ್ಟಿರುವ ದೂರಿಗಿಂತ ಹೆಚ್ಚು ಅನುದಾನ ದುರುಪಯೋಗವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ADVERTISEMENT

ಜಾಹೀರಾತು ನೀಡದೇ, ಇ–ಟೆಂಡರ್ ಕರೆಯದೇ ಕಟ್ಟಡ ಕಾಮಗಾರಿ, ವಸ್ತುಗಳನ್ನು ಖರೀದಿಸಿದ್ದರು. ಕೋಟ್ಯಂತರ ಮೌಲ್ಯದ ಕಾಮಗಾರಿಗಳಿಗೆ ಟೆಂಡರ್‌ ಕರೆಯದೇ ತುರ್ತು ಕಾಮಗಾರಿ ಎಂದು ನೆಪವೊಡ್ಡಿ ₹5 ಲಕ್ಷದ ಬಿಡಿ ಬಿಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರು. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದೂ ದೂರಿನಲ್ಲಿ ತಿಳಿಸಿದ್ದರು.

ನಿಯಮ ಉಲ್ಲಂಘಿಸಿದ್ದಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರು. ಕಟ್ಟಡ ಸಲಹಾ ಸಮಿತಿ ಸದಸ್ಯರು, ತಾಂತ್ರಿಕ ವಿಭಾಗದ ಎ.ಇ.ಇ., ಜೆ.ಇ, ಹಣಕಾಸು ಅಧಿಕಾರಿ ಸಂಪೂರ್ಣ ಜವಾಬ್ದಾರರಾಗುತ್ತಾರೆ. ಈ ಬಗ್ಗೆ ಆಡಳಿತಾತ್ಮಕ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಷ್ಟದ ಹಣವನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.