ADVERTISEMENT

ಬರಿಗೈಯಲ್ಲಿ ಕೆಂಡ ತೂರಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 8:52 IST
Last Updated 20 ಫೆಬ್ರುವರಿ 2018, 8:52 IST

ಕೂಡ್ಲಿಗಿ: ತಾಲ್ಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಬೊಗ್ಗಲು ಓಬಳೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಭಕ್ತರು ನಿಗಿ–ನಿಗಿ ಕೆಂಡವನ್ನು ಬರಿಗೈಯಲ್ಲಿ ಹಿಡಿದು ತೂರುತ್ತಾ ಅಗ್ನಿಕುಂಡವನ್ನು ತುಳಿದು ಭಕ್ತಿ ಪರಾಕಾಷ್ಠೆ ಮೆರೆದರು.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯನ್ನು ಸ್ಥಳೀಯರು ‘ಗುಗ್ಗರಿ ಹಬ್ಬ ಎಂದೂ ಕರೆಯುತ್ತಾರೆ. ಹಬ್ಬದ ಆರಂಭಕ್ಕೆ ಎಂಟು ದಿನಗಳ ಮೊದಲು ವ್ರತಗಳನ್ನು ಆಚರಿಸಲಾಗುತ್ತದೆ. ಶುಕ್ರವಾರ ಹಾಗೂ ಶನಿವಾರ ಕಾಸು ಮೀಸಲು, ಗಂಗಾ ಪೂಜೆ ಸಾಂಪ್ರದಾಯಿಕವಾಗಿ ನಡೆದವು.

ಕೆಂಡ ತೂರುವುದಕ್ಕೂ ಎರಡು ತಾಸು ಮೊದಲು ಕಟ್ಟಿಗೆ ಹಾಕಿ ಬೆಂಕಿ ಮಾಡಲಾಗಿತ್ತು. ಇತ್ತ ಹರಕೆ ಹೊತ್ತ ಭಕ್ತರು ಗಂಗಾ ಪೂಜೆಗೆ ಹೊರಡುತ್ತಿದ್ದಂತೆ ಗ್ರಾಮದಲ್ಲಿನ ವಿದ್ಯುತ್ ಸ್ಥಗಿತಗೊಳಿಸಿ, ಎಲ್ಲಾ ದೀಪಗಳನ್ನು ಆರಿಸಲಾಯಿತು.

ADVERTISEMENT

ನಂತರ ಓಬಳೇಶ್ವರ ಸ್ವಾಮಿಯ ಪೂಜಾರಿ ಕೆಂಡದ ಪೂಜೆ ಸಲ್ಲಿಸಿ, ರಾಶಿಯಲ್ಲಿನ ಕೆಂಡವನ್ನು ಬೊಗಸೆಯಿಂದ ಮಣ್ಣಿನ ಮಡಕೆಯಲ್ಲಿ ಹಾಕಿ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋದರು.

ಬಳಿಕ ಗಂಗಾ ಪೂಜೆಗೆ ಹೋಗಿದ್ದ ಕೆಂಡ ತೂರುವ ಹರಕೆ ಹೊತ್ತು ಉಪವಾಸವಿದ್ದ ಭಕ್ತರು, ಕುಣಿಯುತ್ತ ಬಂದು ಕೆಂಡವನ್ನು ಬೊಗಸೆಯಲ್ಲಿ ಹಿಡಿದು ಎರಚಲು ಆರಂಭಿಸಿದರು. ಪರಸ್ಪರ ಎರಚಾಡುತ್ತ ನೆರೆದಿದ್ದ ಭಕ್ತರತ್ತಲೂ ತೂರಿದರು. ಈ ವೇಳೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಅಂದಾಜು 20 ನಿಮಿಷಗಳ ಕಾಲ ನಡೆದ ಕೆಂಡ ತೂರಾಟದ ದೃಶ್ಯ ಕಗ್ಗತ್ತಲಿನಲ್ಲಿ ಕೆಂಡದ ಮಳೆಯಂತೆ ಭಾಸವಾಯಿತು. ಇಷ್ಟಾದರೂ ಯಾರಿಗೂ ಗಾಯಗಳು ಆಗದು ಎಂಬುದು ಅಚ್ಚರಿ ಹಾಗೂ ವಿಶೇಷ. ಕುರಿಹಟ್ಟಿ, ಕರಡಿಹಳ್ಳಿ, ಹುಲಿಕುಂಟೆ, ಭೀಮಸಮುದ್ರ, ಮಡಕಲಕಟ್ಟೆ, ಓಬಳಶೆಟ್ಟಿಹಳ್ಳಿ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.