ADVERTISEMENT

ಹೊಸಪೇಟೆ: ಕೃಷಿ ಇಲಾಖೆಯಲ್ಲಿ ಶೇ 50ರಷ್ಟು ಹುದ್ದೆ ಖಾಲಿ

ರೈತರಿಗೆ ಮಾರ್ಗದರ್ಶನ ಮಾಡುವ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳೇ ಇಲ್ಲ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಜೂನ್ 2022, 19:30 IST
Last Updated 8 ಜೂನ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ಶೇ 50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ.

ಅದರಲ್ಲೂ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಕೃಷಿ ಇಲಾಖೆಯಲ್ಲಿ ಮಹತ್ವದ ಪಾತ್ರವನ್ನು ಇವರೇ ನಿರ್ವಹಿಸುತ್ತಾರೆ. ತಳಮಟ್ಟದಲ್ಲಿ ರೈತರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಾರೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರ, ಬೆಳೆ ವಿಮೆ ಸೇರಿದಂತೆ ಇತರೆ ಮಾಹಿತಿ ನೀಡುತ್ತಾರೆ. ಆದರೆ, ಆ ಹುದ್ದೆಗಳನ್ನು ತುಂಬದ ಕಾರಣ ರೈತರು ಪ್ರತಿಯೊಂದು ವಿಷಯಕ್ಕೂ ಮೇಲಧಿಕಾರಿಗಳನ್ನು ಸಂಪರ್ಕಿಸುವುದು, ಅವರ ಕಚೇರಿಗಳಿಗೆ ಅಲೆದಾಡುವುದು ತಪ್ಪಿಲ್ಲ.

ಪ್ರತಿ ವರ್ಷ ಕೃಷಿ ಇಲಾಖೆಯಲ್ಲಿ ಹೊಸ ಹೊಸ ಯೋಜನೆಗಳು ಸೇರ್ಪಡೆಯಾಗುತ್ತಿವೆ. ಆದರೆ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಿಬ್ಬಂದಿಯೇ ಇಲ್ಲ. ಹಾಲಿ ಇರುವ ಸಿಬ್ಬಂದಿ ಮೇಲೆ ಹೆಚ್ಚಿನ ಕಾರ್ಯದೊತ್ತಡ ಇದೆ. ಹೀಗಿರುವಾಗ ಇನ್ನಷ್ಟು ಯೋಜನೆಗಳು ಸೇರ್ಪಡೆಯಾಗುತ್ತಿರುವುದರಿಂದ ಯಾವ ಯೋಜನೆಗಳ ಬಗ್ಗೆ ಹೆಚ್ಚಿನ ಗಮನ ವಹಿಸಲು ಸಾಧ್ಯವಾಗುತ್ತಿಲ್ಲ.
‘ಡಿ‘ ಗ್ರುಪ್‌ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾಮಟ್ಟದಲ್ಲಿಯೇ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ, ಅದಕ್ಕಿಂತ ಮೇಲಿನ ಹುದ್ದೆಗಳನ್ನು ತುಂಬುವ ಅಧಿಕಾರ ಸರ್ಕಾರಕ್ಕಷ್ಟೇ ಇದೆ.

ADVERTISEMENT

18 ರೈತ ಸಂಪರ್ಕ ಕೇಂದ್ರಗಳು: ಜಿಲ್ಲೆಯಲ್ಲಿ ಒಟ್ಟು 18 ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ತಾಲ್ಲೂಕಿಗೆ ಒಬ್ಬ ಸಹಾಯಕ ನಿರ್ದೇಶಕರಿದ್ದಾರೆ. ಕೇಂದ್ರ ಕಚೇರಿಯಲ್ಲಿ ಜಂಟಿ ಕೃಷಿ ನಿರ್ದೇಶಕ, ನಾಲ್ವರು ಸಹಾಯಕ ನಿರ್ದೇಶಕರಿದ್ದಾರೆ.

ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ಬೀಜ, ನ್ಯೂಟ್ರಿಯೆಂಟ್ಸ್‌ ವಿತರಿಸಲಾಗುತ್ತದೆ. ಹೊಸ ತಾಂತ್ರಿಕತೆ, ನೀರಾವರಿ, ಉಪಕರಣ, ಬೆಳೆ ಪದ್ಧತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆದರೆ, ಆ ಕೆಲಸ ಮಾಡುವವರೇ ಇಲ್ಲ. ಅದರಲ್ಲೂ ಮುಂಗಾರು ಹಂಗಾಮು ಬಂತೆಂದರೆ ಅಧಿಕಾರಿ, ಸಿಬ್ಬಂದಿ ವರ್ಗದ ಮೇಲೆ ಹೆಚ್ಚಿನ ಕಾರ್ಯ ಭಾರ ಸೃಷ್ಟಿಯಾಗುತ್ತದೆ. ಎಷ್ಟೋ ಸಲ ಅಧಿಕಾರಿ ವರ್ಗ ಹಾಗೂ ರೈತರ ನಡುವೆ ಜಟಾಪಟಿಗಳು ನಡೆದಿವೆ. ಹೀಗಿದ್ದರೂ ಸರ್ಕಾರ ಹುದ್ದೆ ತುಂಬಲು ಗಂಭೀರವಾಗಿಲ್ಲ.

173 ಮಂಜೂರಾದ ಹುದ್ದೆ: ಜಿಲ್ಲೆಗೆ ಒಟ್ಟು 173 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 76 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಇನ್ನುಳಿದ 97 ಹುದ್ದೆಗಳು ಖಾಲಿ ಉಳಿದಿವೆ. 39 ಕೃಷಿ ಅಧಿಕಾರಿ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 20 ತುಂಬಲಾಗಿದೆ. 54 ಮಂಜೂರಾದ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳಲ್ಲಿ 23 ಭರ್ತಿ ಮಾಡಲಾಗಿದೆ. 9 ಪ್ರಥಮ ದರ್ಜೆ, 14 ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮಂಜೂರಾಗಿವೆ. ಆದರೆ, ಕ್ರಮವಾಗಿ 4, 5 ಹುದ್ದೆಗಳನ್ನಷ್ಟೇ ತುಂಬಲಾಗಿದೆ. ಹೀಗೆ ಹೆಚ್ಚಿನ ಹುದ್ದೆಗಳು ಖಾಲಿ ಇರುವುದರಿಂದ ಇಲಾಖೆ ಸೊರಗಿದೆ. ಸಕಾಲಕ್ಕೆ ಜನರಿಗೆ ಸರ್ಕಾರದ ಯೋಜನೆಗಳ ಲಾಭ ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.